ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಧಮನಿ ಟ್ರಸ್ಟ್ (ರಿ.) ತೆಕ್ಕಟ್ಟೆ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಶ್ರೀಶ ಭಟ್ ಬಳಗದವರಿಂದ ‘ರಂಗ ಸಂಗೀತ ಮತ್ತು ಶೂರ್ಪಣಖಾಯನ’ ನಾಟಕ ಪ್ರದರ್ಶನವು ದಿನಾಂಕ 04-02-2024ರಂದು ನಡೆಯಿತು ಇದೇ ಸಂದರ್ಭದಲ್ಲಿ ‘ಧಮನಿ ಟ್ರಸ್ಟ್’ ಇದರ ಲೋಗೋ ಅನಾವರಣಗೊಂಡಿತು.
ಲೋಗೋ ಅನಾವರಣಗೊಳಿಸಿ ಮಾತನಾಡಿದ ಅರೆಹೊಳೆ ಸದಾಶಿವ ರಾವ್ “ಧಮನಿ ಧಮನಿಯಲ್ಲಿ ರಂಗಭೂಮಿಯ ರಕ್ತವನ್ನೇ ಹರಿಸುತ್ತಿರುವ ಶ್ರೀಶ ಅವರು ಹೊಸ ಟ್ರಸ್ಟ್ ಮೂಲಕ ಸಮಾಜಕ್ಕೆ ಬೆಳಕಾಗುವ ನಿಟ್ಟಿನಲ್ಲಿ ಇಂದಿನಿಂದ ನಾಂದಿ ಹಾಡಿದ್ದಾರೆ. ಶ್ರೀಶರ ರಂಗಭೂಮಿಯ ಮೇಲಿನ ಅದಮ್ಯ ಪ್ರೀತಿಗೆ ಮನಸೋಲದವರಿಲ್ಲ. ಅದರಲ್ಲೂ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡುವ ಕನಸನ್ನು ಹೊತ್ತಿರುವುದು ನಿಜಕ್ಕೂ ಶ್ಲಾಘನೀಯ. ಭವಿಷ್ಯಕ್ಕೆ ಕೊಡುಗೆಯಾಗುವ ಮಕ್ಕಳ ಮನಸ್ಸುಗಳೊಂದಿಗೆ ಬೆರೆಯುವ ಕಾಯಕ ನೋರ್ಮಡಿಯಾಗಲಿ.” ಎಂದು ಶುಭಹಾರೈಸಿದರು.
ರಂಗ ನಿರ್ದೇಶಕ ಸದಾನಂದ ಬೈಂದೂರು ಮಾತನಾಡಿ “ವಿನಮ್ರ ವಿದ್ಯಾರ್ಥಿಯಾದ ಶ್ರೀಶ ಭಟ್ ಹುಟ್ಟು ಹಾಕಿಕೊಂಡ ಸಂಸ್ಥೆಗೆ ಹಿರಿಯ ಸಂಸ್ಥೆಯ ಸಹಾಯ ಹಸ್ತದ ನೆರವು ಸದಾ ಇರಬೇಕು. ಸಂಸ್ಥೆ ಏಕಾಂಗಿಯಾಗಿರದೇ ಹಲವು ಕಲಾಸಕ್ತ ಮನಸ್ಸುಗಳು ಜೊತೆಯಾಗಿ ಈ ರಂಗಭೂಮಿಯನ್ನು ಬೆಳೆಸಬೇಕಾದ ಅನಿವಾಯತೆ ಇದೆ.” ಎಂದು ಅಭಿಪ್ರಾಯಪಟ್ಟರು.
ಮಂದಾರದ ರೋಹಿತ್ ಎಸ್. ಬೈಕಾಡಿ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವರಾಮ ಶೆಟ್ಟಿ, ಉದ್ಯಮಿ ಹಂಗಳೂರು ರಾಮಚಂದ್ರ ವರ್ಣ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಧಮನಿಯ ಅಧ್ಯಕ್ಷ ರವಿ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಶ ಸ್ವಾಗತಿಸಿ, ಸಚಿನ್ ಅಂಕೋಲ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೈಲಾಸ ಕಲಾ ಕ್ಷೇತ್ರ ತೆಕ್ಕಟ್ಟೆ, ಮಂದಾರ (ರಿ.) ಬ್ರಹ್ಮಾವರ, ಅರೆಹೊಳೆ ಪ್ರತಿಷ್ಠಾನ ಸಹಕಾರದಲ್ಲಿ ಭುವನ್ ಮಣಿಪಾಲ ನಿರ್ದೇಶನದಲ್ಲಿ ಉಜ್ವಲ್ ಯು.ವಿ. ರಂಗಸಜ್ಜಿಕೆಯಲ್ಲಿ “ರಂಗ ಸಂಗೀತ ಮತ್ತು ಶೂರ್ಪಣಖಾಯನ” ನಾಟಕ ಪ್ರಸ್ತುತಿಗೊಂಡಿತು.