ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ಉಡುಪಿಯ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ಆಯೋಜಿಸಿದ ‘ಜನಪದ ಸರಣಿ ಕಲಾ ಕಾರ್ಯಾಗಾರ’ದ ಏಳನೇ ಆವೃತ್ತಿಯು ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ದಿನಾಂಕ 14-10-2023 ಮತ್ತು 15-10-2023ರಂದು ಎರಡು ವಿಭಾಗಗಳಲ್ಲಿ ನಡೆಯಿತು.
ಈ ಕಾರ್ಯಾಗಾರವನ್ನು ವೆಂಟನಾ ಪೌಂಡೇಶನ್ ಇದರ ಟ್ರಸ್ಟಿಗಳಾದ ಶಿಲ್ಪಾ ಭಟ್ ಇವರು ಉದ್ಘಾಟನೆ ಮಾಡಿ ಮಾತನಾಡುತ್ತಾ “ಉಡುಪಿಯ ಕಲಾಪ್ರೇಮಿಗಳಿಗೆ ಈ ತೆರನಾದ ಕಾರ್ಯಾಗಾರಗಳು ಬಹು ಉಪಯುಕ್ತವಾಗಲಿದ್ದು, ಭಾರತೀಯ ದೇಶೀಯ ಕಲೆಯ ಉಳಿಸುವಿಕೆ ಹಾಗೂ ಬೆಳೆಸುವಿಕೆಯಲ್ಲಿ ಇದೊಂದು ಮೈಲಿಗಲ್ಲಾಗಬಹುದು ಮತ್ತು ವೆಂಟನಾ ಪೌಂಡೇಶನ್ ಈ ತೆರನಾದ ಕಾರ್ಯಕ್ರಮಗಳಿಗೆ ಸದಾ ಬೆಂಬಲವನ್ನೀಯುತ್ತದೆ” ಎಂದರು.
ಮುಖ್ಯ ಅತಿಥಿಗಳಾದ ವೈಟ್ ಲೋಟಸ್ ಹೋಟೆಲ್‌ನ ಆಡಳಿತ ನಿರ್ದೇಶಕರಾದ ಯುವ ಉದ್ಯಮಿ, ಅಜಯ್ ಪಿ. ಶೆಟ್ಟಿಯವರು “ಭಾರತವು ಹಲವಾರು ವೈವಿಧ್ಯಮಯ ಆಚಾರ-ವಿಚಾರ, ಸಂಸ್ಕೃತಿಗಳಿಂದ ಕೂಡಿದ್ದಾಗಿದೆ. ಇವುಗಳ ನಡುವೆ ಹಂಚಿಹೋಗಿರುವ ಕಲಾ ಪ್ರಕಾರಗಳನ್ನೆಲ್ಲ ಉಡುಪಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಇದರ ಪ್ರಯೋಜನವನ್ನು ಕರಾವಳಿಯ ಜನರು ಪಡೆಯಬೇಕು” ಎಂಬುದಾಗಿ ಅಭಿಪ್ರಾಯವಿತ್ತರು. ಈ ಸಂದರ್ಭದಲ್ಲಿ ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆಯವರು ಕಾರ್ಯಕ್ರಮ ನಿರೂಪಿಸಿದರು.
ಈ ಸರಣಿಯ ಭಾಗವಾಗಿ ಕೇರಳದ ಭಿತ್ತಿಚಿತ್ರಗಳ ಬಗ್ಗೆ ಕಲಾ ಕಾರ್ಯಾಗಾರವನ್ನು ಖ್ಯಾತ ಕಲಾವಿದ ಕೇರಳದ ತ್ರಿಶೂರ್‌ನ ವೇಣುಗೋಪಾಲ್ ಟಿ.ಕೆ.ಯವರು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ “ಡಿವೈನ್ ಕೇರಳ” ಎನ್ನುವ ಕೇರಳ ಮ್ಯೂರಲ್ ಚಿತ್ರಗಳ ಕಲಾಪ್ರದರ್ಶನವನ್ನೂ ಏರ್ಪಡಿಸಿದ್ದು, ಎರ್ನಾಕುಲಂನ ಅಶ್ವತಿ ಎನ್. ಹಾಗೂ ವೇಣುಗೋಪಾಲ್‌ರ ಸುಮಾರು 15 ಜಲವರ್ಣ ಮತ್ತು ಆಕ್ರಿಲಿಕ್ ಮಾಧ್ಯಮದ ಕಲಾಕೃತಿಗಳ ಪ್ರದರ್ಶನವು 13ರಿಂದ 15ರ ತನಕ ಅಪರಾಹ್ನ 3ರಿಂದ 7ರ ತನಕ ಪ್ರದರ್ಶನಗೊಂಡವು.