ತೆಕ್ಕಟ್ಟೆ ಹಯಗ್ರೀವದಲ್ಲಿ ‘ಸಂಯಮಂ ಯಕ್ಷ ಮಹಿಳಾ ಬಳಗ’ ಕೋಟೇಶ್ವರ ಇವರ ನೇತೃತ್ವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರ ಸಹಯೋಗದೊಂದಿಗೆ ದಿನಾಂಕ 08-11-2023ರಂದು ನಡೆದ ‘ಮಲ್ಪೆ ವಾಸುದೇವ ಸಾಮಗರ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ ಹಾಗೂ ಭರತನಾಟ್ಯ ಹಾಗೂ ಯಕ್ಷ ಕಲಾವಿದೆ ಭಾಗೀರಥಿ ರಾವ್ ಅವರನ್ನು ಸಮ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಶೆಟ್ಟಿ ಕೋಟೇಶ್ವರ “ತಾಳಮದ್ದಳೆ ಕ್ಷೇತ್ರದಲ್ಲಿ ಮೇಳ ಕಟ್ಟಿ ಮುನ್ನಡೆಸಿ ಸಾಧಿಸಿದ ಮೇರು ಕಲಾವಿದರು ಸಾಮಗರು. ಕಲೆ ಉಳಿಯುವುದು ಕಲಾವಿದರಿಂದ. ನಲಿದಾಡುವ ಜ್ಙಾನಕೋಶದಂತಿದ್ದ ವಾಸುದೇವ ಸಾಮಗರಿಗೆ ವಿದ್ವತ್ತು, ಅಭಿವ್ಯಕ್ತಿ ಮೂಲ ಬಂಡವಾಳ. ಪರಂಪರೆಗೆ ಅಂಟಿಕೊಂಡವರಲ್ಲ ಸಾಮಗರು. ಸಂಪ್ರದಾಯದ ಜೊತೆಗೆ ಹೊಸ ಹೊಸ ಆಯಾಮಗಳನ್ನು ಹುಡುಕಿ ಅನುಷ್ಠಾನಕ್ಕೆ ತಂದ ಮೇರು ಕಲಾವಿದರು. ಯಕ್ಷರಂಗದ ಪರಿಪೂರ್ಣ ಕಲಾವಿದರಾದ ಸಾಮಗರು ವ್ಯಾಕರಣ ಜ್ಙಾನ ಹೊಂದಿ, ಅನೇಕಾನೇಕ ಕಲಾವಿದರಿಗೆ ದಿಗ್ದರ್ಶನ ನೀಡಿ ಉಳಿದ ಕಲಾವಿದರನ್ನೂ ಅತ್ಯಂತ ಎತ್ತರಕ್ಕೆ ಏರಿಸಬಲ್ಲ ಶ್ರೇಷ್ಠ ಕಲಾವಿದರು. ಯಕ್ಷಗಾನ ಕ್ಷೇತ್ರ ಒಂದರ್ಥದಲ್ಲಿ ಅವರನ್ನು ಕಳೆದುಕೊಂಡು ಬಡವಾಗಿದೆ” ಎಂದು ಸಂಸ್ಮರಣಾ ಮಾತನ್ನಾಡಿದರು.
ಸಮ್ಮಾನಿತರಾದ ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ ಮಾತನ್ನಾಡಿ, “ಮಲ್ಪೆ ವಾಸುದೇವ ಸಾಮಗರು ಪ್ರತೀ ನಿತ್ಯವೆಂಬಂತೆ ಕೇಂದ್ರಕ್ಕೆ ಭೇಟಿ ನೀಡಿ ನಮ್ಮ ತರಗತಿಯನ್ನು ಗಮನಿಸುತ್ತಾ ಇದ್ದವರು. ಇಂದು ಅವರ ಸಂಸ್ಮರಣೆಯಂದು ನಮ್ಮನ್ನು ಗೌರವಿಸುವಾಗ ಅವರೇ ಬಂದು ಸಂಮಾನಿಸಿದಷ್ಟು ಸಂತೋಷ ತಂದಿದೆ. ಜವಾಬ್ದಾರಿಯನ್ನು ಹೆಚ್ಚಿಸಿದ ಗೌರವಕ್ಕೆ ಬದ್ಧನಾಗಿದ್ದೇನೆ” ಎಂದು ಹೇಳಿದರು.
ಗುರುಗಳಾದ ಲಂಬೋದರ ಹೆಗಡೆ, ಭಾಗ್ಯಲಕ್ಷ್ಮೀ, ಧನ್ಯ, ಮೀರಾ ವಿ. ಸಾಮಗ, ನಾಗರತ್ನ ಹೇರ್ಳೆ ಇನ್ನಿತರರು ಉಪಸ್ಥಿತರಿದ್ದರು. ಕು. ಆರಬಿ ಸಾಮಗ ಪ್ರಾರ್ಥಿಸಿ, ಚಂದ್ರಿಕಾ ಧನ್ಯ ಸ್ವಾಗತಿಸಿ, ಶ್ಯಾಮಲಾ ವರ್ಣ ಸಮ್ಮಾನ ಪತ್ರ ವಾಚಿಸಿದರು. ಸುಪ್ರಿತಾ ಎಸ್. ಪುರಾಣಿಕ ಧನ್ಯವಾದಗೈದರು. ದೀಪಿಕಾ ಪಿ. ಸಾಮಗ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ಮಹಿಳಾ ಕಲಾವಿದರಿಂದ ಯುಗಳ ಸಂವಾದ “ಸ್ನೇಹ ಬಂಧ” ಹಾಗೂ ಯಶಸ್ವೀ ಕಲಾವೃಂದದ ಚಿಣ್ಣರಿಂದ ಯಕ್ಷಗಾನ “ದ್ರೌಪದಿ ಪ್ರತಾಪ” ರಂಗದಲ್ಲಿ ಪ್ರಸ್ತುತಿಗೊಂಡಿತು.