ಮೂಡುಬಿದಿರೆ : ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ ನಿರಂಜನ್ ಜೈನ್ ಕುದ್ಯಾಡಿ ಅವರು ರಚಿಸಿದ ‘ಶಿಖರ್ಜಿಯಲ್ಲಿ ನಿರಂಜನನ ದರ್ಶನ’ ಮತ್ತು ‘ಜಿನಭಕ್ತಿ ಲಹರಿ’ ಕೃತಿ ದಿನಾಂಕ 23-10-2023ರಂದು ಲೋಕಾರ್ಪಣೆಗೊಳಿಸಿದ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡುತ್ತಾ “ಒಂದು ಸಮುದಾಯದ ಒಳಗಿನ ವಿಚಾರಗಳ ಕುರಿತಾಗಿ ಪ್ರಕಟವಾಗುವ ಯಾವುದೇ ಪುಸ್ತಕಗಳು ಎಲ್ಲಾ ಸಮುದಾಯದವರಲ್ಲಿ ಕೊಡುಕೊಳ್ಳುವಿಕೆಗೆ ಒಳಗಾದಾಗ ಆ ಪುಸ್ತಕದ ಸಾರ್ಥಕತೆಯಾಗುತ್ತದೆ. ಒಂದು ಧರ್ಮ ಅಥವಾ ಸಮುದಾಯವನ್ನು ಮತ್ತೊಂದು ಧರ್ಮ ಪರಸ್ಪರ ಅರ್ಥ ಮಾಡಿಕೊಳ್ಳಬೇಕಾದರೆ ಪುಸ್ತಕಗಳ ಕೊಡುಕೊಳ್ಳುವಿಕೆಯ ಅಗತ್ಯವಿದೆ” ಎಂದು ಹೇಳಿದರು.
ಕನ್ನಡ ಭಾಷಾ ಪಂಡಿತ ಬಿ.ಪಿ. ಸಂಪತ್ ಕುಮಾರ್ ಮೂಡುಬಿದಿರೆ ಕೃತಿಯನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾದ ಭಾರತೀಯ ಜೈನ್ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್ ಶುಭಾಶಂಸನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪುಸ್ತಕದ ಪ್ರಕಾಶಕರೂ ಆಗಿರುವ ಬೆಂಗಳೂರಿನ ರತ್ನತ್ರಯ ಕ್ರಿಯೇಷನ್ಸ್ ಅದರ ಮುಖ್ಯಸ್ಥೆ ಡಾ. ನೀರಜಾ ನಾಗೇಂದ್ರ ಕುಮಾರ್ ಮಾತನಾಡುತ್ತಾ “ಈ ಕೃತಿಯಲ್ಲಿ ತುಳುನಾಡಿನ ಭಾಷೆಯ ಸೊಗಡು, ಅಲ್ಲಿನ ಜೀವನಾದರ್ಶಗಳ ದರ್ಶನ ಓದುಗರಿಗೆ ಲಭಿಸುತ್ತದೆ. ಈ ಕೃತಿಯನ್ನು ಓದಿದವರಿಗೆ ಶಿಖರ್ಜಿಯ ದರ್ಶನ ಮಾಡಲೇ ಬೇಕೆನ್ನುವಷ್ಟು ಭಕ್ತಿ ಭಾವ ಹುಟ್ಟುತ್ತದೆ” ಎಂದರು.
ನ್ಯಾಯವಾದಿ ಶ್ವೇತ ಕೆ. ಕೃತಿಕಾರರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ನಿರಂಜನ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಖ್ಯಾತ ಗಾಯಕಿ ನಿರೀಕ್ಷಾ ಸನತ್ ಕುಮಾರ್ ಅವರು ನಿರಂಜನ್ ಜೈನ್ ರಚಿಸಿದ ಭಕ್ತಿಗೀತೆಯೊಂದನ್ನು ರಾಗ ಸಂಯೋಜಿಸಿ ಹಾಡಿದರು.
ನಾರಾವಿ ಜೈನ ದಿಗಂಬರ ಬಸದಿ ಅಧ್ಯಕ್ಷ ನಿರಂಜನ್ ಜೈನ್, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜವರ್ಮ ಜೈನ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಜೈನ ಯುವಜನ ಸಂಘ ನಾರಾವಿ ಅಧ್ಯಕ್ಷ ಜಿನೇಂದ್ರ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಕರಾಗಿ ವಸಂತ್ ಕುಮಾರ್ ಬಂಗ ಕಾರ್ಕಳ, ಉದ್ಯಮಿ ಸನತ್ ಕುಮಾರ್ ಹೊಸ್ಮಾರ್, ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ ಇದರ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ, ನ್ಯಾಯವಾದಿ ಶ್ವೇತಾ ಜೈನ್ ಮೂಡುಬಿದಿರೆ ಕಾರ್ಯನಿರ್ವಹಿಸಿದರು. ಅಧ್ಯಾಪಕ ಧರಣೇಂದ್ರ ಕಾರ್ಯಕ್ರಮ ನಿರೂಪಿಸಿ, ಶಶಿಕಲಾ ಕೆ. ಹೆಗ್ಡೆ ಕಾರ್ಕಳ ಸ್ವಾಗತಿಸಿ, ಲೇಖನ್ ಜೈನ್ ಪ್ರಾರ್ಥನೆ ಹಾಡಿದರು.
ಕೃತಿಗಳು ಬೇಕಾದವರು ನಿರಂಜನ್ ಜೈನ್ ಕುದ್ಯಾಡಿ ಇವರನ್ನು ಸಂಪರ್ಕಿಸಬೇಕಾಗಿ ವಿನಂತಿ. ಒಂದು ಕೃತಿಗೆ ಕೇವಲ ₹ 100. (ಅಂಚೆ ವೆಚ್ಚ ಪ್ರತ್ಯೇಕ – ₹ 30). ಅತೀ ಕಡಿಮೆ ದರದಲ್ಲಿ (172 – page) ದೊರಕುವ ಈ ಕೃತಿಯನ್ನು ಕೊಂಡು ಓದಿ ಪ್ರೋತ್ಸಾಹಿಸಬೇಕಾಗಿ ವಿನಂತಿ. ಕೃತಿಗಳಿಗಾಗಿ ವಿಚಾರಿಸಿ (ನಿರಂಜನ್ ಜೈನ್ ಕುದ್ಯಾಡಿ) 9945563529