ಮೂಡಬಿದಿರೆ : ತುಳುಕೂಟ(ರಿ) ಬೆದ್ರ ಇದರ ತಿಂಗಳ ಕಾರ್ಯಕ್ರಮದಲ್ಲಿ ದಿನಾಂಕ 04-11-2023 ರಂದು ಮೂಡಬಿದಿರೆಯ ಕನ್ನಡ ಭವನದಲ್ಲಿರುವ ತುಳುಕೂಟದ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ತುಳುನಾಡಿನ ಭೂತಾರಾಧನೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರೂ ಆಗಿರುವ ಡಾ. ರವೀಶ್ ಪಡುಮಲೆಯವರು “ತುಳುವರ ಆಚಾರ ವಿಚಾರಗಳು ಬದಲಾಗುತ್ತಾ ವಿಕೃತಿಯೆಡೆಗೆ ಸಾಗುತ್ತಿದ್ದರೆ ಅವರು ನಂಬಿಕೊಂಡು ಬಂದ ದೈವಾರಾಧನೆಯು ಕೂಡಾ ಹಾದಿ ತಪ್ಪುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡು ತುಳು ಸಂಸ್ಕೃತಿ, ಪರಂಪರೆಯನ್ನು ಉಳಿಸಲು ಪ್ರಯುತ್ನಿಸಬೇಕಾಗಿದೆ. ಇತ್ತೀಚೆಗೆ ಚಂದ ಕಾಣಬೇಕೆಂಬ ಇರಾದೆಯಿಂದ ಯಕ್ಷಗಾನ ಶೈಲಿಯ ಬಣ್ಣಗಾರಿಕೆಯನ್ನು ಮಾಡಲಾಗುತ್ತಿದೆ. ವೇಷಭೂಷಣಗಳಲ್ಲೂ ಬದಲಾವಣೆ ತರಲಾಗುತ್ತಿದೆ. ಪರಂಪರೆಗೆ ಅಪಚಾರವೆಸಗುವ ಇಂತಹ ಕೃತ್ಯಗಳನ್ನು ಪ್ರಶ್ನಿಸುವ ಮನೋಭಾವವನ್ನು ತುಳುವರು ಬೆಳೆಸಿಕೊಳ್ಳಬೇಕಾಗಿದೆ. ಇದರ ಜೊತೆಗೆ ದೈವಾರಾಧನೆಯ ಪರಂಪರೆ ದಾರಿ ತಪ್ಪುವಲ್ಲಿ ಈಗ ಚಾಲ್ತಿಯಲ್ಲಿರುವ ಕಂಟ್ರಾಕ್ಟ್ ಪದ್ಧತಿಯೂ ಕಾರಣವಾಗುತ್ತಿದೆ.” ಎಂದು ವಿಷಾದಿಸಿದರು.
ಸ್ವತಃ ದೈವನರ್ತಕರೂ ಆಗಿರುವ ಡಾ.ರವೀಶ್ ಅವರು ದೈವಾರಾಧನೆ ನಡೆದು ಬಂದ ದಾರಿ, ಅದರ ಮಹತ್ವ, ಬೇರೆ ಬೇರೆ ದೈವಗಳಿಗಿರುವ ಬಣ್ಣಗಾರಿಕೆ ಮತ್ತು ಉಡುಗೆ ತೊಡುಗೆ, ಕಟ್ಟು ಕಟ್ಟಳೆಗಳ ಬಗ್ಗೆ ವಿವರಿಸಿದರು.
ತುಳುಕೂಟದ ಅಧ್ಯಕ್ಷರಾದ ಧನಕೀರ್ತಿ ಬಲಿಪ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಚೇತನಾ ರಾಜೇಂದ್ರ ಪ್ರಾರ್ಥಿಸಿ, ಕಾರ್ಯದರ್ಶಿಗಳಾದ ಕೆ.ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸದಾನಂದ ನಾರಾವಿಯವರು ನಿರೂಪಿಸಿ, ವಂದಿಸಿದರು.