ಧಾರವಾಡ : ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ.) ಧಾರವಾಡ ಇದರ ವತಿಯಿಂದ ಡಾ. ದ.ರಾ. ಬೇಂದ್ರೆ ಅವರ 128ನೆಯ ಜನ್ಮ ದಿನಾಚರಣೆ ಹಾಗೂ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ 2024’ ಪ್ರದಾನ ಸಮಾರಂಭವು ದಿನಾಂಕ 31-01-2024ರಂದು ಸಂಜೆ ಗಂಟೆ 5ಕ್ಕೆ ಧಾರವಾಡದ ಸಾಧನಕೇರಿಯ ಡಾ. ದ.ರಾ. ಬೇಂದ್ರೆ ಭವನದಲ್ಲಿ ನಡೆಯಲಿದೆ.
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ಡಾ. ಡಿ.ಎಮ್. ಹಿರೇಮಠ ಇವರು ಅಧ್ಯಕ್ಷತೆ ವಹಿಸಲಿದ್ದು, ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಅಧ್ಯಯನಾಂಗ ನಿರ್ದೇಶಕರಾದ ಪ್ರೊ. ಬಸವರಾಜ ಡೋಣೂರ ಅಭಿನಂದನಾ ನುಡಿಯನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಧಾರವಾಡದ ಶ್ರೀಮತಿ ಅರ್ಪಿತಾ ಜಹಗೀರದಾರ ಮತ್ತು ವೃಂದದವರಿಂದ ಡಾ. ದ.ರಾ. ಬೇಂದ್ರೆ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
ವರಕವಿ ಡಾ. ದ.ರಾ. ಬೇಂದ್ರೆಯವರ 128ನೇ ಜನ್ಮದಿನದ ನಿಮಿತ್ತ ಕೊಡಮಾಡುವ 2024ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಆಯ್ಕೆಯಾಗಿದ್ದು, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮಂಡಳಿಯ ಸಭೆಯಲ್ಲಿ ಈ ಕುರಿತು ಸರ್ವಾನುಮತದಿಂದ ನಿರ್ಣಯಿಸಲಾಗಿದೆ. ಡಾ. ದ.ರಾ.ಬೇಂದ್ರೆ ಸಾಹಿತ್ಯಾಭ್ಯಾಸಿಗರಾದ ಹಿರಿಯ ವಿಮರ್ಶಕ ಹಾಗೂ ಸಂಶೋಧಕ ಪ್ರೊ. ಬಸವರಾಜ ಕಲ್ಲುಡಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ಮೊತ್ತದ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.