ಮಡಿಕೇರಿ : ಕೊಡಗು ಜಿಲ್ಲಾ, ವಿರಾಜಪೇಟೆ ತಾಲೂಕು ಅಮೃತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರಕಾರಿ ಪ್ರೌಢಶಾಲೆ ಕೊಂಡಂಗೇರಿ ಇವುಗಳ ವತಿಯಿಂದ ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿನಿಧಿ ಕಾರ್ಯಕ್ರಮವು ದಿನಾಂಕ 04-01-2024ರಂದು ಕೊಂಡಂಗೇರಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ವಿರಾಜಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೊಂಡಂಗೇರಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಯಂತಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕನ್ನಡ ಭಾಷೆಯನ್ನು ಉಳಿಸಿ, ಸಶಕ್ತಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕನ್ನಡ ಸಾಹಿತ್ಯದ ಅಭಿರುಚಿಯನ್ನು ಮೂಡಿಸಿಕೊಳ್ಳಬೇಕು.” ಎಂದು ಹೇಳಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಕೊಡಗಿನ ಮಹಿಳಾ ಸಾಹಿತಿಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಸೋಮೆಯಂಡ ಕೌಶಲ್ಯ ಸತೀಶ್ “ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲು ಪುರುಷರ ಸಹಕಾರ ಅತ್ಯಗತ್ಯ. ಕುಟುಂಬದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮಕ್ಕಳ ಭವಿಷ್ಯ ರೂಪಿಸಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು.” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಮ್ಮತ್ತಿ ಹೋಬಳಿ ಘಟಕದ ಟಿ.ಹೆಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಕಸಾಪ ವತಿಯಿಂದ ಸೋಮೆಯಂಡ ಕೌಶಲ್ಯ ಹಾಗೂ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕೊಂಡಂಗೇರಿ ಶಾಲೆಯ ವಿದ್ಯಾರ್ಥಿ ಸಲ್ಮಾನ್ ಪ್ಯಾರೀಸ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಹೆಚ್.ಜಿ. ಸಾವಿತ್ರಿ, ಸಾಹಿತಿಗಳಾದ ರಜಿತ ಕಾರ್ಯಪ್ಪ, ಶಿಕ್ಷಕಿ ಲವಿನಾ, ಸರಕಾರಿ ಪ್ರೌಢಶಾಲೆ ಅಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.