ಮಂಗಳೂರು : ಯಕ್ಷಗಾನ ಕಲಾವಿದ, ಯಕ್ಷಗುರು ವರ್ಕಾಡಿ ಶ್ರೀ ರವಿ ಅಲೆವೂರಾಯರ ಷಷ್ಠ್ಯಬ್ದಿ ಪ್ರಯುಕ್ತ ‘ಅಭಿನಂದನಾ ಕಾರ್ಯಕ್ರಮ’ವು ದಿನಾಂಕ 11-02-2024ರಂದು ಬೆಳಿಗ್ಗೆ 9 ಗಂಟೆಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9ರಿಂದ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ ತಂಡದಿಂದ ಯಕ್ಷಗಾನ ಬಯಲಾಟ ‘ಶ್ರೀ ಮಾತೇ ಭದ್ರಕಾಳಿ’, 11ರಿಂದ ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಮಕ್ಕಳ ಮೇಳದಿಂದ ‘ಕೃಷ್ಣಾರ್ಜುನ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12ರಿಂದ ಕದ್ರಿಯ ಯಕ್ಷ ಮಂಜುಳಾ ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗದಿಂದ ‘ಮೋಕ್ಷ ಸಂಗ್ರಾಮ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 1ರಿಂದ ರಥಬೀದಿಯ ನವಭಾರತ ಯಕ್ಷಗಾನ ಅಕಾಡೆಮಿಯಿಂದ ‘ಶ್ರೀದೇವಿ ಮಹಿಷಮರ್ದಿನಿ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 2.30ರಿಂದ ಅತಿಥಿ ಕಲಾವಿದರು ಹಾಗೂ ಸರಯೂ ಯಕ್ಷವೃಂದ ಕಲಾವಿದರ ಕೂಡುವಿಕೆಯಿಂದ ರವಿ ಅಲೆವೂರಾಯ ವರ್ಕಾಡಿ ವಿರಚಿತ ‘ಇಳಾರಜತ’ ಯಕ್ಷಗಾನ ಬಯಲಾಟ ನಡೆಯಲಿರುವುದು.
ಸಂಜೆ 5.30ರಿಂದ ಅಲೆವೂರಾಯಾಭಿನಂದನಮ್ 60 ಸಭಾ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಕಲಾ ಪೋಷಕ ಶ್ರೀ ಟಿ.ಆರ್. ಶ್ಯಾಮ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ. ಪಿ.ವಿ. ಶೆಣೈ, ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ, ಕಲಾ ಸಂಘಟಕ ಶಿವಾನಂದ ಹೆಗಡೆ ಕೆರೆಮನೆ ಭಾಗವಹಿಸುವರು.
ರವಿ ಅಲೆವೂರಾಯ ಇವರು ಸ್ತ್ರೀ ಪಾತ್ರಧಾರಿಯಾಗಿ ಪ್ರಸಿದ್ಧಿ ಗಳಿಸಿದ್ದು, 8 ಭಾಷೆಗಳಲ್ಲಿ ಯಕ್ಷಗಾನದಲ್ಲಿ ಭಾಗವಹಿಸಿದ್ದಾರೆ. 130 ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ‘ಸರಯೂ’ ಸಹಿತ ಅನೇಕ ಯಕ್ಷಗಾನ ತಂಡಗಳಿಗೆ ಗುರುವಾಗಿದ್ದಾರೆ.