ಉಡುಪಿ: ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿಗೆ ಈ ಬಾರಿ ಕನ್ನಡದ ಶ್ರೇಷ್ಠ ಹಿರಿಯ ಕಲಾವಿದ, ನಿರ್ದೇಶಕ, ಸಂಘಟಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪತ್ರ, ಫಲಕ ಹಾಗೂ ನಗದು ರೂ.25,000/- ದೊಂದಿಗೆ ಗೌರವಿಸಿ, ಇದೇ ಬರುವ ಜನವರಿ ತಿಂಗಳಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕಾಸರಗೋಡು ಚಿನ್ನಾ :
‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಮಾತು ಸಾಮಾನ್ಯವಾದುದು. ಹಸಿರು ಸಸ್ಯರಾಶಿಗೆ ಮಾರುಹೋದ ಆಡು, ಬಾಯನ್ನು ಸೋಕಿಸಿದ್ದೇ ತಡ, ಕ್ಷಣಾರ್ಧದಲ್ಲಿ ಏನು ನಡೆಯುತ್ತಿದೆ ಎಂಬುದು ಅರಿವಿಗೆ ಬರುವ ಮೊದಲೇ ಸಸ್ಯಸಂಪತ್ತು ಅದಕ್ಕೆ ಆಹಾರವಾಗಿರುತ್ತದೆ. ಅದೇ ರೀತಿ ಕಾಸರಗೋಡು ಚಿನ್ನ ಕೈಯಾಡಿಸದ ಕ್ಷೇತ್ರಗಳಿಲ್ಲ. ಶ್ರದ್ಧೆ ಮತ್ತು ಪ್ರಮಾಣಿಕತನದಿಂದ ಯಾವುದೇ ಭಾಷೆಯ ನಾಟಕವಿರಲಿ, ಸಿನೆಮಾದ ಪಾತ್ರಗಳಿರಲಿ, ಆಕಾಶವಾಣಿ, ಧಾರವಾಹಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಲಾವಂತಿಕೆಯಿಂದ ಕೂಡಿದ ಸೃಜನಶೀಲ ಮನೋಭೂಮಿಕೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವರು. ‘ಹಿಡಿದ ಕೆಲಸ ಪೂರ್ಣವಾಗುವವರೆಗೆ ಬಿಡಲಾರೆ’ ಎಂಬ ಛಲದಂಕಮಲ್ಲನಂತೆ ಯಾವುದೇ ಕ್ಷೇತ್ರಕ್ಕೆ ನ್ಯಾಯ ಒದಗಿಸುವಲ್ಲಿ ತತ್ಪರತೆಯಿಂದ ಕೆಲಸ ಮಾಡುವ ಮಹಾನ್ ಶಕ್ತಿಯೇ ಕಾಸರಗೋಡು ಚಿನ್ನಾ.
ಕಾಸರಗೋಡು ಚಿನ್ನಾ ಎಂದೇ ಪರಿಚಿತರಾದ ಇವರ ನಿಜವಾದ ಹೆಸರು ಶ್ರೀನಿವಾಸ ರಾವ್ ಎಸ್. ತಮ್ಮ ಬಿ.ಎ ವಿದ್ಯಾಭ್ಯಾಸವನ್ನು ಮುಗಿಸಿ, ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಡಿಪ್ಲೋಮೋದಲ್ಲಿ ಚಿನ್ನದ ಪದಕವನ್ನು ಪಡೆದ ಚಿನ್ನಾ ಅವರು ಸಂಘಟಕರಾಗಿ, ನಟನಾಗಿ, ರಂಗ ನಿರ್ದೇಶಕರಾಗಿ, ಚಲನಚಿತ್ರ ನಿರ್ದೇಶಕರಾಗಿ ಚಿರಪರಿಚಿತರು.
