ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಎರಡು ದಿನಗಳ ‘ವಿಶ್ವ ಕೊಂಕಣಿ ಸಮಾರೋಹ, ಪ್ರಶಸ್ತಿ ಪ್ರದಾನ 2023, ಕಾರ್ಯಕ್ರಮವು ದಿನಾಂಕ 10-02-2024ರ ಶನಿವಾರದಂದು ಅರಂಭಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಎಂ. ಆರ್. ಪಿ. ಎಲ್. ಇದರ ಹಣಕಾಸು ವಿಭಾಗದ ಚೀಫ್ ಜನರಲ್ ಮ್ಯಾನೇಜರ್ ಸುರೇಂದ್ರ ನಾಯಕ್ “ಭಾಷೆ ತಾಯಿಗೆ ಸಮಾನ. ಹೃದಯದಲ್ಲಿ ಭಾಷಾ ಪ್ರೀತಿಯಿದ್ದಾಗ ಅದು ನಾಲಿಗೆ ಮತ್ತು ಮನೆಯೊಳಗೆ ನೆಲೆಸಲು ಸಾಧ್ಯ. ಬದಲಾವಣೆಯ ಕಾಲಘಟ್ಟದಿಂದಾಗಿ ಭಾಷೆಗೆ ಎದುರಾಗಿರುವ ಸವಾಲನ್ನು ಮಕ್ಕಳು ಮತ್ತು ಯುವಜನತೆಯಲ್ಲಿ ಭಾಷಾಭಿಮಾನ ಗಟ್ಟಿಗೊಳಿಸುವ ಮೂಲಕ ಉತ್ತಮ ಭವಿಷ್ಯ ನಿರೀಕ್ಷಿಸಲು ಸಾಧ್ಯ. ಕೊಂಕಣಿ ಭಾಷೆ ಕಲಬೆರಕೆ ಮತ್ತು ಬಳಕೆಯಲ್ಲಿ ಇಳಿಮುಖವಾಗುವ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. ಸಾಹಿತ್ಯ ಸಂಶೋಧನೆಯಿಂದ ಕೊಂಕಣಿಯ ತಳಪಾಯ ಗಟ್ಟಿಗೊಳಿಸಬಹುದು. ಆದರೆ ಬಳಕೆಯಿಂದ ಮಾತ್ರ ಅಲ್ಲಿ ಉನ್ನತ ಭವಿಷ್ಯದ ಸೌಧ ನಿರ್ಮಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾದ ಈ ದಿನಗಳಲ್ಲಿ ಭಾಷೆ ಸಂಸ್ಕೃತಿಯನ್ನು ರೀಲ್ಸ್, ವೀಡಿಯೋ, ಸಿನಿಮಾಗಳ ಮೂಲಕ ಜನಮನವನ್ನು ತಲುಪಿಸುವ ನಿಟ್ಟಿನಲ್ಲಿ ನಾವು ಮುನ್ನಡೆಯಬೇಕಾಗಿದೆ. ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನಂದ ಗೊಪಾಲ ಶೆಣೈ ಮಾತನಾಡಿ “ಕೊಂಕಣಿ ಭಾಷಿಗರ ವಲಸೆಯ ಇತಿಹಾಸ ಮತ್ತೆ ಹೊಸರೂಪ ತಳೆದಿದೆ. ಪರವೂರು, ವಿದೇಶಕ್ಕೆ ಕೊಂಕಣಿ ಭಾಷಿಗರ ವಲಸೆಯಿಂದಾಗಿ ನಮ್ಮ ಭಾಷೆ, ಆಹಾರ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರಗಳಿಗೆ ಸವಾಲು ಎದುರಾಗಿದೆ, ಭಾಷಾ ಕಾಳಜಿಯಿಂದ ಎಲ್ಲರೂ ಅದರ ರಾಯಭಾರಿಗಳಾಗಿ ಕೊಂಕಣಿ ಎಲ್ಲೆಡೆ ವಾರ್ಷಿಕ ಉತ್ಸವವಾದಾಗ ನಾವು ಮುಂದಿನ ಪೀಳಿಗೆಗೆ ಈ ಭಾಷೆ ಮತ್ತು ಸಂಸ್ಕೃತಿಯ ಮ್ಯಾರಥಾನ್ ಓಟದಲ್ಲಿ ಅರ್ಥಪೂರ್ಣವಾಗಿ ಬ್ಯಾಟನ್ ಹಸ್ತಾಂತರಿಸಿದಂತಾಗುತ್ತದೆ.” ಎಂದರು.
