ಬೈಂದೂರು : ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಲಾವಣ್ಯ (ರಿ) ಬೈಂದೂರು ಹಾಗೂ ಸುರಭಿ (ರಿ) ಬೈಂದೂರು ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ ಕರ್ಣಾಟಕ ಸಂಭ್ರಮ 50 ‘ಸಾಂಸ್ಕೃತಿಕ ಸೌರಭ 2023-24’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಗಮಕ ವಾಚನ ಕಾರ್ಯಕ್ರಮವು ದಿನಾಂಕ 04-01-2024ರಂದು ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನೆರವೇರಿತು.
ಅನುಭಾವಿ ಸಂತ ಕವಿ ಕನಕದಾಸರ ನಳ ಚರಿತ್ರೆಯ ಕಾರ್ಕೋಟಕ ದಂಶನ ಭಾಗದ ಕಥಾವಸ್ತುವನ್ನು ಆಯ್ದುಕೊಂಡಿದ್ದು, ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಕನ್ನಡ ಉಪನನ್ಯಾಸಕ ಸುಜಯೀಂದ್ರ ಹಂದೆ ಎಚ್. ಗಮಕ ವಾಚನ ಮಾಡಿ, ಉಡುಪಿ ಎಂ. ಜಿ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ರಾಘವೇಂದ್ರ ತುಂಗ ವ್ಯಾಖ್ಯಾನ ನಡೆಸಿಕೊಟ್ಟರು.
ಬೈಂದೂರು ವಿಧಾನ ಸಭಾ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಪ್ರಾಂಶುಪಾಲ ಮಂಜುನಾಥ ಪಿ. ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಉಪ ಪ್ರಾಂಶುಪಾಲ ಪದ್ಮನಾಭ ಪಿ, ಲಾವಣ್ಯ (ರಿ.) ಬೈಂದೂರಿನ ಅಧ್ಯಕ್ಷ ನರಸಿಂಹ ಬಿ. ನಾಯಕ್, ಸುರಭಿ (ರಿ.) ಬೈಂದೂರಿನ ಅಧ್ಯಕ್ಷ ನಾಗರಾಜ ಪಿ. ಉಪಸ್ಥಿತರಿದ್ದರು. ಗಣಪತಿ ಹೋಬಳಿದಾರ್ ನಿರ್ವಹಿಸಿ, ಸುರಭಿಯ ಸುಧಾಕರ ಪಿ. ವಂದಿಸಿದರು.