ಸುರತ್ಕಲ್ : ಕೃಷ್ಣಾಪುರ–ಕಾಟಿಪಳ್ಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 45ನೇ ಗಣೇಶೋತ್ಸವದ ಪ್ರಯುಕ್ತ ಕೃಷ್ಣಾಪುರ ಯುವಕ ಮಂಡಲವು ಕೇಂದ್ರ ಮೈದಾನದಲ್ಲಿ ಯಕ್ಷಗಾನ ಸ್ಪರ್ಧೆಯನ್ನು ಏರ್ಪಡಿಸಿತ್ತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಕಾಲೇಜು ಯಕ್ಷತಂಡಗಳ ಅಂತರ್ ಜಿಲ್ಲಾ, ಅಂತರ್ ಕಾಲೇಜು ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆಯು ದಿನಾಂಕ 10-09-2023ರಂದು ಜರಗಿತು.
ಈ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಉದ್ಘಾಟಿಸಿ ಮಾತನಾಡುತ್ತಾ “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಕಲೆಗಳ ಅಧ್ಯಯನ ಹಾಗೂ ಕಾರ್ಯ ವಿಸ್ತಾರಕ್ಕೆ ಮಹತ್ವ ನೀಡಲಾಗಿದ್ದು, ಯಕ್ಷ ಶಿಕ್ಷಣ ಪರಿಗಣನೆಗೆ ಸೂಕ್ತವಾಗಿದೆ. ಯಕ್ಷಗಾನ ಸರ್ವಾಂಗ ಸುಂದರ ಕಲೆ, ಕಲಾ ಪೋಷಣೆಗೆ ಪ್ರೇಕ್ಷಕರ ಪ್ರೋತ್ಸಾಹವು ಅಗತ್ಯ. ಪಟ್ಲ ಫೌಂಡೇಶನ್ ವತಿಯಿಂದ 37 ಶಾಲೆಗಳಲ್ಲಿ ಉಚಿತ ಯಕ್ಷ ಶಿಕ್ಷಣ ಪ್ರಾರಂಭಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ 15,000 ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುವ ಗುರಿಯಿದೆ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, “ಯಕ್ಷಗಾನ ಸಂಸ್ಕಾರ ನೀಡುವ ಕಲೆಯಾಗಿದೆ. ಸೇವಾ ಚಟುವಟಿಕೆಯ ಜತೆಗೆ ಕಲಾರಾಧನೆ ನಡೆಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದರು.
ಡಾ| ಅರವಿಂದ ಭಟ್ ಅವರು ಸಂಧರ್ಬೋಚಿತವಾಗಿ ಮಾತನಾಡಿದರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಇಡ್ಯಾ ಮಹಾಲಿಂಗೇಶ್ವರ ಭಜನ ಮಂಡಳಿ ಅಧ್ಯಕ್ಷ ಟಿ.ಎನ್. ರಮೇಶ್, ಯಕ್ಷನಂದನ ಪಣಂಬೂರು ಇದರ ಸಂಚಾಲಕ ಪಿ. ಸಂತೋಷ್ ಐತಾಳ್, ಶ್ರೀ ನಂದನೇಶ್ವರ ದೇವಸ್ಥಾನದ ಸಮಿತಿ ಸದಸ್ಯ ಪ್ರಸಿದ್ಧ ಹೊಸಬೆಟ್ಟು ಪಟ್ಲ ಫೌಂಡೇಶನ್ ಸುರತ್ಕಲ್ ವಿಭಾಗದ ಉಪಾಧ್ಯಕ್ಷರಾದ ಲೀಲಾಧರ್ ಶೆಟ್ಟಿ ಕಟ್ಲ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಜಗದೀಶ ರಾವ್, ಶ್ರೀ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಐತಾಳ್, ಪಣಂಬೂರು ಕಾಂತೇರಿ ಶ್ರೀ ಧೂಮಾವತಿ ದೇವಸ್ಥಾನದ ಆಡಳಿತ ಮೊಕ್ತಸರ ಮಂಜು ಕಾವ ಕಾವರ ಮನೆ ಪಣಂಬೂರು, ಕಾರ್ಪೋರೆಟರ್ ಲೋಕೇಶ್ ಬೊಳ್ಳಾಜೆ, ಲಕ್ಷ್ಮೀ ಶೇಖರ್ ದೇವಾಡಿಗ, ವಕೀಲ ಸದಾಶಿವ ಐತಾಳ್, ಪ್ರಮುಖರಾದ ಶ್ರೀಧರ ಹೊಳ್ಳ, ಅಣ್ಣಪ್ಪ ದೇವಾಡಿಗ, ಪರಮೇಶ್ವರ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷರಾದ ಶ್ರೀ ದುರ್ಗಾಪ್ರಸಾದ್ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ ಅವರು ಕಾರ್ಯಕ್ರಮ ನಿರ್ವಹಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಮನಮೋಹನ್ ಅವರು ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ನಡೆದ ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆಯಲ್ಲಿ ಒಟ್ಟು ಒಂಭತ್ತು ತಂಡಗಳು ಭಾಗವಹಿಸಿದ್ದವು.
