ಮಂಗಳೂರು : ಶ್ರೀಶ ಯಕ್ಷೋತ್ಸವ ಸಮಿತಿ, ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ತಲಕಳ ಮತ್ತು ಶ್ರೀ ತಲಕಳ ಮೇಳ ಇವರುಗಳ ಸಹಯೋಗದಲ್ಲಿ 15ನೇ ವರ್ಷದ ‘ಶ್ರೀಶ ಯಕ್ಷೋತ್ಸವ -2023’ ಮುರನಗರದಲ್ಲಿ ದಿನಾಂಕ 15-12-2023ರಿಂದ 17-12-2023ರವರೆಗೆ ನಡೆಯಿತು.
ಈ ಸಮಾರಂಭವು ದಿನಾಂಕ 15-12-2023ರಂದು ಉದ್ಘಾಟನೆಗೊಂಡು, ಸಭಾ ಕಾರ್ಯಕ್ರಮದ ನಂತರ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಸದಸ್ಯರಿಂದ ‘ಕರ್ಣಾರ್ಜುನ’ ಹಾಗೂ ಶ್ರೀ ತಲಕಳ ಮೇಳದ ಕಲಾವಿದರಿಂದ ‘ಪ್ರದೋಷ ಪೂಜೆ’ ಎಂಬ ಪ್ರಸಂಗ ಪ್ರದರ್ಶನಗೊಂಡಿತು. ದಿನಾಂಕ 16-12-2023ರಂದು ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಧರ್ಮ ದಂಡನೆ’ ಹಾಗೂ ಶ್ರೀ ತಲಕಳ ಮೇಳದ ಕಲಾವಿದರಿಂದ ‘ಕಾರಿಂಜ ಕಾಂಜವೆ’ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.
ದಿನಾಂಕ 17-12-2023ರಂದು ಯಕ್ಷಗಾನ ಗುರುಗಳಾದ ಶ್ರೀಯುತ ಗಣೇಶ್ ಕೊಲೆಕಾಡಿ ಇವರ ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಇಲ್ಲಿರುವ ನಿವಾಸಕ್ಕೆ ತೆರಳಿ ಅವರ ಶಿಷ್ಯ ದಿ. ಶ್ರೀಶ ತಲಕಳ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೇಟ, ಶಾಲು ಸ್ಮರಣಿಕೆ, ಹಾರ ಫಲವಸ್ತು, ಪ್ರಶಸ್ತಿ ಪತ್ರದೊಂದಿಗೆ ನಗದು ರೂ.10,000/- ನೀಡಿ ಗೌರವಿಸಲಾಯಿತು. ಶ್ರೀಶ ಯಕ್ಷೋತ್ಸವ ಸಮಿತಿ ಸದಸ್ಯರಾದ ಶ್ರೀಮತಿ ಶರ್ಮಿಳಾ ಪುರಂದರ, ಶ್ರೀನಿವಾಸ ಉಡುಪ, ಮೈತ್ರಿ ಉಡುಪ, ರವಿ ಕುಮಾರ್, ಶರಣ್ ರಾಜ್ ಪೂಜಾರಿ, ಸುಮತಿ ಅದ್ಯಪಾಡಿ, ತಲಕಳ ಮೇಳ ಹಾಗೂ ಶ್ರೀಶ ಕಲಿಕಾ ಕೇಂದ್ರದ ಸಂಚಾಲಕರಾದ ಯೋಗಾಕ್ಷಿ ಗಣೇಶ್ ತಲಕಳ, ಮೇಲ್ವಿಚಾರಕರಾದ ಗಣೇಶ್ ತಲಕಳ, ಶ್ರೀಶ ತಲಕಳ ಅವರ ತಾಯಿ ಗುಲಾಬಿ ತಿಮ್ಮಪ್ಪ ಗುಜರನ್, ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೀರ್ತಿಶೇಷ ದಿವಂಗತ ಕೆ. ತಿಮ್ಮಪ್ಪ ಗುಜರನ್ ಸಂಸ್ಮರಣ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಪ್ರಸಂಗಕರ್ತ ಶ್ರೀ ಮಾಧವ ಭಂಡಾರಿ ಕುಳಾಯಿ ಇವರಿಗೆ ರೂ.10,000/- ನಗದಿನೊಂದಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ಗುರುಗಳಾದ ಶ್ರೀ ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ, ಹಿರಿಯ ಕಲಾವಿದ ಕೇಶವ ಶಕ್ತಿ ನಗರ, ಸಮಿತಿ ಸದಸ್ಯರಾದ ಶ್ರೀನಿವಾಸ ಉಡುಪ ಕತ್ತಲ್ಸಾರ್, ಶ್ರೀಮತಿ ಡಾ. ರತಿ ಶ್ರೀಧರ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಜಯ ಗೋಪಾಲ್ ಉಪಸ್ಥಿತರಿದ್ದರು.
ಮೇಳದ ಮಹಾಪೋಷಕರಾದ ಶ್ರೀ ಸಂಜಯ್ ಕುಮಾರ್ ರಾವ್ ಇವರು ಶ್ರೀಶ ಹಾಗೂ ಕೆ. ತಿಮ್ಮಪ್ಪ ಗುಜರನ್ ಇವರುಗಳ ಸಂಸ್ಮರಣೆಗೈದರು. ಶ್ರವಣ್ ಉಡುಪ ಸನ್ಮಾನ ಪತ್ರ ವಾಚಿಸಿ, ಸಮಿತಿ ಸದಸ್ಯರುಗಳಾದ ಶರ್ಮಿಳಾ ಪುರಂದರ, ಮೈತ್ರಿ ಉಡುಪ ಸಹಕರಿಸಿದರು. ಮೇಲ್ವಿಚಾರಕರಾದ ಗಣೇಶ್ ತಲಕಳ ಸ್ವಾಗತಿಸಿ, ಸಂಚಾಲಕರಾದ ಯೋಗಾಕ್ಷಿ ಗಣೇಶ್ ವಂದಿಸಿ ಕಲಾವಿದ ಮಾಣಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಸದಸ್ಯರಿಂದ ‘ಪಂಚವಟಿ –ಶೂರ್ಪನಖಾ ಮಾನಭಂಗ ಹಾಗೂ ಕೃಷ್ಣ ಲೀಲೆ’ ಯಕ್ಷಗಾನ ಪ್ರದರ್ಶನಗೊಂಡಿತು.