ಕೋಟ : ‘ಶಿವರಾಮ ಕಾರಂತ ಥೀಂ ಪಾರ್ಕ್’ ಕೋಟದಲ್ಲಿ ಗೌರವ ಗಣ್ಯರನೇಕರ ಉಪಸ್ಥಿತಿಯೊಂದಿಗೆ ದಿನಾಂಕ 31-12-2023ರಂದು ‘ಡಿ ಫಾರ್ ಡೈ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಕುಮಾರಿ ಕಾವ್ಯ ಹಂದೆ ಎಚ್. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಇವರ ಸಂಸ್ಮರಣಾ ಕಾರ್ಯಕ್ರಮವೂ ಜರುಗಿತು.
“ಒಂದರ್ಥದಲ್ಲಿ ಕಳೆದ ವರ್ಷಗಳ ಕೊಳೆಗಳನ್ನು ಕಿತ್ತೊಗೆಯುವ ಸಂದೇಶವನ್ನು ಸಾರಿದ ಡಿಸೈನರ್ ವಿಜಿತ್ ಇವರು ರಚಿಸಿ, ನಿರ್ದೇಶಿಸಿದ ‘ಡಿ ಫಾರ್ ಡೈ’ ಕಿರುಚಿತ್ರ ಹೊಸ ವರ್ಷಕ್ಕೆ ಹೊಸ ಆಯಾಮಗಳಾಗಿ ಹೊಸೆಯಲಿ. ಕಿರಿಯ ನಿರ್ದೇಶಕನಾಗಿ ಕಿರಿಯ ಕಲಾವಿದರನ್ನೊಡಗೂಡಿಕೊಂಡು ಕಿರಿಯವಳಾದ ನನ್ನಿಂದಲೇ ಉದ್ಘಾಟಿಸಿ, ಹಿರಿತನದ ಜವಾಬ್ದಾರಿಯನ್ನು ವಿಜಿತ್ ತಂಡ ಮೆರೆದಿದೆ” ಎಂದು ಕಿರಿಯ ರಂಗ ನಟಿ ಕು. ಕಾವ್ಯ ಹಂದೆ ಎಚ್. ಕಿರುಚಿತ್ರವನ್ನು ಉದ್ಘಾಟಿಸಿ ಮಾತನ್ನಾಡಿದರು.
“ಹಲವಾರು ವರ್ಷಗಳ ಹಿಂದಿನಿಂದಲೂ ನಾಟಕ ರಚಿಸಿ, ನಿರ್ದೇಶಿಸಿ, ಅಭಿನಯಿಸುವ ಮೂಲಕ ಕಲಾ ಪ್ರಪಂಚಕ್ಕೆ ಕಾಲಿರಿಸಿದ ಸಂಜೀವ ಕದ್ರಿಕಟ್ಟು, ವ್ಯಾವಹಾರಿಕವಾಗಿ ಬಹು ಚಟುವಟಿಕೆಯಲ್ಲಿ ನಿರತನಾದ ಸಂದರ್ಭದಲ್ಲಿಯೂ ಕಲೆಯ ತುಡಿತ ಅವರಲ್ಲಿ ಮಾಸಿರಲಿಲ್ಲ. ಆನೆ, ಕುದುರೆ, ತಟ್ಟಿರಾಯ, ಗೋರಿಲ್ಲ, ಬೊಂಬೆಗಳನ್ನೆಲ್ಲಾ ರಚಿಸುತ್ತಾ ಬಿಡುವಿನ ಸಮಯದಲ್ಲಿ ಬೊಂಬೆಗಳೊಂದಿಗೆ ಕಲಾವಿದನಾಗಿ ಕೈಚಳಕದಿಂದ ಬೆಳಗಿ ಅನೇಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ತನ್ನಿಂದ ನಿರ್ಮಿತವಾದ ಬೊಂಬೆಗಳನ್ನು ಅಲಂಕಾರಕ್ಕಾಗಿ ರವಾನಿಸುತ್ತಾ ಕಲೆಯ ಆಸಕ್ತಿಯನ್ನು ಮೆರೆದ ಸಂಜೀವಣ್ಣ ಅಕಾಲ ಮರಣದಿಂದಾಗಿ ಕಲಾ ಪ್ರಪಂಚವನ್ನು ಬಡವಾಗಿಸಿದರು” ಎಂದು ನರೇಂದ್ರ ಕುಮಾರ್ ಕೋಟ ಸಂಸ್ಮರಣಾ ಮಾತುಗಳಲ್ಲಿ ನುಡಿದರು.
ಗೌರವ ಉಪಸ್ಥಿತಿಯಲ್ಲಿ ಅಭಿಲಾಷಾ ಹಂದೆ, ಉದಯ ಶೆಟ್ಟಿ ಪಡುಕೆರೆ, ಸಚಿನ್ ಅಂಕೋಲ, ಪ್ರದೀಪ ವಿ. ಸಾಮಗ, ಶ್ರೀಶ ಭಟ್, ಗಿರಿಧರ್ ಕೋಟ, ಆಕಾಶ್ ದೇವಾಡಿಗ ಉಪಸ್ಥಿತರಿದ್ದು ಕಿರುಚಿತ್ರದ ಕಥಾ ವಸ್ತುವಿನ ವಿಶ್ಲೇಷಣೆಗಳನ್ನು ವಿಮರ್ಷಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.