ಕುಶಾಲನಗರ : ಕುಶಾಲನಗರ ಸಮೀಪದ ಹೆಬ್ಬಾಲೆ ಬನಶಂಕರಿ ಹಬ್ಬದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಘಟಕದ ವತಿಯಿಂದ ಆಯೋಜಿಸಿದ್ದ ‘ಕವಿಗೋಷ್ಠಿ’ಯು ಬನಶಂಕರಿ ದೇವಸ್ಥಾನ ಆವರಣದಲ್ಲಿ ದಿನಾಂಕ 10-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಉದ್ಘಾಟಿಸಿ ಮಾತನಾಡಿ “ಕವನ ಓದುವ ಜೊತೆಗೆ ಕೇಳುಗರ ಸಂಕಟವನ್ನು ಕವನ ವಾಚಿಸುವ ಕವಿಗಳು ಅರಿಯಬೇಕು. ಈಗಲೇ ಕವಿಗೋಷ್ಠಿಗಳಿಗೆ ಸಾರ್ವಜನಿಕರು ಬರುವುದು ಕಡಿಮೆ. ಅಂತಹುದರಲ್ಲಿ ಕವಿಗಳು ತಮಗೆ ಇಷ್ಟ ಬಂದ ಹಾಗೆ ಬರೆದು ಜನರಲ್ಲಿ ಸಾಹಿತ್ಯ ಆಸಕ್ತಿಯನ್ನು ಮತ್ತಷ್ಟು ಕಡಿಮೆ ಮಾಡಬಾರದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಸೋಮವಾರಪೇಟೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, “ಗ್ರಾಮೀಣ ಭಾಗದಲ್ಲಿ ಇಂತಹ ಕವಿಗೋಷ್ಠಿ ನಡೆಸುವ ಮೂಲಕ ಕನ್ನಡ ಭಾಷೆಯ ಗೌರವವನ್ನು ಹೆಚ್ಚಿಸಲಾಗುತ್ತಿದೆ. ಕೊಡಗಿನಲ್ಲಿ ಮಹಿಳಾ ಬರಹಗಾರರ ಸಂಖ್ಯೆ ತುಂಬಾ ಕಡಿಮೆಯಿತ್ತು ಎನ್ನುತ್ತಿದ್ದರು. ಆದರೆ ಇವತ್ತು ಮಹಿಳೆಯರೇ ಹೆಚ್ಚು ಇರುವುದು ಸಂತಸ ತಂದಿದೆ. ಕೊಡಗು ನಿಸರ್ಗಕ್ಕೆ, ವೀರರ ನಾಡು, ಕಾವೇರಿ ನದಿ, ಸೈನಿಕರ ತವರೂರು. ಆದರೇ ಬರಹಗಾರರು ಕೂಡ ಕೇವಲ ಇದೇ ವಿಚಾರಗಳಿಗೆ ಸೀಮಿತಗೊಳ್ಳದೇ, ಹೆಚ್ಚು ಓದುವ ಮೂಲಕ ಹೊರಜಗತ್ತಿಗೆ ತೆರೆದುಕೊಳ್ಳಬೇಕು. ಹಿರಿಯರು ಹೇಳಿದ್ದಾರೆ ‘ರವಿ ಕಾಣದ್ದನ್ನು ಕವಿ ಕಂಡ’ ಅಂತ. ಆ ರೀತಿಯಲ್ಲಿ ಗಡಿಯನ್ನು ಮೀರಿ ಸಾಹಿತ್ಯ ಕ್ಷೇತ್ರವನ್ನು ಗಟ್ಟಿಗೊಳಿಸೋಣ. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ. ಭಾಷೆಯನ್ನು ಬಳಸುವ ಮೂಲಕ ಉಳಿಸೋಣ” ಎಂದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, “ಕವಿಗಳು, ಸಾಹಿತಿಗಳು ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆ ನಡೆಸುವ ಮೂಲಕ ಯುವಜನಾಂಗದಲ್ಲೂ ಸಾಹಿತ್ಯ ಆಸಕ್ತಿಯನ್ನು ಬೆಳಸಬೇಕು” ಎಂದು ಕರೆ ನೀಡಿದರು. ಕಸಾಪ ಹೆಬ್ಬಾಲೆ ಘಟಕದ ಅಧ್ಯಕ್ಷರಾದ ಎಂ.ಎನ್.ಮೂರ್ತಿಯವರು ಮತ್ತು ತಂಡದವರು ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಕೊಡಗು ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ 20ಕ್ಕೂ ಹೆಚ್ಚು ಕವಿಗಳು ಆಗಮಿಸಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಸಭಾ ಅಧ್ಯಕ್ಷರಾಗಿ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಹೆಬ್ಬಾಲೆ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಜಿಲ್ಲಾ ಸಮಿತಿಯ ಪ್ಯಾನ್ಸಿ ಮುತ್ತಣ್ಣ, ಹೆಬ್ಬಾಲೆ ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜಪ್ಪ, ಕುಶಾಲನಗರ ತಾಲೂಕು ಕಸಾಪ ಕಾರ್ಯದರ್ಶಿ ಎಸ್.ನಾಗರಾಜ್, ಹೆಬ್ಬಾಲೆ ಘಟಕದ ಕಾರ್ಯದರ್ಶಿ ಕವಿತಾ, ಸದಸ್ಯರಾದ ಎಂ.ಎನ್.ಕಾಳಪ್ಪ, ಡಿ.ಎಸ್.ಸೋಮಶೇಖರ್, ಮಾಜಿ ಸೈನಿಕ ಪುಟ್ಟೇಗೌಡ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತ ಪುಟ್ಟೇಗೌಡ ಕಾರ್ಯಕ್ರಮವನ್ನು ನಿರೂಪಿಸಿದರು.