ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇವರ ಸಹಯೋಗದಲ್ಲಿ ‘ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 10-02-2024ರಂದು ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಜನಪದ ಗಾಯಕ ಮಾಚಾರು ಗೋಪಾಲ ನಾಯ್ಕ ಹೇಳಿದ ತುಳು ಸಿರಿಕಾವ್ಯವನ್ನು ಪುಸ್ತಕ ರೂಪಕ್ಕಿಳಿಸಿದ ನಿವೃತ್ತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರು ಈ ಕೃತಿಯ ಲೇಖಕರಾಗಿದ್ದಾರೆ.
ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀ ನಾರಾಯಣ ಕಾರಂತ ಇವರ ಉಪಸ್ಥಿತಿಯಲ್ಲಿ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಕೃತಿ ಅನಾವರಣ ಮಾಡಲಿದ್ದಾರೆ. ವಿಮರ್ಶಕರಾದ ಡಾ. ಬಿ. ಜನಾರ್ದನ ಭಟ್ ಕೃತಿ ವಿಮರ್ಶೆ ಮಾಡಲಿದ್ದು, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ದಿವಂಗತ ಮಾಚಾರು ಗೋಪಾಲ ನಾಯ್ಕ ಅವರು ತುಳು ಸಿರಿಕಾವ್ಯವನ್ನು ಹಲವು ಸಂದರ್ಭಗಳಲ್ಲಿ ಹಾಡಿದ ಜನಪದ ಗಾಯಕ. ಅವರು ಮೌಖಿಕ ಪರಂಪರೆಯ ಹಲವು ಸಂಧಿ ಪಾಡ್ಡನ, ಕತೆ- ಕಬಿತೆಗಳ ಕಣಜ. ಸಿರಿ ಜಾತ್ರೆಯಲ್ಲಿ ಕುಮಾರನಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಅವರು, ಸಿರಿ ತಂಡದ ಮಾರ್ಗದರ್ಶಕರಾಗಿದ್ದರು. ಅವರ ಸಿರಿಕಾವ್ಯದ ಮೂಲ ತುಳು ಪಠ್ಯವು ಇಂಗ್ಲೀಷ್ ಅನುವಾದ ಸಹಿತ ಎರಡು ಸಂಪುಟಗಳಲ್ಲಿ ಈಗಾಗಲೇ ಪ್ರಕಟವಾಗಿದೆ. ಈ ತುಳು ಪಠ್ಯವು ಕನ್ನಡ ಅನುವಾದ ಮತ್ತು ಪ್ರಸ್ತಾವನೆಯೊಂದಿಗೆ ಈಗ ಪ್ರಕಟವಾಗುತ್ತಿದೆ ಎಂದು ಕೃತಿಯ ಲೇಖಕ ಚಿನ್ನಪ್ಪ ಗೌಡ ತಿಳಿಸಿದ್ದಾರೆ.