ಕಟೀಲು : ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ವತಿಯಿಂದ ಹಿರೇಮಗಳೂರು ಕಣ್ಣನ್ ಜೊತೆ ಹರಟೆ ಕಾರ್ಯಕ್ರಮವು ದಿನಾಂಕ 10-09-2023ರ ಭಾನುವಾರದಂದು ಕಟೇಲಿನಲ್ಲಿ ನಡೆಯಿತು.
‘ಕನ್ನಡದ ಪೂಜಾರಿ’ ಖ್ಯಾತಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ “ಭಾರತ ದೇಶದ ಮಣ್ಣಿನ ಗುಣ ಶ್ರೇಷ್ಟವಾದುದು. ಜಗತ್ತಿಗೇ ಮಾರ್ಗದರ್ಶನ ಮಾಡಿದ ಸನಾತನ ಧರ್ಮದ ಮೇಲೆ ಪೆಟ್ಟು ಕೊಡುವ ಕೆಲಸ ಸರಿಯಾದುದಲ್ಲ. ಇಸ್ರೇಲ್ ನಿಂದ ನಮ್ಮೂರಿಗೆ ಸಂಸ್ಕೃತ ಕಲಿಯಲು ಬಂದವರು ನಾವು ಜ್ಞಾನ ಸಂಪಾದನೆಗಾಗಿ ಬಂದಿದ್ದೇವೆ ಎಂದಿದ್ದರು. ದ್ವೈತ, ಆದ್ವೈತ, ವಿಶಿಷ್ಟಾದ್ವೈತ ಸಿದ್ದಾಂತಗಳು ರಾದ್ದಾಂತಗಳಾಗಬಾರದು ಎಂದ ಕಣ್ಣನ್ ಇತ್ತೀಚಿಗೆ ನಮ್ಮ ಮನೆಯ ನಾಗರಿಕ ಸಂಸ್ಕೃತಿ ಹೇಗಿದೆಯೆಂದರೆ ಪದ್ಮಾವತಿ ನಿಲಯ ವೆಂಕಟೇಶ್ವರ ಪ್ರಸನ್ನ ತಂದೆ ತಾಯಿಯ ಅಶೀರ್ವಾದ ಎಂದೆಲ್ಲ ಹಾಕಿ “ನಾಯಿಗಳಿವೆ ಎಚ್ಚರಿಕೆ” ಎಂಬ ಅಪಸಂಸ್ಕೃತಿ ಬೋರ್ಡನ್ನೂ ನೇತು ಹಾಕುತ್ತೇವೆ. ಮುದ್ದಣ ಮನೋರಮೆಯರ ಸಾಹಿತ್ಯ ಬರೆದ ಕವಿ ಕಷ್ಟದಲ್ಲಿದ್ದ. ಆದರೆ ಅಂತಹ ಶ್ರೇಷ್ಟ ಸಾಹಿತ್ಯವನ್ನು ಮುಂದಿಟ್ಟು ಡಾಕ್ಟರೇಟ್ ಮಾಡಿದವರು ಎಷ್ಟೋ ಮಂದಿ ಇದ್ದಾರೆ. ಮುಳಿಯ ತಿಮ್ಮಪ್ಪಯ್ಯ, ಡಿವಿಜಿ ಮತ್ತು ಹುಯಿಳಗೋಳ ಹೀಗೆ ಸಾಹಿತ್ಯಕ್ಕಾಗಿ ಕನ್ನಡಕ್ಕಾಗಿ ಕೆಲಸ ಮಾಡದವರಿಲ್ಲ. ಆದರೆ ಅವರ ಕಾರ್ಯಗಳು ಅನುಪಮ ಸ್ಮರಣೀಯ ಎಂದರು. ಕನ್ನಡದ ಓದು ಬಳಕೆ ನಿರಂತರವಾಗಿರುವಂತೆ ಮಕ್ಕಳನ್ನು ಪ್ರೇರೇಪಿಸಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರೇಮಗಳೂರು ಕಣ್ಣನ್ ಅವರನ್ನು ಮೂಲ್ಕಿ ಕಸಾಪದ ವತಿಯಿಂದ ಗೌರವಿಸಲಾಯಿತು.
ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಮೂಲ್ಕಿ ಕಸಾಪದ ಮಿಥುನ ಕೊಡೆತ್ತೂರು, ಡಾ.ಪದ್ಮನಾಭ ಭಟ್ ಎಕ್ಕಾರು, ದೇವದಾಸ ಮಲ್ಯ ಮತ್ತು ಸಚ್ಚಿದಾನಂದ ಉಡುಪ ಉಪಾಸ್ಥಿತರಿದ್ದರು. ಪ್ರಕಾಶ್ ಆಚಾರ್ ಕನ್ನಡ ಹಾಡು ಹಾಡಿದರು. ಸಂತೋಷ್ ಉಡುಪ ವಂದಿಸಿದರು.