ಸುರತ್ಕಲ್ : ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಮತ್ತು ಕೇರಳ, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಬುಡಕಟ್ಟು ಯುವ ಬರಹಗಾರರ ಕಮ್ಮಟ’ವು ದಿನಾಂಕ 13-01-2024ರಂದು ಉದ್ಘಾಟಣೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುಣೆಯ ಸಿಂಬಿಯೋಸಿಸ್ ಅಂತರಾಷ್ಟ್ರೀಯ ಡೀಮ್ಡ್ ಕಾನೂನು ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ. ಶಶಿಕಲಾ ಗುರುಪುರ ಮಾತನಾಡಿ “ಸಾಹಿತ್ಯವು ಸಮಾಜವನ್ನು ಕಟ್ಟುವ ಮೂಲಕ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಬರಹಗಾರನ ಶಕ್ತಿಯಾಗಿಯೂ ಹೊರಹೊಮ್ಮುತ್ತದೆ. ಕಣ್ಣೀರಿನ ಕಥೆಗಳು ಗೋಳಿನ ಕಥೆಗಳಾಗದೆ, ಶಕ್ತಿಯಾಗಬೇಕಾದ ಅವಶ್ಯಕತೆ ಇದೆ. ಹೆಣ್ಣು ಅನುಭವಿಸುವ ಸಂಕೀರ್ಣತೆಗಳು ಬರಹದ ಮೂಲವಾಗಬೇಕು.” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಹಾಗೂ ಕೇರಳದ ಅಧ್ಯಕ್ಷೆ ಸುಶೀಲ ನಾಡ ಮಾತನಾಡಿ “ಚಳುವಳಿಗಳೊಂದಿಗೆ ಅನುಭವದ ಬರಹಗಳು ಮುಖ್ಯ.” ಎಂದರು. ನಮ್ಮ ನ್ಯಾಯ ಕೂಟ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ ಮತ್ತು ಕೇರಳದ ಅಧ್ಯಕ್ಷ ಬಾಲರಾಜ್ ಕೋಡಿಕಲ್ ಮಾತನಾಡಿ ಮಾತೃ ಸಂಸ್ಕೃತಿಯ ಮಹತ್ವವನ್ನು ದೃಷ್ಟಾಂತ ಕಥೆಗಳ ಮೂಲಕ ನಿರೂಪಿಸಿದರು. ಹಿಂದೂ ವಿದ್ಯಾದಾಯಿನಿ ಸಂಘ (ರಿ) ಸುರತ್ಕಲ್ ಇದರ ಕಾರ್ಯದರ್ಶಿ ಶ್ರೀರಂಗ ಹೆಚ್. ಶುಭ ಹಾರೈಸಿದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಇದರ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಮಾತನಾಡಿ “ನೆಲದ ಪಿಸು ಮಾತುಗಳನ್ನು ಕೇಳಿ ನಮ್ಮ ಬರಹಗಳು ಗಟ್ಟಿಗೊಳ್ಳಲಿ. ಕೊರಗ ಭಾಷೆಯಲ್ಲಿಯೂ ಕೃತಿಗಳ ರಚನೆಯಾಗಲಿ.” ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ “ಮುಂದಿನ ದಿನಗಳಲ್ಲಿ ಬುಡಕಟ್ಟು ಭಾಷೆಗಳ ಮಹತ್ವದ ಕೃತಿಗಳು ಹೊರ ಬರಲು ಕಮ್ಮಟವು ಪ್ರೇರಣೆಯಾಗಿದೆ.” ಎಂದ ಅವರು ಕೊರಗ ಸಮುದಾಯದ ಜೊತೆಗೆ ಹತ್ತು ವರ್ಷಗಳ ಕಾಲ ನಡೆಸಿದ ನಲ್ಮೆ-ಬಲ್ಮೆ ಕಾರ್ಯಕ್ರಮವನ್ನು ನೆನಪಿಸಿಕೊಂಡರು.
ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ ಇದರ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪದ್ಮಾ ವೇಣೂರು ಕಾರ್ಯಕ್ರಮ ನಿರೂಪಿಸಿ, ದೇವಿಕಾ ನಾಗೇಶ್ ವಂದಿಸಿದರು.