ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠ ಇದರ ಜಂಟಿ ಆಶ್ರಯದಲ್ಲಿ ‘ಬ್ಯಾರಿ ಭಾಷಾ ದಿನಾಚರಣೆ -2023’ ದಿನಾಂಕ 03-10-2023ರ ಮಂಗಳವಾರ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಕೆ. ಚಿನ್ನಪ್ಪ ಗೌಡ ಇವರು ಮಾತನಾಡುತ್ತಾ “ತನ್ನ ಭಾಷೆಯನ್ನು ಪ್ರೀತಿಸುವ ವ್ಯಕ್ತಿ ಬೇರೆ ಭಾಷೆಯನ್ನು ದ್ವೇಷಿಸುವುದಿಲ್ಲ ಹಾಗೂ ದ್ವೇಷಿಸಬಾರದು. ಭಾಷೆ, ದೇವರು, ಆಚರಣೆ ಮುಂತಾದವು ಜನರನ್ನು ಜೋಡಿಸುತ್ತವೆಯೇ ಹೊರತು ದ್ವೇಷ ಭಾವವನ್ನು ಹುಟ್ಟುಹಾಕುವುದಿಲ್ಲ” ಎನ್ನುತ್ತಾ ಸಾಹಿತ್ಯ ಕ್ಷೇತ್ರಕ್ಕೆ ಬ್ಯಾರಿ ಸಾಹಿತ್ಯದ ಕೊಡುಗೆಯನ್ನು ಶ್ಲಾಘಿಸಿದರು.
ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್, ಬ್ಯಾರಿ ಭಾಷೆಯ ಇತಿಹಾಸ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ವಿವರಿಸಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾದ ಯು.ಎಚ್. ಖಾಲಿದ್ ಉಜಿರೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು, ಅಖಿಲ ಭಾರತ ಬ್ಯಾರಿ ಪರಿಷತ್ ಕೋಶಾಧಿಕಾರಿ ನಿಸಾರ್ ಮಹಮ್ಮದ್, ಉಳ್ಳಾಲದ ಬಹುಭಾಷಾ ಕವಯತ್ರಿ ಯು.ಕೆ. ಆಯಿಶಾ ಅತಿಥಿಗಳಾಗಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯನ ಪೀಠದ ಸಂಯೋಜಕರಾದ ಡಾ. ಅಬೂಬಕ್ಕರ್ ಸಿದ್ದೀಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರಿ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರ್ವಹಿಸಿ, ಬ್ಯಾರಿ ಗಾಯಕ ಶರೀಫ್ ನಿರ್ಮುಂಜೆ ಧ್ಯೇಯ ಗೀತೆ ಹಾಡಿದರು. ಬ್ಯಾರಿ ಭಾಷಾ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.