ಮಂಗಳೂರು : ಕಾಸರಗೋಡಿನ ರಂಗ ನಿರ್ದೇಶಕ, ನಟ, ಚಲನಚಿತ್ರ ನಿರ್ದೇಶಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ 2023ರ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಜೊತೆಗೆ ಸ್ಮರಣಿಕೆ, ಶಾಲು, ಫಲ ತಾಂಬೂಲವನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 11-02-2024ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10.30ಕ್ಕೆ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿದೆ.
ಕಾಸರಗೋಡು ಚಿನ್ನಾ ಇವರು ಐದು ದಶಕಗಳಿಂದ ಕನ್ನಡ, ತುಳು, ಕೊಂಕಣಿ, ಮಲಯಾಳಂ ಭಾಷೆಗಳ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡದ್ದಲ್ಲದೆ, ಹಲವಾರು ನಾಟಕಗಳನ್ನು ವಿವಿಧ ಭಾಷೆಗಳಿಗೆ ಅನುವಾದಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುವ ಮುಖಾಂತರ ಮುಂದಿನ ಜನಾಂಗಕ್ಕೂ ರಂಗಭೂಮಿಯ ಅಭಿರುಚಿ ಬೆಳೆಸಿದ್ದಾರೆ. ಇವರು ನಿರ್ದೇಶಿಸಿದ ನಾಟಕಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿವೆ. ಮೂಕಾಭಿನಯದಲ್ಲೂ ಪರಿಣತಿ ಹೊಂದಿರುವ ಚಿನ್ನಾ ಸುಮಾರು ಮುನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಲ್ಲದೆ ವಿದೇಶಗಳಲ್ಲೂ ನಾಟಕಗಳನ್ನು ಪ್ರದರ್ಶಿಸಿದ್ದಾರೆ.
ಕಾಸರಗೋಡು ಚಿನ್ನಾ ಅವರು ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಗಾಗಿ ಚಿನ್ನದ ಪದಕ ಗಳಿಸಿದ್ದಲ್ಲದೆ, ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಗಳಿಸಿದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಿರ್ದೇಶಿಸಿದ ಕೊಂಕಣಿ ಭಾಷೆಯ ಚಲನಚಿತ್ರ ‘ಉಜ್ವಾಡು’ ಕರ್ನಾಟಕ ರಾಜ್ಯ ಉತ್ತಮ ಪ್ರಾದೇಶಿಕ ಪ್ರಶಸ್ತಿಯನ್ನು ಗಳಿಸಿದಲ್ಲದೆ, ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಆಕಾಶವಾಣಿಯ ಮೂರು ಭಾಷೆಗಳಲ್ಲಿ ಬಿ ಹೈ ಗ್ರೇಡ್ ಕಲಾವಿದರಾದ ಚಿನ್ನಾ ಅವರಿಗೆ ಕೇರಳ ಸಂಗೀತ ನಾಟಕ ಅಕಾಡೆಮಿ, ಕೇರಳ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಂದಿ ಪ್ರಶಸ್ತಿ, ಅಜಿತ್ ಕುಮಾರ್ ಪ್ರಶಸ್ತಿ, ಶಾರದ ಕೃಷ್ಣ ಪ್ರಶಸ್ತಿ, ಡಾ. ಟಿ.ಎಂ.ಎ. ಪೈ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಲಭಿಸಿದೆ.
ಪ್ರಸ್ತುತ ತನ್ನ ಮನೆ ಮುಂದೆ ‘ಪದ್ಮಗಿರಿ ಕಲಾ ಕುಟೀರ’ ರಂಗಮಂದಿರವನ್ನು ನಿರ್ಮಿಸಿ, ‘ರಂಗ ಚಿನ್ನಾರಿ’ ನೇತೃತ್ವದಲ್ಲಿ ‘ನಾರಿ ಚಿನ್ನಾರಿ’ ಮಹಿಳಾ ಘಟಕ, ‘ಸ್ವರ ಚಿನ್ನಾರಿ’ ಸಂಗೀತ ಘಟಕದೊಂದಿಗೆ ನೂರಾರು ಕನ್ನಡ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದಾರೆ. ಇದೀಗ ವಿಶ್ವ ಕೊಂಕಣಿ ಕೇಂದ್ರ ಕೊಡ ಮಾಡುವ 2023ರ ಸಾಲಿನ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರವು ಚಿನ್ನ ಕಿರೀಟಕ್ಕೆ ಮತ್ತೊಂದು ಗರಿ.