ಉಡುಪಿ : ಹಿರಿಯ ಜಾನಪದ ವಿದ್ವಾಂಸ ಸಮಾಜ ಸೇವಕ ಬನ್ನಂಜೆ ಬಾಬು ಅಮೀನ್ ಅವರು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಬನ್ನಂಜೆ ಬಾಬು ಅಮೀನ್ -80 ಅಭಿನಂದನಾ ಸಮಿತಿ ವತಿಯಿಂದ ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಂಡ ‘ಸಿರಿತುಪ್ಪ’ ಅಭಿನಂದನಾ ಕಾರ್ಯಕ್ರಮವು ದಿನಾಂಕ 17-12-2023ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮಾತನಾಡಿ “ಸಂಶೋಧಕರು, ಮಾರ್ಗದರ್ಶಕರ ಸಹಾಯ ಸಹಕಾರವಿಲ್ಲದೆ ಬನ್ನಂಜೆ ಬಾಬು ಅಮೀನರು ಜಾನಪದ, ಸಾಂಸ್ಕೃತಿಕ ಸಾಹಿತ್ಯ ಲೋಕದಲ್ಲಿ ಮಾಡಿರುವ ಅಧ್ಯಯನದಿಂದ ನೀಡಿದ ಕೊಡುಗೆ ಅತ್ಯಮೂಲ್ಯವಾದುದು. ಅವರು ಸಂಗ್ರಹ ಮಾಡಿಕೊಟ್ಟಿರುವ ಆಕರ ಸಾಮಗ್ರಿಗೆ ಬೆಲೆ ಕಟ್ಟಲು ಅಸಾಧ್ಯ, ಜ್ಞಾನ ಭಂಡಾರವೆನಿಸಿದ ಅವರು ‘ಜಾನಪದ ಅಧ್ಯಯನ ವೀರ” ಎಂದು ಅಭಿಪ್ರಾಯಪಟ್ಟರು. “ಜಾನಪದ ಕಲಾವಿದರೇ ಜಾನಪದ ಬದುಕಿನ ನಿಜವಾದ ಒಡೆಯರು, ಅಮೀನರು ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯವನ್ನು ಮಾಡುವಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಪುಸ್ತಕ ರೂಪದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಅವರಿಂದ ಸಂಗ್ರಹಿಸಲಟ್ಟ ಸಂಸ್ಕೃತಿಯ ಹೊತ್ತಗೆಗಳ ಉಪಯೋಗವನ್ನು ಯುವ ಪೀಳಿಗೆ ಪಡೆಯಬೇಕು. ಸುತ್ತಲಿನ ಶೈಕಣಿಕ ಸಂಸ್ಥೆಗಳು, ಜಾನಪದ ಅಧ್ಯಯನಶೀಲರು ಅವರ ಪ್ರಯೋಜನ ಪಡೆಯಲಿ” ಎಂದವರು ಆಶಿಸಿದರು.
“ಆದರ್ಶ, ಸತ್ಯ, ನಿಷ್ಠೆ, ಧರ್ಮಗಳ ಬಗ್ಗೆ ಭಾಷಣ ಮಾಡುವವರು ನಿಜ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕಿದರೆ ನಾರಾಯಣ ಗುರುಗಳ ಸಂದೇಶಕ್ಕೆ ಬೆಲೆ ಕೊಟ್ಟಂತಾಗುತ್ತದೆ” ಎಂದು ಅಭಿನಂದನೆ ಸ್ವೀಕರಿಸಿದ ಬನ್ನಂಜೆ ಬಾಬು ಅಮೀನ್ ಹೇಳಿದರು.
