ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಇದರ ಆಶ್ರಯದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ‘ಬಂಟ ಕಲಾ ಸಂಭ್ರಮ’ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 03-09-2023ರಂದು ನಡೆಯಲಿದೆ.
ಸ್ಪರ್ಧೆಯಲ್ಲಿ ಭಾರತದ ಪರಂಪರೆ, ಪುರಾಣ, ಇತಿಹಾಸ, ಸಾಮಾಜಿಕ, ಜನಪದ, ಸಂಸ್ಕೃತಿಯ ದೃಶ್ಯ ವಿಚಾರಗಳನ್ನು ರೂಪಕದ ಮೂಲಕ ಸಂಯೋಜನೆ ಮಾಡಬಹುದು. ನಿಗದಿತ ಸಮಯದಲ್ಲಿ ಯಾವುದೇ ವಿಷಯಗಳ ಕುರಿತು ನೃತ್ಯ, ಸಂಗೀತ, ರೂಪಕ, ನವ್ಯ ವೈಭವೀಕರಣದ ಜೊತೆಗೆ ಮೌಲ್ಯಯುತ ಸಂದೇಶ ಸಾರುವ ಅಪೂರ್ವ ಕಲಾ ಸಂಗಮವೇ ಭಾರತ ದರ್ಶನವಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ಪರ್ಧೆಯ ನಿಯಮಗಳು : ನಿಗದಿತ 20 ನಿಮಿಷಗಳ ಕಾಲಾವಕಾಶದಲ್ಲಿ ಪ್ರಹಸನ, ಸಮೂಹ ನೃತ್ಯ, ಉತ್ತಮ ಸಂದೇಶ ಒಳಗೊಂಡಂತ ಇತರ ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸಬೇಕು. ತಂಡಕ್ಕೆ 20+5 ನಿಮಿಷಗಳ ಅವಕಾಶ (ರಂಗಸಜ್ಜಿಕೆ ಒಳಪಡಿಸಿ). ಒಂದು ತಂಡದಲ್ಲಿ ಕನಿಷ್ಠ 25 ಜನ ಸ್ಪರ್ಧಾಳುಗಳು ಇರಬೇಕು. ವಯೋಮಿತಿಯ ನಿರ್ಬಂಧವಿಲ್ಲ, ಆದರೆ ಪ್ರತಿ ತಂಡದಲ್ಲಿ ಮಹಿಳೆಯ ಭಾಗವಹಿಸುವಿಕೆ ಕಡ್ಡಾಯ. ಯಾವುದೇ ಜಾತಿ, ಧರ್ಮ ಹಾಗೂ ದೈವ ದೇವರನ್ನು ನಿಂದಿಸುವ ವಿಚಾರಗಳು ಇರಬಾರದು. ಒಬ್ಬ ಸ್ಪರ್ಧಾಳುವಿಗೆ ಒಂದೇ ತಂಡದಲ್ಲಿ ಭಾಗವಹಿಸಲು ಅವಕಾಶ, ಒಂದು ಸಂಘದಿಂದ ಒಂದು ತಂಡ ಮಾತ್ರ ಪಾಲ್ಗೊಳ್ಳಬೇಕು. ಪ್ರದರ್ಶನದ ಸಂದರ್ಭ ವೇದಿಕೆಯಲ್ಲಿ ಬಂಟೇತರ ಸಮಾಜದವರು ಭಾಗವಹಿಸಿದಲ್ಲಿ ಅಂತಹ ತಂಡವನ್ನು ಅನರ್ಹಗೊಳಿಸಲಾಗುವುದು.
ಬಹುಮಾನ : ವಿಜೇತ ತಂಡಗಳಿಗೆ ಪ್ರಥಮ ರೂ. ಒಂದು ಲಕ್ಷ, ದ್ವಿತೀಯ ರೂ.ಎಪ್ಪತ್ತೈದು ಸಾವಿರ, ತೃತೀಯ ರೂ.ಐವತ್ತು ಸಾವಿರ ನಗದು ಬಹುಮಾನ ಪ್ರಶಸ್ತಿ, ಭಾಗವಹಿಸಿದ ಎಲ್ಲಾ ತಂಡಗಳಿಗೆ ತಲಾ ರೂಪಾಯಿ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಸ್ಪರ್ಧೆ ಫಲಿತಾಂಶವು ಪ್ರಹಸನ, ಸಮೂಹ ನೃತ್ಯ, ವೈವಿಧ್ಯತೆ, ಉತ್ತಮ ಸಂದೇಶ, ಒಟ್ಟು ಪ್ರಸ್ತುತಿಯನ್ನು ಒಳಗೊಂಡಿರುತ್ತದೆ.