1969ರಲ್ಲಿ ‘ತಾಳಿ ಕಟ್ಟೋಕೆ ತಯಾರ್’ ಕನ್ನಡ ನಾಟಕದಲ್ಲಿ ಅಭಿನಯಿಸುವ ಮುಖಾಂತರ ರಂಗಪ್ರವೇಶ ಮಾಡಿದ ಇವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಕನ್ನಡ, ತುಳು, ಮಲಯಾಳ, ಕೊಂಕಣಿ, ಇಂಗ್ಲೀಷ್ ಮುಂತಾದ ಭಾಷೆಗಳ 400ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡದಲ್ಲಿ ‘ಹೇಡಿಗಳು’, ‘ಈಡಿಪಸ್’, ‘ಮಣ್ಣಿನ ಬೊಂಬೆ’, ‘ಕೆಥಾರ್ಸಿಸ್’, ‘ಬಂದಾ ಬಂದಾ ಸರದಾರ’, ‘ಗಣ ಗಣ ರಾಜ್ಯ’, ‘ಮತ್ತೆ ಮೊಹೆಂಜದಾರೊ’, ‘ಗುಲಾಮನ ನಗು’, ‘ಸಿದ್ಧತೆ’, ‘ಪ್ರಶ್ನೆ’, ‘’ಟಿಂಗರ ಬುಡ್ಡಣ್ಣ, ‘ಆನಿ ಬಂತಾನಿ’ ಮತ್ತು ‘ದೃಷ್ಟಿ’, ಕೊಂಕಣಿಯಲ್ಲಿ ‘ದೋನಿ ಘಡಿ ಹಸ್ಸೂನು ಕಾಡಿ’, ‘ಜಾಕ್‌ಪೋಟ್ ಜನ್ನಾ’, ‘ಶಾಂತಿ ನಿವಾಸ’, ‘ಚೋರುಗುರು ಚಾಂಡಾಲ ಶಿಷ್ಯು’,’ ಧರ್ಮಂ ಶರಣಂ ಗಚ್ಛಾಮಿ’, ‘ಗಾಂಟಿ’ ಹಾಗೂ ‘ಕರ್ಮಾಧೀನ’, ತುಳುವಿನಲ್ಲಿ ‘ಕೌನ್ಸಿಲರ್ ಕೊಗ್ಗಣ್ಣೆ ’, ‘ಸೀಂಕ್ರನ ಕಿತಾಪತಿ’, ‘ಈ ಪ್ರಾಯೋಡ್ಲ ಬರವಾ?’ ಮತ್ತು ‘ನಿನ್ನ ಮೋಕೆದಾ’, ಇಂಗ್ಲೀಷ್ನಲ್ಲಿ ‘ಡಂಬ್ ವೈಫ್ ಆಫ್ ಚೀಪ್ ಸೈಡ್’ ಹಾಗೂ ‘ರೀಫಂಡ್’, ಮಲಯಾಳಂನಲ್ಲಿ ‘ಡ್ರಾಕುಲ’ ಇವರು ಅಭಿನಯಿಸಿದ ಪ್ರಮುಖ ನಾಟಕಗಳು.