ಬಾಬು ಅಮೀನರು ಬರೆದ ಪುಸ್ತಕಗಳಿಂದಲೇ ಅವರನ್ನು ‘ಅಕ್ಷರ ತುಲಾಭಾರ’ ಮಾಡಲಾಯಿತು. ತಾಳೆಗರಿಯಲ್ಲಿ ಸಮ್ಮಾನ ಪತ್ರ ಬರೆದು ಸಮರ್ಪಿಸಲಾಯಿತು. ಅಮೀನರಿಗೆ ಜೋಳಿಗೆಯ ಚೀಲವಿತ್ತು. ಪೇಟ ತೊಡಿಸಿ, ಅವರ ಪತ್ನಿ ಇಂದಿರಾ ಅವರಿಗೆ ಅರಶಿನ, ಕುಂಕುಮ ಹಚ್ಚಿ ಮಲ್ಲಿಗೆ ಹೂವನ್ನು ಮುಡಿಗೆ ಮುಡಿಸಿ, ದಂಪತಿಯಿಂದ ಪರಸ್ಪರ ಮಲ್ಲಿಗೆ ಹೂವಿನ ಮಾಲೆಯನ್ನು ಹಾಕಿಸಿ, ಆಳೆತ್ತರದ ಸ್ಮರಣಿಕೆ ನೀಡಿ, ಆರತಿ ಬೆಳಗಿ, ಅಕ್ಷತೆ ಹಾಕಿ ವಿಶೇಷವಾಗಿ ಸಮ್ಮಾನಿಸಲಾಯಿತು.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, “ಬರಹಗಾರನಿಗೆ ಬರಹದ ಒತ್ತಡ, ತುಡಿತವಿದ್ದಾಗ ಉತ್ತಮ ಬರಹಗಳು ಹೊರಹೊಮ್ಮಲು ಸಾಧ್ಯ. ಅಮೀನರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದವರಲ್ಲ, ಜನರ ನಡುವೆ ಕೆಲಸ ಮಾಡಿದವರು. ಅವರು ಬರೆದ ಅದ್ಭುತ ಸಾಧಕ ಪುಸ್ತಕಗಳಿಗೆ ಡಾಕ್ಟರೇಟ್ ದೊರಕಬೇಕಿತ್ತು. ಬಾಬು ಅಮೀನರಿಗೆ ಆಯೋಜಿಸಿದ್ದ ಈ ಕಾರ್ಯಕ್ರಮ ಪದ್ಮ ಪ್ರಶಸ್ತಿಗೆ ಮೀರಿದ ಗೌರವಾರ್ಪಣೆ” ಎಂದರು.
ಇದೇ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಇವರು ಪಡಿಮಂಚದ ಮೇಲೆ ಭತ್ತದ ಕದಿರಿನಿಂದ ಸುತ್ತಲ್ಪಟ್ಟ ಅಭಿನಂದನಾ ಗ್ರಂಥ ‘ಸಿರಿ ಕುರಲ್’ನ್ನು ಅನಾವರಣಗೊಳಿಸಿ ಮಾತನಾಡಿ “ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳಿಗೆ ಅನೇಕರು ಕೊಡುಗೆ ನೀಡಿದ್ದು, ಬನ್ನಂಜೆಯ ಬಾಬು ಅಮೀನ್ ತುಳು ನಾಡಿನ ರಾಯಭಾರಿಯಾಗಿದ್ದಾರೆ. ಅವರ ಆದರ್ಶವನ್ನು ತುಳು ಭಾಷಿಗರೊಂದಿಗೆ ಎಲ್ಲರೂ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ ಮುಂಬಯಿ ಅಭಿನಂದನೆ ಸಲ್ಲಿಸಿದರು. ಅಭಿನಂದನಾ ಸಮಿತಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಮೇನಾಳಗುತ್ತು ಕಿಶನ್ ಜೆ. ಶೆಟ್ಟಿ, ಕಾರ್ಯಾಧ್ಯಕ್ಷ ರಘುನಾಥ್ ಮಾಬಿಯಾನ್, ಮಹೇಶ್ ಎಸ್. ಸುವರ್ಣ ಬೋಳೂರು ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ರಘುನಾಥ್ ಮಾಬಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನ ಕಾರ್ಯದರ್ಶಿ ದಯಾನಂದ ಕರ್ಕೇರ ಉಗ್ಗೇಲ್ ಬೆಟ್ಟು ಸ್ವಾಗತಿಸಿ, ಕಾರ್ಯದರ್ಶಿ ಪಾಂಡು ಕೋಟ್ಯಾನ್ ವಂದಿಸಿ, ಚಂದ್ರಹಾಸ ಬಳಂಜ, ಅರ್ಪಿತಾ ಶೆಟ್ಟಿ ನಿರೂಪಿಸಿದರು.