ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಯಲ್.ಸಿ.ಆರ್.ಐ. ರಂಗಮಂದಿರದಲ್ಲಿ ಪಾಂಡಿಚೇರಿಯ ಆದಿಶಕ್ತಿ ಜಗತ್ಪ್ರಸಿದ್ಧ ರಂಗತಂಡದ ‘ಭೂಮಿ’(ಇಂಗ್ಲೀಷ್) ನಾಟಕವು ದಿನಾಂಕ 08-12-2023 ಶುಕ್ರವಾರ ಸಂಜೆ 7.00ಕ್ಕೆ ಸರಿಯಾಗಿ ನಡೆಯಲಿದೆ. ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನೇತೃತ್ವದ ಜೊತೆಯಲ್ಲಿ ಕಾಲೇಜಿನ ಕನ್ನಡ ವಿಭಾಗ, ಅರೆಹೊಳೆ ಪ್ರತಿಷ್ಠಾನ ಮತ್ತು ಅಸ್ಥಿತ್ವ ಮಂಗಳೂರು ಸಂಸ್ಥೆಗಳು ಒಂದಾಗಿ ಸೇರಿಕೊಂಡಿವೆ.
ದೇಶದ ಶ್ರೇಷ್ಠ ಸೃಜನಶೀಲ ರಂಗಚಿಂತಕಿ, ರಂಗಶೋಧಕಿ ಮತ್ತು ರಂಗನಿರ್ದೇಶಕಿ ವೀಣಾ ಪಾಣಿ ಚಾವ್ಲಾ ಅವರು ಪಾಂಡಿಚೇರಿಯಲ್ಲಿ ಬೆಳೆಸಿದ ಪ್ರಖ್ಯಾತ ರಂಗಸಂಸ್ಥೆ ಆದಿಶಕ್ತಿ. ಬಾಲಿ, ಗಣಪತಿ, ಬೃಹನ್ನಳ ಮೊದಲಾದ ಈ ತಂಡದ ನಾಟಕಗಳು ದೇಶ ವಿದೇಶಗಳಲ್ಲಿ ಮಹತ್ವದ ರಂಗಪ್ರಯೋಗಗಳಾಗಿ ರಂಗಾಸಕ್ತರನ್ನು ಅಚ್ಚರಿಗೊಳಿಸಿವೆ. ವೀಣಾಪಾಣಿ ಚಾವ್ಲಾ ಅವರ ಗುರುತನದಲ್ಲಿ ಸುದೀರ್ಘ ವರ್ಷಗಳಲ್ಲಿ ಪಳಗಿದ ಪ್ರಬುದ್ಧ ಕಲಾವಿದರ ತಂಡವೇ ಆದಿಶಕ್ತಿಯ ಭದ್ರಬುನಾದಿಯಾಗಿದೆ. ನಟನೆಯ ಕ್ರಮ, ರಂಗವಿನ್ಯಾಸ, ಹೊಸಬಗೆಯಲ್ಲಿ ಪ್ರೇಕ್ಷಕನಿಗೆ ಚಿಂತನೆಗಳನ್ನು ಉಣಬಡಿಸುವ ಬಗೆ, ವಿನೂತನ ರಂಗಕಲ್ಪನೆ, ಪ್ರಚಲಿತ ಕಥಾವಸ್ತುವಿಗೆ ಕೊಡುವ ಹೊಸ ರಂಗಸ್ಪರ್ಶ ಇತ್ಯಾದಿಗಳಲ್ಲಿ ಆದಿಶಕ್ತಿಯು ದೇಶವಿದೇಶಗಳ ರಂಗಚಿಂತಕರ ಗಮನ ಸೆಳೆದಿದೆ.
ವೀಣಾಪಾಣಿ ಚಾವ್ಲಾ ಅವರ ನಿಧನದ ಬಳಿಕವೂ ಆದಿಶಕ್ತಿ ತಂಡ ತನ್ನ ಗುರು ತೋರಿದ ರಂಗಮಾರ್ಗದಲ್ಲಿ ಇನ್ನಷ್ಟು ಮುನ್ನಡೆದಿದೆ. ಆದಿಶಕ್ತಿಯ ಇತ್ತೀಚೆಗಿನ ಹೊಸ ನಾಟಕವೇ ‘ಭೂಮಿ’. ಸಾರಾ ಜೋಸೆಫ್ ಅವರ ಮಲಯಾಳಂ ಮೂಲದ ನಾಟಕವನ್ನು ಆದಿಶಕ್ತಿಯ ಹಿರಿಯ ನಿರ್ದೇಶಕ, ನಟ ವಿನಯ ಕುಮಾರ್ ಹೊಸ ಸಂವೇದನೆಗಳೊಂದಿಗೆ ರಂಗಕ್ಕೆ ಅಳವಡಿಸಿದ್ದಾರೆ. ಮುಖ್ಯಭೂಮಿಕೆಯ ಜೊತೆಯಲ್ಲಿ ಸಂಗೀತವೂ ಅವರದೇ ಆಗಿದೆ.
ಹೆಣ್ಣು ಮತ್ತು ಹಿಂಸೆಯ ಹೆಣಿಗೆಯು ಯಾವಕಾಲಕ್ಕೂ ಕಾಡುವ ಸಂಗತಿಯಾಗಿದ್ದು ನಾಟಕವು ಈ ನಿಟ್ಟಿನಲ್ಲಿ ತನ್ನ ಮಿಡಿತ ಹೊಂದಿದೆ ಎನ್ನುತ್ತಾರೆ ನಿರ್ದೇಶಕ ವಿನಯಕುಮಾರ್. ಜಗತ್ತಿನ ರಂಗಾಸಕ್ತರನ್ನು ಗುರಿಯಾಗಿಟ್ಟ ಈ ನಾಟಕ ಆಂಗ್ಲ ಭಾಷೆಯನ್ನು ಬಳಸುತ್ತಿದ್ದರೂ ಯಾವುದೇ ಭಾಷೆಯ ಪ್ರೇಕ್ಷಕನಿಗೆ ಕೂಡ ತಲುಪುವಷ್ಟು ಪ್ರಬುದ್ಧ ರಂಗಭಾಷೆ ಹೊಂದಿದೆ.
ಮಂಗಳೂರಿನಲ್ಲಿ ಆದಿಶಕ್ತಿಯ ರಂಗಪ್ರದರ್ಶನವು ಆಗುತ್ತಿರುವುದು ಚಾರಿತ್ರಿಕವಾಗಿ ಪ್ರಪ್ರಥಮ ಬಾರಿ. ಸಂತ ಅಲೋಶಿಯಸ್ ಕಾಲೇಜಿನ ಹವಾನಿಯಂತ್ರಿತ ಸುಸಜ್ಜಿತ ಯಲ್.ಸಿ.ಆರ್.ಐ. ಸಭಾಂಗಣದಲ್ಲಿ ಸಮಯಕ್ಕೆ ಸರಿಯಾಗಿ ನಾಟಕವು ಆರಂಭವಾಗಲಿದೆ. ನಾಟಕವು ಪೂರ್ತಿಯಾಗಿ ಉಚಿತವಾಗಿದ್ದು, ಪ್ರದರ್ಶನವನ್ನು ಪೋಷಿಸುವುದಕ್ಕಾಗಿ ರಂಗಾಸಕ್ತರಿಂದ ಉದಾರ ದೇಣಿಗೆಯನ್ನು ಕೃತಜ್ಞತಾಪೂರ್ವಕ ಸ್ವೀಕರಿಸಲಾಗುವುದು.