ಈ ಸ್ಪರ್ಧೆಯ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡುತ್ತಾ “ಯಕ್ಷಗಾನ ಕಲೆಯಲ್ಲಿ ಅದ್ಭುತ ಶಕ್ತಿಯಿದೆ. ಯಕ್ಷಗಾನ ಕಲಿಯುವ ಮಕ್ಕಳು ಗುರುಹಿರಿಯರಿಗೆ ಗೌರವ ಕೊಡುತ್ತಾರೆ. ನವರಸಗಳನ್ನು ಮೇಳೈಸಿರುವ ಈ ಕಲೆಯನ್ನು ಶಾಲಾ ಕಾಲೇಜುಗಳಲ್ಲಿ ಕಲಿಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಭವಿಷ್ಯದಲ್ಲಿ ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೂ ಸಾಕಾರವಾಗುತ್ತದೆ. ಸಂಸ್ಕಾರ-ಸಂಸ್ಕೃತಿ ಉಳಿಸಲು ಯಕ್ಷಗಾನ ಕಲಿಕೆ ಪೂರಕವಾಗಿದೆ. ಯಕ್ಷಗಾನದಲ್ಲಿ ಮಾತುಗಾರಿಕೆ, ಅಭಿನಯ, ನೃತ್ಯ, ಸಂಗೀತ ಮೊದಲಾದ ಕಲಾಪ್ರಕಾರಗಳೆಲ್ಲಾ ಅಡಗಿದೆ. ಈ ಕಲೆಯ ಸೆಳೆತವೇ ನನ್ನನ್ನು 60ರ ವಯಸ್ಸಿನಲ್ಲಿ ಯಕ್ಷಗಾನವನ್ನು ಕಲಿತು ಸುಮಾರು 400ರಷ್ಟು ಪ್ರದರ್ಶನಗಳನ್ನು ನೀಡುವಂತಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಯಕ್ಷ ಶಿಕ್ಷಣ ಟ್ರಸ್ಟಿನ ಮೂಲಕ ಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಕಲಿಸುವ ಅಭಿಯಾನ ಕೈಗೊಂಡಾಗ ಯಕ್ಷಗಾನ ಕಲೆ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಮೂಡಿಸುವುದಲ್ಲದೆ ಅವರು ಉತ್ತಮ ಅಂಕಗಳೊಂದಿಗೆ ಶೈಕ್ಷಣಿಕ ಪ್ರಗತಿಯನ್ನು ಹೊಂದಿರುವುದು ಅರಿವಿಗೆ ಬಂತು. ಹೀಗಾಗಿ ಹೆತ್ತವರು ತಮ್ಮ ಮಕ್ಕಳು ಯಕ್ಷಗಾನ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಾಮಾಜಿಕ ಕಳಕಳಿ ಅಭಿನಂದನೀಯ. ಇದಕ್ಕೆ ಸಮಾಜದ ಪ್ರೋತ್ಸಾಹದ ಅಗತ್ಯವಿದೆ” ಎಂದರು.
ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಮಾತನಾಡಿ, “ಉಡುಪಿ ಜಿಲ್ಲೆಯಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಶಾಲಾ ಕಾಲೇಜುಗಳಲ್ಲಿ ಆರಂಭಿಸಿರುವ ಯಕ್ಷ ಶಿಕ್ಷಣವನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಆರಂಭಿಸುವ ಉದ್ದೇಶವಿದೆ” ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, “ಯಕ್ಷಗಾನ ಒಂದು ಸಮೃದ್ಧ ಕಲೆ. ವಿಶ್ವದ ಎಲ್ಲಾ ಕಲಾಪ್ರಕಾರಗಳ ಅಂಶ ಇದರಲ್ಲಡಗಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, “ಉಡುಪಿಯಲ್ಲಿ 152 ಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಆರಂಭಿಸಲಾಗಿದೆ. ಈ ಮೂಲಕ ಭವಿಷ್ಯದ ಕಲಾವಿದರನ್ನು ರೂಪುಗೊಳಿಸುವ ಕಾರ್ಯ ನಡೆದಿದೆ” ಎಂದರು.
