ಗಂಗೊಳ್ಳಿ : ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ‘ಕೊಗ್ಗ ದೇವಣ್ಣ ಕಾಮತ್’ ಅವರ ಹೆಸರಿನಲ್ಲಿ ನೀಡುವ 2023-24ರ ಸಾಲಿನ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಳೆ ಕಲಾವಿದ ಏಳ್ ಜಿತ್ ಸದಾನಂದ ಪ್ರಭು ಅವರನ್ನು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ. ದಿನಾಂಕ 28-01-2024ರಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 9ನೇ ವಾರ್ಷಿಕೋತ್ಸವದಲ್ಲಿ ಗಣ್ಯರಿಂದ ಈ ಪ್ರಶಸ್ತಿ ಪ್ರದಾನವಾಗಲಿದೆ.
ತೆಕ್ಕಟ್ಟೆ ರಾಮಚಂದ್ರ ಪ್ರಭು ಸರಸ್ವತಿ ದಂಪತಿಯ ಪುತ್ರರಾಗಿ 1935ರಲ್ಲಿ ಜನಿಸಿದ ಇವರು ಏಳ್ ಜಿತ್‌ನಲ್ಲಿ 5ನೇ ತರಗತಿಯವರೆಗೆ ಹಾಗೂ ಬೈಂದೂರು ಹೈಸ್ಕೂಲಿನಲ್ಲಿ 8ನೇ ತರಗತಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಬಾಲ್ಯದಿಂದಲೇ ಯಕ್ಷಗಾನದ ಒಲವು ಹೊಂದಿದ್ದ ಅವರು ತಮ್ಮ ದೊಡ್ಡಪ್ಪನವರಾದ ದಾಸಪ್ಪ ಪ್ರಭುಗಳಲ್ಲಿ ಮದ್ದಳೆಯ ಪ್ರಾಥಮಿಕ ಅಭ್ಯಾಸ ಪಡೆದರು. ನಂತರ ಗುರು ವೀರಭದ್ರ ನಾಯ್ಕರ ಯಜಮಾನಿಕೆಯ ಪ್ರಸಿದ್ಧ ಮೃದಂಗ ವಾದಕ ಬೇಳಂಜೆ ತಿಮ್ಮಪ್ಪ ನಾಯ್ಕರ ಒಡನಾಟ ಮಾಡಿ ಮದ್ದಲೆ ಹಾಗೂ ಚಂಡೆ ಎರಡನ್ನೂ ಕಲಿತುಕೊಂಡರು. ಈ ನಡುವೆ ಇವರು ಏಳ್ ಜಿತ್ ಅಂಚೆ ಕಚೇರಿಯಲ್ಲಿ ಇ.ಡಿ.ಡಿ.ಪಿ.ಯಾಗಿ ಸೇರ್ಪಡೆಗೊಂಡು ಬಳಿಕ ಪೋಸ್ಟ್ ಮನ್ ಆಗಿ ಭಡ್ತಿ ಹೊಂದಿ ಕುಂದಾಪುರ, ತೆಕ್ಕಟ್ಟೆ ಕೋಟೇಶ್ವರ, ಬೈಂದೂರು, ಶಿರೂರು ಹಾಗೂ ಕೊಲ್ಲೂರು ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಳಿಕ ತಮ್ಮನ್ನು ಸಂಪೂರ್ಣ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಾರಣಕಟ್ಟೆ ಕಮಲಶಿಲೆ, ಅಮೃತೇಶ್ವರೀ, ಬಗ್ವಾಡಿ, ನಾಗರಕೊಡಿಗೆ, ಗೋಳಿಗರಡಿ, ಬೈಂದೂರು, ಕಳವಾಡಿ, ಕೊಲ್ಲೂರು ಮೇಳ, ಚಿಕ್ಕ ಹೊನ್ನೇಸರ ಮೇಳ, ಕೊಡವೂರು ಮೇಳಗಳಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದರು. ಮರವಂತೆ ನರಸಿಂಹ ದಾಸರು ಹಾಗೂ ಶ್ರೀನಿವಾಸ ದಾಸರ ಜೊತೆಗೆ ತಿರುಗಾಟವನ್ನೂ ನಡೆಸಿದರು. ನವರಾತ್ರಿಯಲ್ಲಿ ಹೂವಿನಕೋಲು ಹಾಗೂ ಚಿಕ್ಕ ಮೇಳಗಳಲ್ಲಿಯೂ ಇವರು ಸೇವೆ ಸಲ್ಲಿಸಿದ್ದು, ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಆಷಾಢ ಏಕಾದಶಿಯಂದು ನಡೆಯುವ ತಾಳಮದ್ದಳೆಯಲ್ಲಿ ಮದ್ದಲೆಗಾರರಾಗಿ ತಮ್ಮ ಸಹಕಾರ ನೀಡುತ್ತಾ ಬಂದಿದ್ದಾರೆ. 30 ವರ್ಷಗಳ ಸುಧೀರ್ಘ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.