ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಯೋಜಿಸಿದ ‘ಅರ್ಥಾಂಕುರ-6’ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಹಾಗೂ ಗ್ರಾಮೀಣ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 07-01-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದ ಹೆರಿಯ ಮಾಸ್ಟರ್ “ಉರಿಯುವ ದೀಪದಂತೆ ಸಮಾಜಕ್ಕೆ ಕಲೆಯ ಬೆಳಕಾಗಿ ಬೆಳೆದವರು ಸಂಜೀವ ಕದ್ರಿಕಟ್ಟು. ಎಷ್ಟೋ ಜನ ಕಲಾವಿದರನ್ನು ಬಾಲ್ಯದಿಂದಲೇ ಹುಟ್ಟು ಹಾಕಿದವರು. ರಂಗಭೂಮಿಯ ಪ್ರೇರಣೆಯಿಂದಲೇ ಸ್ತಬ್ಧ ಚಿತ್ರ ರಚನೆಯಿಂದ ಹಲವಾರು ಪಾತ್ರಗಳಾಗಿ ಸಂಘ ಸಂಸ್ಥೆಗಳಲ್ಲಿ ಕಾಣಿಸಿಕೊಳ್ಳುತ್ತ ಕಲಾಭಿರುಚಿಯನ್ನು ಸಮಾಜಕ್ಕೆ ಪಸರಿಸಿದವರು ಸಂಜೀವಣ್ಣ. ಅವರ ಅಗಲುವಿಕೆ ಕುಟುಂಬಕ್ಕಷ್ಟೇ ಮೀಸಲಾಗಿರದೇ ಸಮಾಜಕ್ಕೂ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ” ಎಂದು ಹೇಳಿದರು.
“ಕಲಿಯುವ ಉತ್ಸಾಹಿಗಳಿಗೆ ಈ ಅಭ್ಯಾಸ ಕೂಟ ಹೆಚ್ಚು ಉಪಯುಕ್ತವಾಗಿದೆ. ವೇದಿಕೆಯೇನೋ ಯಶಸ್ವೀ ಕಲಾವೃಂದ ಸಿದ್ಧಗೊಳಿಸಿದೆ. ತಾಳಮದ್ದಳೆಗೆ ಅರ್ಥ ಹೇಳುವ ಮನಸ್ಸುಳ್ಳವರು ಈ ವೇದಿಕೆಯನ್ನು ಉಪಯೋಗಿಸಿಕೊಳ್ಳಬೇಕು. ಉಡುಪಿಯಿಂದೀಚೆ ವಿರಳವಾದ ಅಭ್ಯಾಸಕೂಟ ತೆಕ್ಕಟ್ಟೆಯಲ್ಲಿ ಸಾಹಸದಿಂದ ಮೈದೋರಿದೆ. ಇಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಲಾವಿದರುಗಳು ಪ್ರಬುದ್ಧ ಕಲಾವಿದರಾಗಿ ರೂಪುಗೊಳ್ಳಲಿ” ಎಂದು ಯುವ ಅರ್ಥಧಾರಿ ಸುರೇಶ್ ಶೆಟ್ಟಿ ನಂದ್ರೊಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಕೊಮೆ ಶನೇಶ್ಚರ ದೇಗುಲದ ಆಡಳಿತಾಧಿಕಾರಿ ಗಣೇಶ್ ಕೊಮೆ, ಅರ್ಥದಾರಿ ಕೀರ್ತನ್ ಮಿತ್ಯಂತ ಹಾಲಾಡಿ, ಸಂಘಟಕ ಸುಧಾಕರ ಆಚಾರ್, ವಿಜಿತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಮೀರಾ ವಿ. ಸಾಮಗ, ಶಂಕರನಾರಾಯಣ ಉಪಾಧ್ಯಯ, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಕೀರ್ತನ್ ಮಿತ್ಯಂತ ಹಾಲಾಡಿ ಈ ಕಲಾವಿದರುಗಳಿಂದ ‘ಭೀಮ ದ್ರೌಪದಿ’ ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.