ಕನ್ನಡ, ತುಳು, ಕೊಂಕಣಿ ಮಲಯಾಳಂ, ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿ ನಾಟಕಗಳನ್ನು ನಿರ್ದೇಶಿಸಿ, ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಖ್ಯಾತಿ ಇವರದ್ದು. ‘ರಂಗ ಚಿನ್ನಾರಿ’ ಎಂಬ ಸಂಸ್ಥೆಯನ್ನು ಕಟ್ಟಿ, ಕನ್ನಡದ ಹಲವು ಕೆಲಸಗಳನ್ನು ನಿರಂತರವಾಗಿ ಕಾಸರಗೋಡು ಪರಿಸರದಲ್ಲಿ ನಡೆಸುತ್ತಿರುವ ಕನ್ನಡ ಪ್ರೇಮಿ ಇವರು. ನಿರೂಪಕರಾಗಿ 20 ಕೊಂಕಣಿ ಸಾಧಕರನ್ನು ಬೆಂಗಳೂರು ದೂರದರ್ಶನಕ್ಕಾಗಿ ಸಂದರ್ಶನ ಮಾಡಿರುವ ಇವರು ದೇಗುಲ ದರ್ಶನ, ನಮ್ಮೂರ ಸವಿರುಚಿ ಹಾಗೂ ಬೆಂಗಳೂರು ದೂರದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಹಲವು ಕೃತಿಗಳನ್ನು ಕನ್ನಡದಿಂದ ಮಲಯಾಳಂಗೆ, ಮಲಯಾಳಂದಿಂದ ತುಳು, ಕೊಂಕಣಿ ಹಾಗೂ ಕನ್ನಡಕ್ಕೆ ಅನುವಾದ ಮಾಡಿದ್ದು ಸಾಹಿತ್ಯ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡ ಧೀಮಂತ. ಸುಮಾರು ನೂರಕ್ಕೂ ಹೆಚ್ಚು ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಮಂಗಳೂರು ಆಕಾಶವಾಣಿಯಲ್ಲಿ 1977ರಿಂದ ಕನ್ನಡ, ಕೊಂಕಣಿ, ತುಳು ಭಾಷೆಗಳಲ್ಲಿ ‘ಬಿಹೈ’ ಗ್ರೇಡ್ ಕಲಾವಿದರಾಗಿ ನೂರಾರು ನಾಟಕಗಳಲ್ಲಿ ಅಭಿನಯ, ‘ತೆನ್ನಾಲಿರಾಮ’ ‘ರಾಷ್ಟ್ರೀಯಜಾಲ’ ಹಿಂದಿ ಧಾರಾವಾಹಿಯಲ್ಲಿ ‘ಖುಲ್ಲನ್’ ಪಾತ್ರದಲ್ಲಿ ಅಭಿನಯ ಹಾಗೂ ನಿರಂಜನರ ‘ಚಿರಸ್ಮರಣೆ’ ಧಾರಾವಾಹಿಯಲ್ಲಿ ‘ಮೇಸ್ತ್ರ’ ಪಾತ್ರದಲ್ಲಿ ನಟಿಸಿ ಜನರಿಂದ ಸೈ ಅನ್ನಿಸಿಕೊಂಡ ಮೇರು ಕಲಾವಿದ.
‘ಅಣ್ಣನ ಹೆಂಡತಿ’, ‘ಚಿನ್ನು’, ‘ಫಜೀತಿ’ ಮುಂತಾದ ಕಿರುಚಿತ್ರ ಹಾಗೂ ‘ಈ ಟಿವಿ’ಯಲ್ಲಿ ಪ್ರಸಾರವಾದ ‘ಬುರುಡೆ ಭವಿಷ್ಯ’ ಧಾರವಾಹಿಯಲ್ಲಿ ಪಾತ್ರ ವಹಿಸಿದ ಇವರು ‘ಸರ್ಪ್ರೈಸ್’ ಎಂಬ ಹಿಂದಿ ಭಾಷೆಯ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಉತ್ತಮ ಮೂಕಾಭಿನಯ ಕಲಾವಿದರೂ ಆಗಿರುವ ಇವರು ‘ಅಭಿವ್ಯಕ್ತಿ’, ‘ಮೂಡ್’ ಹಾಗೂ ‘ಎಕ್ಸ್ ಪ್ರೆಷನ್’ ಎಂಬ ಪೂರ್ಣ ಪ್ರಮಾಣದ ಮೂಕಾಭಿನಯವನ್ನು ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 400ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿ ಜನರ ಮನಸನ್ನು ಗೆದ್ದಿದ್ದಾರೆ. ಪೂರ್ಣಾವಧಿ ಮೂಕಾಭಿನಯದ ಕಲೆಯನ್ನು ಗಲ್ಫ್ ರಾಷ್ಟ್ರಗಳವರೆಗೆ ಕೊಂಡುಹೋಗಿ ಅಭಿನಯಿಸಿ, ನಿರ್ದೇಶಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಚಿನ್ನ .
