ಈ ಭೂಮಿಗೆ ನಾವೆಲ್ಲಾ ಅತಿಥಿಗಳು.ಇಲ್ಲಿಯ ಪ್ರತಿಯೊಂದು ಸಸ್ಯಾದಿ ಸಂಪತ್ತು, ಧಾನ್ಯಾದಿ ಸಂಪತ್ತು ಹಾಗೂ ಹಿರಣ್ಯಾಧಿ ಸಂಪತ್ತು ಎಲ್ಲಾ ಮನುಷ್ಯನಿಗೋಸ್ಕರವೇ ನಿರ್ಮಾಣವಾಗಿದೆಯೇನೋ ಎನ್ನುವ ಮಟ್ಟಿಗೆ ನಾವು ಇದನ್ನು ಅನುಭವಿಸುತ್ತಿರುತ್ತೇವೆ. ಈ ಪ್ರಕೃತಿಯ ವೈಭವದ ವರ್ಣನೆ ಶಬ್ಧಕ್ಕೆ ನಿಲುಕದ್ದು. ಗಿಡಮರಗಳ, ಹೂಬನಗಳ ಹಾಗೂ ಮೇಘಮಾಲೆಗಳ ಲೀಲಾವಿಲಾಸ ಇರಬಹುದು. ಉತ್ತುಂಗದ ಶಿಖರಗಳು, ಹಿಮಾಲಯದಂತಹ ಪರ್ವತ ಶ್ರೇಣಿಗಳು, ಗಂಗೆಯಂತಹ ಪುಣ್ಯವಾಹಿನಿಗಳು, ಪುಣ್ಯ ಕ್ಷೇತ್ರಗಳು, ಭೋರ್ಗರೆಯುತ್ತಾ ದಡಕ್ಕೆ ಅಪ್ಪಳಿಸುವ ಸಮುದ್ರ ತೆರೆಗಳು, ಮಹಾ ಸಾಗರಗಳು, ಜೀವಕ್ಕೆ ತಂಪೆರವ ಮಳೆಗಳು, ಅರುಣೋದಯ, ಚಂದ್ರಮನ ಬೆಳದಿಂಗಳು, ಮೈಮರೆಸುವ ಬಾನಂಗಳದ ನಕ್ಷತ್ರಗಳು, ಪ್ರಕೃತಿಯ ಈ ವಿನೋದ ವಿಹಾರಕ್ಕೆ ಈ ಅದ್ಭುತ ಶಕ್ತಿಗೆ ನಮಿಸಿದರಷ್ಟೇ ಸಾಲದು, ನಮ್ಮ ನಮ್ಮ ಜವಾಬ್ಧಾರಿ ಅರಿತು ಕೆಲಸ ಮಾಡಿದಾಗ ಮಾತ್ರ ಸಾರ್ಥಕತೆ.