ಕಟೀಲು ದೇವಿಪ್ರಸಾದ್ ಅಸ್ರಣ್ಣ ಆಶೀರ್ವಚನ ನೀಡಿದರು. ಯಕ್ಷಗಾನ ಮೇಳಗಳ ಸಂಚಾಲಕ ಪಿ.ಕಿಶನ್ ಹೆಗ್ಡೆ ಮಾತನಾಡಿದರು. ಅರ್ಹ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಹಾಯ ಧನ, ಲೇಖನ, ಪುಸ್ತಕ, ಬ್ಯಾಗ್ ವಿತರಣೆ ಮತ್ತು ಬ್ಯಾಂಕ್ ಖಾತೆಯ ಹಸ್ತಾಂತರ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ: ಸುಧನ್ವಾರ್ಜುನ – ಗೋವಿಂದದಾಸ ಕಾಲೇಜು ಸುರತ್ಕಲ್
ದ್ವಿತೀಯ : ಕೃಷ್ಣಾರ್ಜುನ – ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು ಕಟೀಲು
ತೃತೀಯ : ನರಕಾಸುರ ಮೋಕ್ಷ – ಮಧ್ವ ವಾದಿರಾಜ ಐಟಿಎಂ ಬಂಟಕಲ್
ಅತ್ಯುತ್ತಮ ಶಿಸ್ತಿನ ತಂಡ : ಗೋವಿಂದದಾಸ ಕಾಲೇಜು ಸುರತ್ಕಲ್
ವೈಯಕ್ತಿಕ ಬಹುಮಾನಗಳು : ಬಣ್ಣ : ತಾರಕಾಸುರ – ಕೆನರಾ, ಕಿರೀಟ : ಅರ್ಜುನ – ಕಟೀಲು, ಪುಂಡು : ತರಣಿಸೇನ – ಶಾರದಾ, ಸ್ತ್ರೀ : ಸತ್ಯಭಾಮೆ – ಬಂಟಕಲ್ ಮತ್ತು ಹಾಸ್ಯ : ದಾರುಕ – ಕಟೀಲು
ಮಂಗಳೂರಿನ ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನ ಮಾಲೀಕ ಎಂ.ರವೀಂದ್ರ ಶೇಟ್, ಸ್ಥಳೀಯ ಕಾಪೋರೇಟರ್ ಲಕ್ಷ್ಮೀ ಶೇಖರ ದೇವಾಡಿಗ, ಸಮಾಜ ಸೇವಕಿ ಸುಶೀಲಾ ಕೆ.ಶೆಟ್ಟಿ, ಉದ್ಯಮಿಗಳಾದ ಪ್ರಶಾಂತ್ ಮೂಡಾಯಿಕೋಡಿ, ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ಜ್ಯೋತಿಷಿ ಡಾ.ವಾಮನ ಸಾಲಿಯಾನ್, ವಿವೇಕ ಆಚಾರ್ಯ, ಸಮಿತಿಯ ಅಧ್ಯಕ್ಷ ದುರ್ಗಾಪ್ರಸಾದ್ ಹೊಳ್ಳ, ಉದ್ಯಮಿ ಗಿರೀಶ್ ಎಂ. ಶೆಟ್ಟಿ, ಸುಧಾಕರ ಕಾಮತ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೇ.ಮೂ. ಪಿ.ವೆಂಕಟರಮಣ ಐತಾಳ್ ಹಾಗೂ ಯಕ್ಷಗಾನ ಕಲಾವಿದ ಡಿ.ಮಾಧವ ಬಂಗೇರ ಕೊಳತ್ತಮಜಲು ಇವರಿಗೆ ಗೌರವಾರ್ಪಣೆ ನಡೆಯಿತು. ವಕೀಲರಾದ ಶ್ರೀ ಸದಾಶಿವ ಐತಾಳ್ ಸ್ವಾಗತಿಸಿ, ಶ್ರೀ ಪಿ. ಸುಧಾಕರ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ. ಕೆ. ಪೇಜಾವರ ಮತ್ತು ಪಿ. ಉಪೇಂದ್ರ ಆಚಾರ್ಯ ನಿರೂಪಿಸಿ ಪ್ರಶಾಂತ್ ಆಚಾರ್ಯ ವಂದಿಸಿದರು.