ಮಂಗಳೂರು : ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರ (ರಿ.) ಇದರ ವತಿಯಿಂದ ಯಕ್ಷರಂಗದ ಕಣ್ಮಣಿ ದಿ| ಬಾಬು ಕುಡ್ತಡ್ಕ ಅವರ ಹೆಸರಿನಲ್ಲಿ ಪ್ರತೀ ವರ್ಷ ನೀಡಲಾಗುವ ಪ್ರತಿಷ್ಠಿತ ‘ಬಾಬು ಕುಡ್ತಡ್ಕ ಪ್ರಶಸ್ತಿ’ಗೆ ತೆಂಕುತಿಟ್ಟಿನ ಹೆಸರಾಂತ ಹಿರಿಯ ಕಲಾವಿದ ವೇಣೂರು ಸದಾಶಿವ ಕುಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ.10,000 ನಗದು ಪುರಸ್ಕಾರದೊಂದಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಫಲಕಾಣಿಕೆಯನ್ನೊಳಗೊಂಡಿರುತ್ತದೆ.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 08-10-2023ರಂದು ಸಂಜೆ 3 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ವಹಿಸಲಿದ್ದು, ಮಾಜಿ ಸರಕಾರಿ ಮುಖ್ಯ ಸಚೇತಕರಾದ ಐವನ್ ಡಿಸೋಜಾ, ಪಡೀಲಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಟ್ರಸ್ಟಿಯಾದ ಡಾ. ಅಣ್ಣಯ್ಯ ಕುಲಾಲ್, ಮಾಜಿ ಶಾಸಕರಾದ ಶ್ರೀ ಜೆ.ಆರ್. ಲೋಬೋ ಮತ್ತು ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಟ್ರಸ್ಟಿಯಾದ ಶ್ರೀ ಎ.ಸದಾನಂದ ಶೆಟ್ಟಿ ಇವರುಗಳು ವಿಶೇಷ ಅಭ್ಯಾಗತರಾಗಿ ಆಗಮಿಸಲಿರುವರು. ಇದೇ ಸಂದರ್ಭದಲ್ಲಿ ಜಲ್ಲಿಗುಡ್ಡೆಯ ಶ್ರೀ ಅಂಬಾಭವಾನಿ ಯಕ್ಷಗಾನ ಕಲಾಮಂಡಳಿಯ ಸದಸ್ಯರಿಂದ ದಿನಕರ್ ಎಸ್. ಪಚ್ಚನಾಡಿ ನಿರ್ದೇಶನದಲ್ಲಿ ‘ಶ್ರೀ ದೇವಿ ಮಹಿಷಮರ್ಧಿನಿ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ವೇಣೂರು ಸದಾಶಿವ ಕುಲಾಲ್:
ವೇಣೂರಿನ ಕೃಷ್ಣಯ್ಯ ಮೂಲ್ಯ ಹಾಗೂ ಅಪ್ಪಿ ಮೂಲ್ಯೆದಿ ದಂಪತಿಗಳ ಸುಪುತ್ರರಾದ ಸದಾಶಿವ ಕುಲಾಲ್ ಇವರನ್ನು ಹಾಸ್ಯಗಾರ ವೇಣೂರು ಸುಂದರ ಆಚಾರ್ಯ ಯಕ್ಷಗಾನ ಕ್ಷೇತ್ರಕ್ಕೆ ಪರಿಚಯಿಸಿದರು. ಶ್ರೀ ಧರ್ಮಸ್ಥಳ ಲಲಿತಾ ಕೇಂದ್ರದಲ್ಲಿ ಗುರು ಶ್ರೀ ಪಡ್ರೆ ಚಂದ್ರು ಇವರ ಮಾರ್ಗದರ್ಶನದಲ್ಲಿ ತಮ್ಮ ಯಕ್ಷ ಶಿಕ್ಷಣ ಆರಂಭಿಸಿಸಿದ ಇವರು 26ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ, 8ವರ್ಷ ಮಂಗಳಾದೇವಿ ಹಾಗೂ 17ವರ್ಷ ಹನುಮಗಿರಿ ಮೇಳ ಹೀಗೆ ಯಕ್ಷಗಾನ ಕ್ಷೇತ್ರದ ಯಾನದಲ್ಲಿ 51ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಅಭಿಮನ್ಯು, ಬಾಬ್ರುವಾಹನ, ಚಂಡ ಮುಂಡ, ಅಶ್ವತ್ಥಾಮ, ಷಣ್ಮುಕ, ಲೀಲೆಯ ಕೃಷ್ಣ, ಲಕ್ಷ್ಮಣ, ಕಡುಗಲಿ ಕುಮಾರ, ರಾಮದ ಕುಮಾರ, ಬಪ್ಪನಾಡು ಕ್ಷೇತ್ರ ಮಹಾತ್ಮೆಯ ಗುಳಿಗ, ರಾಣಿ ರತ್ನಾವಳಿಯ ಉದಯನ ಹಾಗೂ ಚೆನ್ನಯ ಮುಂತಾದ ವೇಷಗಳು ಇವರನ್ನು ಪ್ರಸಿದ್ದಿಗೆ ಏರಿಸಿದ ಪತ್ರಗಳು.
1 Comment
Pingback: ಯಕ್ಷಗಾನವನ್ನು ಉಳಿಸಿ ಬೆಳೆಸುವ ಸ್ವಸ್ತಿಕ್ ಕಲಾಕೇಂದ್ರದಿಂದ ವೇಣೂರು ಸದಾಶಿವ ಕುಲಾಲ್ ಇವರಿಗೆ ‘ದಿ.ಬಾಬು ಕುಡ