ಬಂಟ್ವಾಳ : ಸಿದ್ಧಕಟ್ಟೆಯ ಶ್ರೀ ಕ್ಷೇತ್ರ ಪೂಂಜದ ಯಕ್ಷಮಿತ್ರರು ತಂಡದ 6ನೇ ವಾರ್ಷಿಕೋತ್ಸವವು ಸಿದ್ಧಕಟ್ಟೆ ಸಹಕಾರಿ ಸಂಘದ ಸಭಾಭವನದಲ್ಲಿ ದಿನಾಂಕ 24-10-2023ರಂದು ನಡೆಯಿತು. ಈ ಸಂದರ್ಭದಲ್ಲಿ ‘ಯಕ್ಷಮಿತ್ರ ಪ್ರಶಸ್ತಿ’ ಪ್ರದಾನ ಹಾಗೂ ತಾಳಮದ್ದಳೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆದು ಪ್ರೇಕ್ಷಕರನ್ನು ರಂಜಿಸಿತು.
ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಕರ್ಪೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ ಆಚಾರ್ಯ, ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ, ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೋಪಾಲ ಬಂಗೇರ, ನಿವೃತ್ತ ಕಂದಾಯಾಧಿಕಾರಿ ಭೋಜ ಜೈನ್, ರೋಟರಿ ಕ್ಲಬ್ ವಲಯ ಸೇನಾನಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಇವರೆಲ್ಲರೂ ಶುಭ ಹಾರೈಸಿದರು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ವಹಿಸಿದ್ದರು.
ಕಲಾಪೋಷಕ, ರಂಗಸ್ಥಳ ನಿರ್ಮಾತೃ ಪರಮೇಶ್ವರ ಹೊಳ್ಳ ಅವರಿಗೆ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿಮ್ಮೇಳ ಕಲಾವಿದ ಚಂದ್ರಶೇಖರ ಕೊಂಕಣಾಜೆ ಅವರು ಅಭಿನಂದನಾ ಭಾಷಣ ಮಾಡಿದರು. ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರ ಕುರಿತ ಡಾ.ಯೋಗೀಶ್ ಕೈರೋಡಿ ರಚನೆಯ ‘ರಂಗಸ್ಥಳದ ರಾಜ ಅರುವ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಹೊಕ್ಕಾಡಿ ಗೋಳಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಕಿರಣ್ ಕುಮಾರ್ ಮಂಜಿಲ, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಇದರ ಅಧ್ಯಕ್ಷರಾದ ರಾಮಚಂದ್ರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ್ ಶೆಟ್ಟಿ ಸ್ವಾಗತಿಸಿ, ಉಮೇಶ ಶೆಟ್ಟಿ ಪಾಲ್ಯ ಅವರು ಕಾರ್ಯಕ್ರಮ ನಿರೂಪಿಸಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ ವಂದಿಸಿದರು. ಬಳಿಕ ಜಿಲ್ಲೆಯ ಆಯ್ದ ಕಲಾವಿದರಿಂದ ‘ಭೃಗು ಶಾಪ’ ಯಕ್ಷಗಾನ ತಾಳಮದ್ದಳೆ ನಡೆಯಿತು.