ಪೌರಾಣಿಕ, ಚಾರಿತ್ರಿಕ ನಾಟಕಗಳ ಸುಗ್ಗಿಯ ಕಾಲವೊಂದಿತ್ತು. ಕಳೆದ ಸುಮಾರು ನಾಲ್ಕು ದಶಕಗಳಿಂದೀಚೆಗೆ ಅಂತಹ ನಾಟಕಗಳನ್ನು ಪ್ರದರ್ಶಿಸುವುದು ಕಡಿಮೆಯಾಗಿದೆ. ಒಂದು ವೇಳೆ ತುಘಲಕ್‌ನಂತಹ ನಾಟಕಗಳು ರಂಗವೇರಿದರೂ ಅವು ಆಧುನಿಕ ಪರಿವೇಷದೊಂದಿಗೆ ರಂಗವೇರುತ್ತವೆ. ಹೊಸ ಕಾಲಕ್ಕೆ ಹಳೆ ನಾಟಕಗಳು ಹೊಸ ಬಗೆಯ ರಂಗಾವಿಷ್ಕಾರಗಳನ್ನು ಮೈಗೂಡಿಸಿಕೊಂಡು ಅವತರಿಸಬೇಕಾದ್ದು ಕಾಲದ ಅನಿವಾರ್ಯತೆ.
ಕನ್ನಡದ ಯುವ ನಾಟಕಕಾರರಲ್ಲಿ ಪ್ರಮುಖರಾಗಿರುವ ಶಶಿರಾಜ್ ರಾವ್ ಕಾವೂರು ಇವರು ಇತ್ತೀಚೆಗೆ ರಚಿಸಿ, ಬಿಡುಗಡೆ ಮಾಡಿದ ‘ಛತ್ರಪತಿ ಶಿವಾಜಿ’ ನಾಟಕ ಈ ಕಾಲಕ್ಕೂ ಹೇಗೆ ಅನ್ವಯಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೊರಗಿನ ರಾಜರುಗಳ ಆಳ್ವಿಕೆ, ದಬ್ಬಾಳಿಕೆಗಳಿಂದ ಕಂಗೆಟ್ಟ ಮರಾಠರು ಶಿವಾಜಿಯ ಮೂಲಕ ಹೊಸ ಸಾಮ್ರಾಜ್ಯ ಕಟ್ಟುವುದಕ್ಕೆ ಹೊರಡುತ್ತಾರೆ. ಬಾಲ್ಯದಲ್ಲಿ ತಾಯಿ ಜೀಜಾಬಾಯಿ, ಗುರುಗಳಾದ ಸಮರ್ಥ ರಾಮದಾಸರು, ದಾದಾಜಿಯವರು ಶಿವಾಜಿಗೆ ಬೇಕಾದ ವಿದ್ಯಾಭ್ಯಾಸ ನೀಡಿ ಶತ್ರುಪಾಳಯವನ್ನು ಎದುರಿಸಬಲ್ಲ ಶಕ್ತ ನಾಯಕನನ್ನಾಗಿ ರೂಪಿಸುತ್ತಾರೆ.
ನಾಟಕದ ಪ್ರಾರಂಭದಲ್ಲಿ ಔರಂಗಜೇಬನ ಆಸ್ಥಾನದಲ್ಲಿ ಜಾವಳಿ ಕೋಟೆಯನ್ನು ವಶಪಡಿಸಿದ ಶಿವಾಜಿಯನ್ನು ಸದೆಬಡಿಯಲಿರುವ ಉಪಾಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಒಂದು ಕಡೆಯಿಂದ ಮೊಗಲರು, ಮತ್ತೊಂದು ಕಡೆಯಿಂದ ಆದಿಲ್ ಶಾಹಿಗಳು, ಇನ್ನೊಂದು ಕಡೆಯಿಂದ ಕುತುಬ್ ಶಾಹಿಗಳು ಶಿವಾಜಿಯನ್ನು ಸೋಲಿಸಲು ವಿವಿಧ ತಂತ್ರಗಳನ್ನು ಆಯೋಜಿಸುತ್ತಾರೆ. ತಂದೆ ಶಹಾಜಿಯ ಮೂಲಕ ಆತನನ್ನು ಕರೆಯಿಸಿ ಬಂಧಿಸುವ ಯೋಚನೆಯನ್ನೂ ಕಾರ್ಯರೂಪಕ್ಕೆ ತರಲೆತ್ನಿಸುತ್ತಾರೆ. ಆದಿಲ್ ಶಾನ ಸೇನಾಪತಿ ಅಫ್ಜಲ್ ಖಾನ್‌ನ ಮೂಲಕ ಶಿವಾಜಿಯನ್ನು ಕೊಲ್ಲುವ ಪ್ರಯತ್ನ ನಡೆಯುತ್ತದೆ. ಆದರೆ ವ್ಯಾಘ್ರ ನಖದಿಂದ ಶಿವಾಜಿ ಆತನನ್ನೇ ಕೊಲ್ಲುತ್ತಾನೆ. ಕೊನೆಗೆ ಔರಂಗಜೇಬನ ಆಪ್ತ ರಾಜಾ ಜಯಸಿಂಹನ ಮೂಲಕ ಶಿವಾಜಿಯನ್ನು ಔರಂಗಜೇಬನ ಆಸ್ಥಾನಕ್ಕೆ ಸಂಧಾನಕ್ಕೆಂದು ಆಹ್ವಾನಿಸಿ ಬಂಧಿಸಲಾಗುತ್ತದೆ. ಅಲ್ಲಿಂದಲೂ ಶಿವಾಜಿ ತಪ್ಪಿಸಿಕೊಂಡು ಬರುವುದರಲ್ಲಿ ಯಶಸ್ವಿಯಾಗುತ್ತಾನೆ. ಔರಂಗಜೇಬನ ಮಗಳೂ ಸೇರಿದಂತೆ ಒಳಗಿನವರೇ ಶಿವಾಜಿ ಹೂಬುಟ್ಟಿಯಲ್ಲಿ ಕುಳಿತು ಸೆರೆಯಿಂದ ಹೊರಬರಲು ಸಹಾಯ ಮಾಡುತ್ತಾರೆ. ಹೊರಬಂದ ಶಿವಾಜಿ ಪಟ್ಟಾಭಿಷಿಕ್ತನಾಗಿ ಛತ್ರಪತಿ ಶಿವಾಜಿಯಾಗುತ್ತಾನೆ. ಮೇಲಿಂದ ಮೇಲೆ ಅಗಣಿತ ರಾಜ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಶತ್ರುಗಳ ಪಾಲಿಗೆ ಯಮನಾಗುತ್ತಾನೆ.