ಪ್ರತಿಷ್ಠಾನದ ಉಪಾಧ್ಯಕ್ಷ ಗಿಲ್ಬರ್ಟ್ ಡಿ ಸೋಜಾ, ಡಾ. ಕಿರಣ್ ಬುಡ್ಕುಳೆ, ಕೋಶಾಧಿಕಾರಿ ಬಿ.ಆರ್. ಭಟ್, ಟ್ರಸ್ಟಿಗಳಾದ ಡಾ. ಕೆ. ಮೋಹನ್ ಪೈ, ರಮೇಶ್ ನಾಯಕ್, ಮೆಲ್ವಿನ್ ರೋಡ್ರಿಗಸ್, ಆಡಳಿತಾಧಿಕಾರಿ ಡಾ. ಬಿ. ದೇವದಾಸ ರೈ, ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸಿ. ನಾಯ್ಕ್ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕೊಂಕಣಿ ರಂಗಭೂಮಿ ಪ್ರಸ್ತುತ ಮತ್ತು ಭವಿಷ್ಯ, ಕೊಂಕಣಿ ಸಾಹಿತ್ಯಕ್ಕೆ ಮಹಿಳಾ ಲೇಖಕಿಯರ ದೇಣಿಗೆ ಕುರಿತ ಸಂವಾದ, ಗೌರೀಶ್ ಪ್ರಭು ಇವರಿಂದ ಕೊಂಕಣಿ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ, ಮತ್ತು ಡಾ. ಕೆ. ಮೋಹನ ಪೈ ಇವರಿಂದ ಗೋವಾದ ಹೊರಗೆ ಕೊಂಕಣಿ ಸ್ಥಿತಿಗತಿ ಕುರಿತು ಗೋಷ್ಠಿಗಳು ನಡೆದವು.
ಡಾ. ವೈಷ್ಣವಿ ಕಿಣಿ ಕೊಂಕಣಿ ಆಶಯ ಗೀತೆ ಪ್ರಸ್ತುತಪಡಿಸಿದರು. ಶಕುಂತಲಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದಿನಾಂಕ 11-02-2024ರಂದು ನಡೆದ ‘ವಿಶ್ವ ಕೊಂಕಣಿ ಪುರಸ್ಕಾರ್’ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಜಯರಾಜ್ ಅಮಿನ್ ಮಾತನಾಡಿ “ಕೊಂಕಣಿ ಭಾಷಿಗ ಸಮುದಾಯಗಳಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ಅಪಾರ ಕೊಡುಗೆ ದೊರಕಿದೆ. ಕೊಂಕಣಿ ವಿಶ್ವವ್ಯಾಪಿಯಾಗಿದ್ದು, ಸಮುದಾಯದ ಸೇವೆಯನ್ನು ಅವಗಣಿಸಲು ಅಸಾಧ್ಯ. ಕೊಂಕಣಿ ಭಾಷಿಗರು ಸಮುದಾಯ, ಕಲೆ, ಸಾಹಿತ್ಯ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಪ್ರತಿಮ ಕೊಡುಗೆ ನೀಡುತ್ತಿದ್ದಾರೆ. ವಿಶ್ವ ಕೊಂಕಣಿ ಕೇಂದ್ರವು ಎಲ್ಲ ಸಮುದಾಯದವರನ್ನು ಜತೆಯಲ್ಲೇ ಮುನ್ನಡೆಸುತ್ತಿರುವ ಕಾರ್ಯ ಶ್ಲಾಘನೀಯ.” ಎಂದರು.
ಇದೇ ಸಂದರ್ಭದಲ್ಲಿ ವಿಮಲಾ ವಿ. ಪೈ ಸಾಹಿತ್ಯ ಪುರಸ್ಕಾರವನ್ನು ರಮಾನಂದ್ ರಾಯ್ಕರ್, ಆರ್.ಎಸ್. ಭಾಸ್ಕರ್ ಹಾಗೂ ಡಾ. ಪ್ರಕಾಶ್ ಪರಿಯಂಕರ್ ಅವರಿಗೆ, ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರವನ್ನು ಶಕುಂತಳಾ ಅಜಿತ್ ಭಂಡಾರ್ಕರ್ ಹಾಗೂ ಜೋಸೆಫ್ ಕ್ರಾಸ್ತಾ ಅವರಿಗೆ ಮತ್ತು ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಪುರಸ್ಕಾರವನ್ನು ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನ) ಹಾಗೂ ರಮೇಶ್ ಲಾಡ್ ಅವರಿಗೆ ನೀಡಿ ಗೌರವಿಸಲಾಯಿತು.
1 Comment
Very good coverage
Thank yoi