ಬೆಂಗಳೂರು : ಹದಿನೈದು ವಸಂತಗಳನ್ನು ಪೂರೈಸಿರುವ ಬೆಂಗಳೂರಿನ ಚಿತ್ಪಾವನ ಮಹಿಳಾ ಯಕ್ಷಗಾನ ಮೇಳ (ರಿ) ಹೆಚ್ಚು ಹೆಚ್ಚು, ವಿಭಿನ್ನ ಯಕ್ಷಗಾನ ಪ್ರದರ್ಶನಗಳನ್ನು ನೀಡುವ ಮೂಲಕ ಕಲಾರಸಿಕರ ಮನೆ, ಮನಸ್ಸಿನ ಮಾತಾಗುತ್ತಿದೆ. ಹವ್ಯಾಸಿ ತಂಡವಾಗಿದ್ದರೂ ವ್ಯವಸಾಯೀ ತಂಡಕ್ಕೆ ಸರಿಸಮನಾಗಿ ಪ್ರದರ್ಶನದ ಗುಣಮಟ್ಟದ ನಿರಂತರ ಪ್ರಗತಿ ಸಾಧಿಸುತ್ತಿದೆ. ನುರಿತ ಕಲಾವಿದೆಯರ ಜೊತೆಗೆ ಯುವ ರಕ್ತದ ಸೇರ್ಪಡೆ ಮೇಳಕ್ಕೆ ವ್ಯಾಪಕ ಆಯಾಮವನ್ನು ನೀಡುತ್ತಿದೆ. ಮಂಗಳಾದೇವಿ ಮೇಳದ ಹೆಸರಾಂತ ಭಾಗವತರಾದ ಶ್ರೀಯುತ ಯೋಗೀಶ್ ಶರ್ಮರು ಆಸಕ್ತಿ ತೋರಿ ಹೊಸ ಪ್ರಸಂಗಗಳ ತರಬೇತಿ/ನಿರ್ದೇಶನ ನೀಡುತ್ತಿರುವುದು ಇದಕ್ಕೆ ಸಾಕ್ಷಿ.
ದಿನಾಂಕ 02-10-2023ರಂದು ನಾಗರಬಾವಿ ಕೆನರಾ ಬ್ಯಾಂಕ್ ಕಾಲೋನಿಯ ಅಮ್ಮೆಂಬಳ ಸುಬ್ಬರಾವ್ ಕಲಾಮಂಟಪದಲ್ಲಿ ನಡೆದ ‘ಬಿಲ್ಲ ಹಬ್ಬ ಕಂಸವಧೆ’ ನೆರೆದಿದ್ದ ಅಪಾರ ಯಕ್ಷಾಭಿಮಾನಿಗಳ ಮನ ಸೂರೆಗೈದಿತು. ಕಂಸನಾಗಿ ಶ್ರೀಮತಿ ಪೂನಂ ಗೋಖಲೆ ಅಮೋಘ ಅಭಿನಯ ನೀಡಿದರು. ಕೆಟ್ಟ ಕನಸಿಂದ ಮಂಚದಿಂದ ಬಿದ್ದು ಭಯ, ರೋಷದಿಂದ ತಲ್ಲಣಗೊಳ್ಳುವ ದೃಶ್ಯವಂತೂ ಬಹುಕಾಲ ಮನದಲ್ಲಿ ನೆಲೆಗೊಳ್ಳುವಂತಹುದು. ಕೃಷ್ಣನಾಗಿ ಶ್ರೀಮತಿ ಅನುಪಮಾ ಮರಾಠೆಯವರ ಎಂದಿನ ಪ್ರೌಢ ಅಭಿನಯ ಪ್ರದರ್ಶನಕ್ಕೆ A+ ಗ್ರೇಡ್ ದೊರಕಿಸಿತು. ಬಾಲಕೃಷ್ಣನಾಗಿ ಹಾಗೂ ಬಲರಾಮನಾಗಿ ಶ್ರೀಮತಿ ಶುಭಾ ಗೋರೆಯವರ ಲವಲವಿಕೆ, ಕುಣಿತ, ಅಭಿನಯ ಚಿತ್ತಾಕರ್ಷಕ. ಕೃಷ್ಣ ಬಲರಾಮರ ಲಯಬದ್ಧ ಬಿಡಿ ಹೆಜ್ಜೆಗಳ ಜೋಡಿ ಕುಣಿತ, ಸಾಹಿತ್ಯ ಭಾವವರಿತ ಅಭಿನಯ ಕಲಾವಿದೆಯರ ಪರಿಣತಿಗೆ, ಕಲಾಶ್ರದ್ಧೆಗೆ ಸಾಕ್ಷಿ. ಇನ್ನು ಶಕಟಾಸುರನಾಗಿ ಎತ್ತರದ ನಿಲುವಿನ,ಕಂಚಿನ ಕಂಠದ ಶ್ರೀಮತಿ ಸೌಮ್ಯ ಪ್ರದೀಪ್ ಆ ಪಾತ್ರಕ್ಕೆ ನ್ಯಾಯ ಒದಗಿಸಿದರು. ಅಕ್ರೂರನಾಗಿ ವರ್ಷಾ ಖಾಡಿಲ್ಕರ್ ಮೌಲಿಕ ನಿರ್ವಹಣೆ ತೋರಿದರು. ಕಂಸನ/ಶಕಟಾಸುರನ ಬಲಗಳಾಗಿ ಶ್ರೀಮತಿ ಭುವನಾ ಡೋಂಗ್ರೆ ಹಾಗೂ ರಮ್ಯಾ ಸಹಸ್ರಬುದ್ಧೆ ಅಚ್ಚುಕಟ್ಟಾಗಿ ನಟಿಸಿದರು. ಹಿರಿಯ ಕಲಾವಿದೆ ಶ್ರೀಮತಿ ಶೈಲಜಾ ಜೋಶಿಯವರ ವಿಜಯ ಹಾಗೂ ರಜಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಯೋಗೀಶ್ ಶರ್ಮರ ಶ್ರೀಮಂತ ಕಂಠದ ಭಾಗವತಿಕೆ, ನಿರ್ದೇಶನ ಕಲಾವಿದೆಯರ ಹುರುಪನ್ನು, ಆತ್ಮವಿಶ್ವಾಸವನ್ನು ಹೆಚ್ಚಿಸಿ ಯಶಸ್ವಿ ಪ್ರದರ್ಶನ ಕಲಾರಸಿಕರಿಗೆ ಸಿಗುವಂತಾಯಿತು. ಶ್ರೀ ಅರ್ಜುನ್ ಕೊರ್ಡೇಲ್ ಮತ್ತು ಶಿಖಿನ್ ಶರ್ಮಾ ಚಂಡೆಯಲ್ಲಿ, ಶ್ರೀ ಪ್ರಕಾಶ್ ಗೋಗಟೆ ಮದ್ದಳೆಯಲ್ಲಿ ಮಿಂಚಿದರು. ಚಕ್ರತಾಳದಲ್ಲಿ ಶಂಕರ್ ಜೋಯಿಸ್ ಸಮರ್ಥ ಸಾಥ್ ನೀಡಿದರು. ಪ್ರದರ್ಶನ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.
ವೇದಿಕೆ ಒದಗಿಸಿದ ಕೆನರಾ ಬ್ಯಾಂಕ್ ಕಾಲೋನಿ ಅಸೋಸಿಯೇಷನ್ ಹಾಗೂ ಮೇಳದ ಬಹುಕಾಲದ ಹಿತೈಷಿ ಶ್ರೀ ಲಿಂಗದೇವರು ಇವರುಗಳನ್ನು ಮೇಳದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
2 Comments
ಮುಖ್ಯ ಕಲಾವಿದರಿಗೆ ಮತ್ತಷ್ಟು ಅವಕಾಶಗಳು ಒದಗಿಬರಲಿ.”ಚಿತ್ಪಾವನ ” ದ ಕಲಾವಿದರಿಂದ ಆಕರ್ಷಕ ಪ್ರಸಂಗಗಳು ಹೆಚ್ಚು ಹೊಮ್ಮಲಿ .ಪ್ರೋತ್ಸಾಹ ಯಕ್ಷಗಾನಕ್ಕೆ ಸಿಗುವಂತಾಗಲಿ. ಮುಂದಿನ ಎಲ್ಲ ಕಾರ್ಯಕ್ರಮ ಯಶಸ್ವಿಯಾಗಲಿ..🙏⭐️👍💐🎤🥁🪘
ಚಿತ್ಪಾವನ ಯುವ ಹಾಗೂ ನುರಿತ ಕಲಾವಿದೆಯರಿಗೆ ಹೃತ್ಪೂರ್ವಕ ಅಭಿನಂದನೆಗಳು.. 💐💐💐💐💐