ಸುಳ್ಯ : ರಂಗ ನಿರ್ದೇಶಕ, ನಟ, ನಾಟಕಕಾರ, ವರ್ಣ ಚಿತ್ರ ಕಲಾವಿದ ಮೋಹನ ಸೋನ ಇವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ‘ಸೋನ ನೆನಪು’ ದಿನಾಂಕ 14-10-2023ರಂದು ಅವರ ನಿವಾಸ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿಯ ನಡುಮನೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಹಿರಿಯ ಸಂಪಾದಕ ಗಂಗಾಧರ ಹಿರೇಗುತ್ತಿ ಹಾಗೂ ಅಂಕೋಲಾದ ಗಾಯಕರಾದ ದೇವಾನಂದ ಗಾಂವ್ಕರ್ ಭಾಗವಹಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ ಹಿರೇಗುತ್ತಿ ಅವರು ತನ್ನ ಪತ್ರಿಕೋದ್ಯಮ ಜೀವನದಲ್ಲಿ ಅನುಭವಿಸಿದ ಕೆಲವೊಂದು ಸವಾಲುಗಳೊಂದಿಗೆ ಕಲಾವಿನದ ಮೋಹನ ಸೋನ ಮತ್ತು ಅವರು ಪರಿಚಯಗೊಂಡ ಬಗೆಯನ್ನು ವಿವರಿಸಿದರು. ಅಲ್ಲದ ಹಿರಿಯ ಚಿತ್ರ ಕಲಾವಿದ ಸುದೇಶ್ ಮಹಾನ್ ಹಾಗೂ ಕಿರಿಯ ಚಿತ್ರಗಾರ್ತಿ ಆದ್ಯ ರಾಜೇಶ್ ಮಹಾನ್ ಇವರ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.
ದೇವಾನಂದ ಗಾಂವ್ಕರ್ ಮಾತನಾಡುತ್ತಾ ಕಳೆದ 2017ನೇ ಇಸವಿಯಲ್ಲಿ ಕಾರವಾರದ ಕಡಲ ಕಿನಾರೆಯಲ್ಲಿ ಅಲ್ಲಿನ ಬುಡಕಟ್ಟು ಜನಾಂಗದ ಜೀವನ ಶೈಲಿಯನ್ನು ಬಿಂಬಿಸುವ ಶಿಲ್ಪಕಲಾ ಉದ್ಯಾನ ‘ರಾಕ್ ಗಾರ್ಡನ್’ ವಿನ್ಯಾಸದಲ್ಲಿ ಸೋನ ಅವರು ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಆದ ಪರಿಚಯ ಮತ್ತು ಕೊನೆಯವರೆಗೂ ಅವರ ಪ್ರೀತಿ ವಿಶ್ವಾಸದ ಬಗೆಯನ್ನು ವಿವರಿಸಿದರು. ಕೊನೆಗೆ ತನ್ನ ಮಧುರ ಕಂಠದ ಗಾಯನದ ಜೊತೆಗೆ ಮಾತುಗಳನ್ನು ಮುಕ್ತಾಯ ಗೊಳಿಸಿದರು.
ವೇದಿಕೆಯಲ್ಲಿ ಸೋನರ ಪತ್ನಿ ಮಾಧವಿ ಸೋನ ಹಾಗೂ ಹಿರಿಯ ಕಲಾವಿದ ಸುದೇಶ್ ಮಹಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಸುದೇಶ್ ಮಹಾನ್ ನಡೆಸಿಕೊಟ್ಟರು. ದಿನಾಂಕ 14-10-2023 ರಂದು ಉದ್ಘಾಟನೆಗೊಂಡ ಕಲಾ ಪ್ರದರ್ಶನ ಒಂದು ವಾರಗಳ ಕಾಲ ‘ಮೋಹನ ಸೋನ ಆರ್ಟ್ ಗ್ಯಾಲರಿ’ಯಲ್ಲಿ ನಡೆಯಲಿದೆ.