ಲಾರಿಯ ಮೇಲೆ ನಾಟಕ ಮಾಡುವ ಮುಖಾಂತರ ರಂಗಭೂಮಿಯಲ್ಲಿ ಇವರು ಮಾಡಿದ ಹೊಸ ಆವಿಷ್ಕಾರ ‘ಲಾರಿ ನಾಟಕ’. ಈ ಪ್ರಯೋಗದಲ್ಲಿ ‘ನಾಯಿಬಾಲ’ ಎಂಬ ನಾಟಕವು ಕಾಸರಗೋಡಿನಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಒಟ್ಟು 108 ಕಡೆಗಳಲ್ಲಿ ಪ್ರದರ್ಶನಗಳನ್ನು ಕಂಡಿದೆ.
ಸಂಗೀತ ಕ್ಷೇತ್ರದಲ್ಲೂ ಒಲವು ಹೊಂದಿರುವ ಇವರು ಸುಗಮ ಸಂಗೀತ ಕ್ಷೇತ್ರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಖ್ಯಾತ ಗಾಯಕ ವೈ. ಕೆ. ಮುದ್ದುಕೃಷ್ಣ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಸುಗಮ ಸಂಗೀತ ಕಲಾವಿದರ ಸಂಗಮದೊಂದಿಗೆ ಗಡಿಪ್ರದೇಶವಾದ ಕಾಸರಗೋಡಿನ ಮೂವತ್ತು ಪ್ರದೇಶಗಳಲ್ಲಿ ‘ಗೀತ ಸಂಗೀತ ರಥ’ ಅಭಿಯಾನವನ್ನು ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಒಟ್ಟು 3 ಲಕ್ಷ ಜನರು ಸಾಕ್ಷಿಯಾಗಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಪ್ರಪ್ರಥಮವಾಗಿ ಕುಂಬಳೆಯಿಂದ ಬೆಂಗಳೂರಿಗೆ ‘ಯಕ್ಷತೇರು’ ಅಭಿಯಾನ ಆಯೋಜಿಸಿದವರು ಇವರು. 4 ದಿನಗಳ ಈ ಅಭಿಯಾನದಲ್ಲಿ 28 ಪ್ರದರ್ಶನದೊಂದಿಗೆ ಸುಮಾರು ಒಂದೂವರೆ ಲಕ್ಷ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾಸರಗೋಡಿನ ಮೂರು ಸಾವಿರ ಕನ್ನಡ ವಿದ್ಯಾರ್ಥಿಗಳಿಗೆ ‘ರಂಗಭೂಮಿ’ ಕುರಿತು ಮಾಹಿತಿ ಕಾರ್ಯಗಾರ ನಡೆಸಿರುವ ಇವರು, ಬೀದಿ ಬದಿಯ ಅವಿದ್ಯಾವಂತ ಮಕ್ಕಳಿಗೆ ರಂಗ ತರಬೇತಿ ನೀಡಿ ಅವರಿಂದಲೇ ಮಾಡಿಸಿದ ‘ತದಿಗಿಣತೋಂ’ ಎಂಬ ಬೀದಿ ನಾಟಕವನ್ನು 25 ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದ್ದಾರೆ.
