ಕಾಸರಗೋಡು : ಕಳೆದ 19 ವರ್ಷಗಳಿಂದ ಕಲೆ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರವು 20ನೇ ವರ್ಷಕ್ಕೆ ಪಾದಾರ್ಪಣೆಯಿಡುವ ಸಂಭ್ರಮದಲ್ಲಿ ‘ನೃತ್ಯೋಪಾಸನಾ ಕಲಾ ಅಕಾಡೆಮಿ’ ಪುತ್ತೂರು, ದ.ಕ. ಎಂದು ಪುನರ್ ನಾಮಕರಣಗೊಂಡಿದೆ.
ನೃತ್ಯೋಪಾಸನಾ ಕಲಾ ಅಕಾಡೆಮಿ ಎಂಬ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಕಲೆ, ಸಂಸ್ಕೃತಿಯ ರಕ್ಷಣೆ ಹಾಗೂ ಬೆಳವಣಿಗೆಗೆ ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 10-01-2024ನೇ ಬುಧವಾರದಂದು ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ಲೋಗೋವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಶ್ರೀ ಎಡನೀರು ಮಠದಲ್ಲಿ ಅನಾವರಣಗೊಳಿಸಿ ಅನುಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು “ನೃತ್ಯೋಪಾಸನಾ ಕಲಾ ಅಕಾಡೆಮಿಯಿಂದ ಮತ್ತಷ್ಟು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿ.” ಎಂದು ಆಶೀರ್ವದಿಸಿದರು. ಈ ಸಂದರ್ಭ ಕಲಾ ಕೇಂದ್ರದ ಸಂಸ್ಥಾಪಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮತ್ತು ಪ್ರಧಾನ ಕಾರ್ಯದರ್ಶಿ ಆತ್ಮಭೂಷಣ್ ಉಪಸ್ಥಿತರಿದ್ದರು.