ಉಳ್ಳಾಲ : ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಮಂಗಳೂರಿನ ಬೀರಿಯಲ್ಲಿರುವ ಸೈಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಕಟ್ಟಡದ ಸಭಾಂಗಣದಲ್ಲಿ ‘ನೀವು ಕೇಳಿರದ ಉಳ್ಳಾಲ ರಾಣಿ ಅಬ್ಬಕ್ಕಳ ಸಾಹಸ ಕಥೆ’ ಕುರಿತು ವಿಚಾರ ಸಂಕಿರಣ ದಿನಾಂಕ 15-11-2023ರಂದು ನಡೆಯಿತು.
ಮಾಜಿ ಶಾಸಕ ಕೆ. ಜಯರಾಮ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೀರ ರಾಣಿ ಅಬ್ಬಕ್ಕಳ ಹೆಸರಿನಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಿವರಿಸಿದರು. ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಉಪನ್ಯಾಸ ನೀಡಿ, “ಸ್ವಾತಂತ್ರ್ಯಕ್ಕೆ ಅಬ್ಬಕ್ಕಳು ಹೋರಾಟ ಮಾಡಿದ್ದಾಳೆ ಎನ್ನುವುದಕ್ಕಿಂತ ಮೊದಲು ಅವರ ಕುಟುಂಬದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ. ರಾಣಿ ಅಬ್ಬಕ್ಕ ಎರಡನೆಯವರಾಗಿದ್ದು, ಜೈನ ಧರ್ಮಕ್ಕೆ ಸೇರಿದ್ದರು. ಪೋರ್ಚ್‌ಗೀಸರ ವಿರುದ್ಧ ಹೋರಾಟ ಮಾಡಿದವರಲ್ಲಿ, ವಾಸ್ಕೋಡಿಗಾಮ ವ್ಯಾಪಾರದ ದೃಷ್ಟಿಯಿಂದ ಕಲ್ಲಿಕೋಟೆಗೆ ಬಂದಾಗ ಅವರ ವಿರುದ್ಧ ಸೆಟೆದು ನಿಂತು ಹೋರಾಡಿದವರಲ್ಲಿ ಅಬ್ಬಕ್ಕ ಕೂಡಾ ಒಬ್ಬರು. ಅವರ ಹೋರಾಟದ ಕಾಲದಲ್ಲಿ ಉಳ್ಳಾಲ ಸಣ್ಣ ಪ್ರಾಂತ್ಯ ಕೂಡಾ ಆಗಿತ್ತು” ಎಂದು ವಿವರಿಸಿದರು.
ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಇದರ ರಿಜಿಸ್ಟ್ರಾರ್ ಡಾ. ಆಲ್ವಿನ್ ವಿನ್ಸೆಂಟ್ ಡೇಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಗುರು ರೆ. ಫಾ.ವಿಕ್ಟರ್ ಡಿ’ಮೆಲ್ಲೊ ಆಶಯ ಭಾಷಣ ಮಾಡಿದರು. ಸೈಂಟ್ ಅಲೋಶಿಯಸ್ ಕಾಲೇಜಿನ ಡೈರೆಕ್ಟರ್ ಡಾ. ಫಾ.ಮೆಲ್ವಿನ್ ಪಿಂಟೊ ಅಭಿನಂದನಾ ಭಾಷಣ ಮಾಡಿದರು.
ಕ್ಯಾಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಎಂ.ಜಿ.ಮೋಹನ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ದೇವಕಿ ಆರ್. ಉಳ್ಳಾಲ, ಆಲಿಯಬ್ಬ ಮತ್ತಿತರರು ಉಪಸ್ಥಿತರಿದ್ದರು. ಆನಂದ ಅಸೈಗೋಳಿ ಸ್ವಾಗತಿಸಿ, ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿ, ಕೇರಾ ಕುವೆಲ್ಲೊ ವಂದಿಸಿದರು.