ಕಲಾವಿದ ಗಣೇಶ ದೊಡ್ಡಮನಿ ಅವರು ಇಂತಹ ಪ್ರಕೃತಿಯ ಸೌಂದರ್ಯ ನೋಡುತ್ತಾ ಧ್ಯಾನಾಸಕ್ತನಾಗಿಯೋ ಯೋಗ ಮಾಡುತ್ತಾ ಕುಳಿತು ಕೊಂಡವರಲ್ಲ. ಬದಲಾಗಿ ಈ ಪ್ರಕೃತಿಯ ಸನ್ನಿವೇಶಗಳನ್ನೇ ಅಮೂರ್ತ ರೂಪದ ಕಲಾಕೃತಿಗಳನ್ನಾಗಿಸಿದ್ದಾರೆ. “Petrichor-smell of nature” ಹೆಸರಿನಲ್ಲಿ ಈ ಕಲಾಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದಾರೆ.ಭೂಮಿಗೆ ಬಿದ್ದ ಮೊದಲ ಮಳೆಯ ಮಣ್ಣಿನ ಪರಿಮಳವನ್ನೇ ಚಿತ್ರದ ವಸ್ತುವನ್ನಾಗಿ ಆಯ್ದುಕೊಂಡಿದ್ದಾರೆ. ಲೋಕೋತ್ತರ ಸೌಂದರ್ಯವನ್ನೇ ಅರಸಿ, ಆಸ್ವಾದಿಸಿ, ಸಂಸ್ಕರಿಸಿ ಹಾಗೂ ಪರಿಷ್ಕರಿಸಿ ಚಿತ್ರಗಳನ್ನಾಗಿಸಿ ನಮ್ಮೆದುರು ತೆರೆದಿಟ್ಟಿದ್ದಾರೆ. ಮಣ್ಣಿನ ಮಡಕೆ ಮೇಲೆ ಚಿತ್ರರಚಿಸಿ ಮಣ್ಣಿನ ಪ್ರೀತಿ ತೋರಿದ್ದಾರೆ. ವಿವಿಧ ಗಾಢವಾದ ವರ್ಣಗಳನ್ನು ಬಳಸಿದ್ದರೂ ಕೂಡ ಬಯಲಿನ ಬೆಳಕಿನಲ್ಲಿ ತಿಳಿವರ್ಣದಂತೆ ಗೋಚರಿಸುತ್ತವೆ. ನಿಸರ್ಗದಿಂದ ಹೊಮ್ಮುವ ಬಣ್ಣದ ಬೆಡಗುಗಳನ್ನು ಅಲಂಕಾರಿಕ ಬಣ್ಣಗಳಿಂದ, ಗಿಡ ಮರಗಳನ್ನು ಪೂರ್ತಿಯಾಗಿ ಚಿತ್ರಿಸದೆ ಸರಳ ಆಕೃತಿಗಳ ನಿರೂಪಣೆಯಿಂದಾಗಿ ನೋಡುಗರಿಗೆ ಉಲ್ಲಾಸದಾಯಕವಾದ ಅನುಭವ ನೀಡುತ್ತದೆ. ಇಲ್ಲಿ ಮನುಷ್ಯ, ಮತ್ತು ಯಾವ ಜೀವಿಯನ್ನೂ ತೋರಿಸದೆ, ಪ್ರಪಂಚದ ರಾಗ ದ್ವೇಷಗಳನ್ನು ಮರೆಮಾಡಿ ಶುದ್ಧ, ಶುಭ್ರ ಮಧುರವಾದ ಕಾವ್ಯದ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ. 50ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಐವತ್ತು ಕಲಾಕೃತಿಗಳನ್ನು ಪ್ರದರ್ಶಿಸಿದ ಗಣೇಶ ದೊಡ್ಡಮನಿ ಅವರ ಮುಂದಿನ ಕಲಾಜೀವನ ಇನ್ನೂ ಉಜ್ವಲವಾಗಿರಲಿ ಎಂದು ಹಾರೈಸೋಣ. 20ನವೆಂಬರ 2023ರಂದು ಶ್ರೀ ಗುರುರಾಜ್ ಕರ್ಜಗಿ, ಶ್ರೀ ಚಿ.ಸು. ಕೃಷ್ಣಸೆಟ್ಟಿ, ಶ್ರೀ ಚಂದ್ರಹಾಸ ಜಾಲಿಹಾಳ್, ಶ್ರೀಮತಿ ಗೀತಾಂಜಲಿ ಮೈನಿ ಅವರಿಂದ ಉದ್ಘಾಟನೆಗೊಂಡ ಈ ಕಲಾಪ್ರದರ್ಶನ 26ನೇ ನವೆಂಬರ್ ತನಕ ಚಿತ್ರಕಲಾಪರಿಷತ್ತಿನಲ್ಲಿ ನಡೆಯಲಿದೆ. ನೀವೂ ನೋಡಿ ಬನ್ನಿ.
- ಗಣಪತಿ ಎಸ್.ಹೆಗಡೆ
ಕಲಾವಿದರು/ಕಲಾವಿಮರ್ಶಕರು