ಧಾರವಾಡ : ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ. ದ.ರಾ. ಬೇಂದ್ರೆ ಭವನದಲ್ಲಿ ದಿನಾಂಕ 31-01-2024ರಂದು ನಡೆದ ಡಾ. ದ.ರಾ. ಬೇಂದ್ರೆಯವರ 128ನೇ ಜನ್ಮದಿನಾಚರಣೆಯಲ್ಲಿ ಬೆಂಗಳೂರಿನ ಪ್ರೊ. ಬಸವರಾಜ ಕಲ್ಗುಡಿ ಅವರಿಗೆ 2024ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಪ್ರೊ. ಬಸವರಾಜ ಕಲ್ಗುಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ನಗದು, ಪ್ರಶಸ್ತಿ ಫಲಕ ಮತ್ತು ಫಲಪುಷ್ಪ ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಬಸವರಾಜ ಕಲ್ಗುಡಿ ಅವರು, “ಕುವೆಂಪು, ಡಾ. ದ.ರಾ. ಬೇಂದ್ರೆ ಅವರಿಗಿದ್ದ ಭಾಷೆಯ ಹೊಳಹು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಈ ಭಾಗದ ಕರ್ನಾಟಕ ಛಿದ್ರ ಛಿದ್ರವಾಗಿತ್ತು. ಎಲ್ಲೆಡೆ ಮರಾಠಿಮಯವಾಗಿದ್ದ ಅಂದಿನ ಕಾಲದಲ್ಲಿ ಕನ್ನಡದ ಅಸ್ಮಿತೆ ಎನ್ನುವುದು ತುಂಬಾ ವಿರಳ. ಒಂದು ಭಾಷೆಯನ್ನು ಸಾಮಾಜಿಕವಾಗಿ ಬಹುದಿನಗಳವರೆಗೆ ಬಳಕೆ ಮಾಡದೇ ಇದ್ದರೆ ಅದು ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಬಿಡುತ್ತದೆ. ಅಂತಹ ದಿನಗಳಲ್ಲಿ ಬೇಂದ್ರೆಯವರು ತಮ್ಮ ಸಾಹಿತ್ಯದ ಮೂಲಕ ಭಾಷೆಯ ಬೆಳವಣಿಗೆಗೆ ಚೈತನ್ಯ ತುಂಬುವ ಕೆಲಸ ಮಾಡಿದರು” ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಡಿ.ವಿ. ಪರಮಶಿವಮೂರ್ತಿ, “ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವಿಶೇಷವಾಗಿ ಡಾ. ದ.ರಾ. ಬೇಂದ್ರೆ ಅವರ ಕುರಿತಾದ ಸಾಹಿತ್ಯಕ್ಕೆ ಪ್ರೊ. ಬಸವರಾಜ ಕಲ್ಗುಡಿ ನೀಡಿದ ಕೊಡುಗೆ ಅನನ್ಯವಾಗಿದೆ. ಶರಣ ಸಾಹಿತ್ಯ ಹಾಗೂ ವಚನಕಾರರನ್ನು ಕುರಿತು ಅಧ್ಯಯನ ಮಾಡಿದ್ದು, ಕನ್ನಡ ಸಾಹಿತ್ಯದಲ್ಲಿ ದೊಡ್ಡ ಸ್ಥಾನ ಪಡೆದಿದೆ. ಬಸವರಾಜ ಕಲ್ಲುಡಿ ಅವರಲ್ಲಿ ಲಂಕೇಶ, ಪಿ.ಆರ್. ನಾಗರಾಜ ಹಾಗೂ ಜಿ.ಎಸ್. ಶಿವರುದ್ರಪ್ಪ ಅವರ ಗುಣಗಳನ್ನು ಕಾಣಬಹುದು. ಹೀಗಾಗಿ ಅವರ ಬರವಣಿಗೆ ಶ್ರೇಷ್ಠವಾಗಿದೆ ಎಂದರು.
ಪ್ರೊ. ಬಸವರಾಜ ಡೋಣೂರ ಅಭಿನಂದನಾ ನುಡಿಗಳನ್ನಾಡುತ್ತಾ “ಕಲ್ಲುಡಿ ಅವರಲ್ಲಿಯ ಅಪಾರ ಓದು ಮತ್ತು ಸ್ಮರಣ ಶಕ್ತಿ ಮೆಚ್ಚುವಂತಹದ್ದು, ಕನ್ನಡ ಸಾಹಿತ್ಯ ಪರಂಪರೆಯ ಬಗೆಗೆ ಸ್ಪಷ್ಟವಾದ ತಿಳಿವಳಿಕೆ ಅವರಲ್ಲಿದೆ. ಅದರ ಬಗೆಗೆ ಅರಿವಿದ್ದಾಗ ಮಾತ್ರವೇ ಉತ್ತಮ ಸಾಹಿತ್ಯ ಸಿದ್ದಪಡಿಸಲು ಸಾಧ್ಯ” ಎಂದರು.
ಈ ವೇಳೆ ಅರ್ಪಿತಾ ಜಹಗೀರದಾರ ಅವರು ಬೇಂದ್ರೆ ಅವರ ಗೀತ ಗಾಯನ ನಡೆಸಿದರು. ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಪ್ರೊ. ಬಸವರಾಜ ಡೋಣೂರ, ಪ್ರೊ. ಕೃಷ್ಣ ನಾಯಕ, ಕಾರ್ಯದರ್ಶಿ ಪ್ರಕಾಶ್ ಬಾಳಿಕಾಯಿ, ಮಾಯಾ ರಾಮನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.