ಸುರತ್ಕಲ್ : ವೀರಲೋಕ ಬುಕ್ಸ್, ಬೆಂಗಳೂರು ಮತ್ತು ಗೋವಿಂದ ದಾಸ ಕಾಲೇಜಿನ ಸಾಹಿತ್ಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಯುವ ಕಥೆಗಾರರಿಗೆ ಆಯೋಜಿಸಿದ್ದ ಎರಡು ದಿನಗಳ ‘ದೇಸಿ ಜಗಲಿ ಕಥಾಕಮ್ಮಟ’ದ ಉದ್ಘಾಟನಾ ಸಮಾರಂಭವು ದಿನಾಂಕ 03-02-2024 ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಕಥೆಗಾರ ರಮೇಶ್ ಭಟ್ ಬೆಳಗೋಡು “ಸಾಹಿತ್ಯ ಪ್ರಕಾರಗಳಲ್ಲಿ ಕಥೆ ನಿಜವಾದ ಸಾಮಾಜಿಕ ಅಭಿವ್ಯಕ್ತಿಯಾಗಿದೆ. ಸೂಕ್ಷ್ಮವಾಗಿ ಸಮಾಜವನ್ನು ಗಮನಿಸಿದರೆ ನೂರಾರು ಸಣ್ಣಕಥೆಗಳು ಸೃಷ್ಟಿಗೊಳ್ಳಬಹುದು.” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಕನ್ನಡ ಕಥನ ಪರಂಪರೆ ಅನನ್ಯವಾಗಿದ್ದು ಮಾನವೀಯ ಮೌಲ್ಯಗಳನ್ನು ಚಿತ್ರಿಸುವ ಕಥೆಗಳು ಮೂಡಿಬರಬೇಕು.” ಎಂದರು.
ಮುಖ್ಯ ಅತಿಥಿಯಾಗಿದ್ದ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ಮಾತನಾಡಿ “ಸಾಹಿತ್ಯ ಸೃಷ್ಟಿ ವಿಶಿಷ್ಟ ಅನುಭವವಾಗಿದ್ದು ಉದಯೋನ್ಮುಖ ಕಥೆಗಾರರು ಹಿರಿಯರ ಮಾರ್ಗದರ್ಶನವನ್ನು ಪಡೆಯಬೇಕು ಎಂದರು.” ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ ಹಾಗೂ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ. ಶುಭ ಹಾರೈಸಿದರು.
ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ., ಸಾಹಿತಿ ಡಾ. ಗಣೇಶ್ ಅಮೀನ್ ಸಂಕಮಾರ್, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸುಧಾ ಆಡುಕುಳ, ಡಾ. ಜ್ಯೋತಿ ಚೇಳಾಯ್ರು, ಡಾ. ಗಣನಾಥ ಎಕ್ಕಾರು, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕಥಾಕಮ್ಮಟದ ಸಂಚಾಲಕಿ ಡಾ. ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಡಾ. ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ವಂದಿಸಿದರು.
ದಿನಾಂಕ 04-02-2024 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೂಪ ಭಾಷಣ ಮಾಡಿದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆಯಾದ ಡಾ. ಜ್ಯೋತಿ ಚೇಳಾಯ್ರು “ವಿವಿಧ ವಿಷಯಗಳ ಗ್ರಹಿಕೆಯೊಂದಿಗೆ ವರ್ತಮಾನವನ್ನು ಅರ್ಥೈಸಿಕೊಂಡು ಸೃಜನಾತ್ಮಕವಾಗಿ ಕಥನಗಳನ್ನು ಕಟ್ಟಲು ಸಾಧ್ಯವಿದೆ. ಸಾಂಸ್ಕೃತಿಕ ಅಧ್ಯಯನಗಳ ಮುಖಾಮುಖಿಯಲ್ಲಿ ಬಹುತ್ವದ ಮಹತ್ವನ್ನು ನಿರೂಪಿಸುವ ಅಗತ್ಯವಿದೆ.”ಎಂದು ಹೇಳಿದರು.
ದೇಸಿ ಕಮ್ಮಟದ ಸಂಚಾಲಕಿ ಡಾ. ನಿಕೇತನ ಮಾತನಾಡಿ “ಯುವ ಕಥೆಗಾರರನ್ನು ಬೆಳೆಸುವ ದೃಷ್ಟಿಯಿಂದ ವೀರಲೋಕ ಬುಕ್ಸ್ ಪ್ರತಿ ಜಿಲ್ಲೆಯಲ್ಲಿ ಕಥಾ ಕಮ್ಮಟಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ನೂತನ ಕಥೆಗಾರರು ರೂಪುಗೊಳ್ಳಲಿದ್ದಾರೆ.” ಎಂದರು. ಸಂಪನ್ಮೂಲ ವ್ಯಕ್ತಿ ಡಾ. ಗಣನಾಥ ಎಕ್ಕಾರು ಕಥೆಯ ವಸ್ತು – ವಿನ್ಯಾಸಗಳನ್ನು ನಿರೂಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ “ಕಥೆಗಾರರು ಚಿಂತನೆ ಅಲೋಚನೆಗಳಲ್ಲಿ ದೃಢತೆಯನ್ನು ತಾಳುತ್ತಾ ಹೊಸ ಆಯಾಮದ ಕಥೆಗಳನ್ನು ಸೃಷ್ಟಿಸಬೇಕಾಗಿದ್ದು ಕಥಾ ಕಮ್ಮಟ ಪೂರಕ ಕಾರ್ಯ ನಿರ್ವಹಿಸುತ್ತಿದೆ.” ಎಂದರು.
ಗೋವಿಂದ ದಾಸ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಕುಮಾರ್ ಮಾದರ, ವಿನೋದ್ ಶೆಟ್ಟಿ ಮತ್ತು ರಾಮಾಂಜಿ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಶಿಬಿರಾರ್ಥಿಗಳು ತಮ್ಮ ಸ್ವರಚಿತ ಕಥೆಗಳನ್ನು ಮಂಡಿಸಿದರು. ಉಪನ್ಯಾಸಕಿ ಅಕ್ಷತಾ ಸ್ವಾಗತಿಸಿ, ಡಾ. ಸಂತೋಷ್ ಆಳ್ವ ವಂದಿಸಿದರು.