ಚಲನಚಿತ್ರ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿರುವ ಇವರು ಕನ್ನಡದ ‘ಫಣಿಯಮ್ಮ’, ‘ಪ್ರಾಯ ಪ್ರಾಯ ಪ್ರಾಯ’, ‘ಕೆಂಡದ ಮಳೆ’, ‘ರಾವಣ ರಾಜ್ಯ’, ‘ದರೋಡೆಗಳ ನಡುವೆ’, ‘ಪ್ರೇಮಾಗ್ನಿ’, ‘ಆಸ್ಫೋಟ’, ‘ವೆಂಕಟೇಶ್ವರ ಮಹಿಮೆ’, ‘ಮೈಸೂರು ಮಲ್ಲಿಗೆ’, ‘ಸಾಗರ ದೀಪ’, ‘ಓಂಕಾರ’, ‘ನಾನು ಮತ್ತು ನನ್ನ ಕನಸು’, ‘ದೇವರ ನಾಡಿನಲ್ಲಿ’, ಬ್ರೇ’ಕಿಂಗ್ ನ್ಯೂಸ್’ ಹಾಗೂ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ತುಳುವಿನಲ್ಲಿ ‘’ಬಂಗಾರ್ ಪಟ್ಲೆರ್’ ಮತ್ತು ಮಲಯಾಳಂನಲ್ಲಿ ‘ಸ್ನೇಹ ಸಿಂಧೂರಂ’ ಹೀಗೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಇವರ ‘ಉಜ್ವಾಡು’ ಕೊಂಕಣಿ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಹಾಗೂ ಅದೇ ಚಿತ್ರದ ಕಥೆ/ಚಿತ್ರಕಥೆ/ನಿರ್ದೇಶನಕ್ಕೆ ಉತ್ತಮ ನಿರ್ದೇಶಕ ರಾಜ್ಯ ಪ್ರಶಸ್ತಿ, ಕಾಸರಗೋಡಿನ ಸರಕಾರೀ ಕಲಾ ಶಾಲೆಯಿಂದ ಉತ್ತಮ ನಟ ಪ್ರಶಸ್ತಿ, ಕಲ್ಲಿಕೋಟೆ ವಿಶ್ವವಿದ್ಯಾನಿಲಯದಿಂದ ‘ಉತ್ತಮ ನಟ’ ಪ್ರಶಸ್ತಿ, ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ‘ಉತ್ತಮ ನಟ’ ಪ್ರಶಸ್ತಿ, ‘ಬಂದಾ ಬಂದಾ ಸರದಾರ’ ನಾಟಕಕ್ಕೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಉತ್ತಮ ನಟ’ ಪ್ರಶಸ್ತಿ, ‘ಗುಲಾಮನ ನಗು’ ಕನ್ನಡ ನಾಟಕಕ್ಕೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಉತ್ತಮ ನಟ’ ಪ್ರಶಸ್ತಿ, ರಾಷ್ಟ್ರಮಟ್ಟದ ಕೊಂಕಣಿ ನಾಟಕ ಸ್ಪರ್ಧೆಯಲ್ಲಿ ‘ಉತ್ತಮ ನಟ’ ಪ್ರಶಸ್ತಿ, ‘ಗಾಂಟಿ’ ನಾಟಕಕ್ಕೆ ‘ಉತ್ತಮ ನಿರ್ದೇಶಕ’ ಪ್ರಶಸ್ತಿ (ಈ ನಾಟಕ ಇನ್ನಿತರ ಏಳು ಪ್ರಶಸ್ತಿಗಳನ್ನು ಗೆದ್ದಿದೆ.), ಮಂಗಳೂರಿನ ರಂಗ ಸಂಗಾತಿಯಿಂದ ‘ರಂಗಭಾಸ್ಕರ ಪ್ರಶಸ್ತಿ’, ಜೀವಮಾನದ ಸಾಧನೆಗಾಗಿ ‘’ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ತೀಸ್ ಕಾಣಿಯೊ’ ಪುಸ್ತಕಕ್ಕಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಉತ್ತಮ ‘ಕೊಂಕಣಿ ಪುಸ್ತಕ ಪ್ರಶಸ್ತಿ’, ದ.ಕ. ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ‘ಸಂದೇಶ ಪ್ರತಿಷ್ಠಾನ ಪ್ರಶಸ್ತಿ’, ಹಾಗೂ ದೇಶ ವಿದೇಶಗಳ 500ಕ್ಕೂ ಮಿಕ್ಕಿದ ಸಂಘಟನೆಗಳಿಂದ ದೊರೆತ ಸನ್ಮಾನಗಳು ಇವರ ಕಲಾ ಸೇವೆಗೆ ಸಾಕ್ಷಿ.