ಶಿವಾಜಿಯ ವ್ಯಕ್ತಿತ್ವವನ್ನು ಬಿಂಬಿಸುವ ಹಾಗೂ ಎತ್ತರಕ್ಕೊಯ್ಯುವ ಹಲವು ಘಟನೆಗಳನ್ನು ಇಲ್ಲಿ ಪೋಣಿಸಲಾಗಿದೆ. ಬಹುಮುಖ್ಯವಾಗಿ ಒಂದೆಡೆಯಿಂದ ಸ್ತ್ರೀಯರನ್ನು ಮೊಗಲರು, ಆದಿಲ್ ಶಾ, ಕುತುಬ್ ಶಾ ವಂಶಸ್ಥರು ಬಹು ಕೀಳಾಗಿ ಪರಿಗಣಿಸಿದಾಗ ಅವರ ಬಗೆಗಿನ ಗೌರವವನ್ನು ಎತ್ತಿಹಿಡಿದ ಎರಡು ನಿದರ್ಶನಗಳನ್ನು ಇಲ್ಲಿ ನಾಟಕಕಾರರು ಉಲ್ಲೇಖಿಸುತ್ತಾರೆ. ಮೊದಲನೆಯದು ರೈತನೊಬ್ಬನ ಮಗಳನ್ನು ಆದಿಲ್ ಶಾಹಿ ಕಡೆಯವರು ಎಳೆದೊಯ್ಯುತ್ತಿದ್ದಾಗ ಶಿವಾಜಿ ಅವರನ್ನು ಎದುರಿಸಿ ಆಕೆಯನ್ನು ಬಿಡಿಸಿ ರೈತನಿಗೆ ಒಪ್ಪಿಸುವುದು. ಹಾಗೆ ಒಪ್ಪಿಸುವಾಗ ಆಕೆಯ ಮೈಗೊಂದು ಶಾಲು ಹೊದಿಸಿ ಆಕೆಯ ಮಾನವನ್ನು ಗೌರವಿಸುವುದು. ಎರಡನೆಯದು ಶಿವಾಜಿಯ ಆಪ್ತನಾದ ಆಬಾಜಿ ಕಿಲ್ಲೇದಾರ ಮೌಲಾನಾ ಅಹಮದ್ ಖಾನನ ಸೊಸೆ ಶಹನಾಬಾನುವನ್ನು ಬಂಧಿಸಿ ಶಿವಾಜಿಗಾಗಿಯೇ ಒಪ್ಪಿಸುತ್ತಾನೆ. ಆಬಾಜಿಯ ಮಾತಿನ ಮರ್ಮವನ್ನರಿತ ಶಿವಾಜಿ, ಆತನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ʻಯಾವ ನಾಡಿನಲ್ಲಿಯೂ ಸ್ತ್ರೀಯರಿಗೆ ಗೌರವ ಮಾನಕ್ಕೆ ಭಂಗ ಬರಬಾರದುʼ ಎಂದೂ ಹೇಳುತ್ತಾನೆ.
ಪ್ರಸ್ತುತ ನಾಟಕದಲ್ಲಿ ಕ್ರಿಯಾತ್ಮಕ, ಸಂಘರ್ಷಾತ್ಮಕ ಅಂಶಗಳಿಗೆ ಬಹಳ ಅವಕಾಶಗಳಿವೆ. ಆದಿಲ್ ಶಾಹಿಯ ಸುಬೇದಾರನಾಗಿದ್ದ ಶಹಾಜಿ ತನ್ನ ಮಗ ಶಿವಾಜಿಯೊಂದಿಗೆ ನಡೆಸುವ ಸಂಭಾಷಣೆ, ಶಹಾಜಿಯನ್ನು ಆದಿಲ್ ಶಾಹಿಗಳು ವಿಚಾರಣೆಗೆ ಗುರಿಪಡಿಸುವ ಬಗೆ, ಮಾತೆ ತುಳಜಾ ಭವಾನಿಯ ಎದುರು ಶಿವಾಜಿಗೆ ಆತನ ಅಜ್ಜ ಮಾಲೋಜಿಯ ಕತ್ತಿಯನ್ನು ಗುರುಗಳು ನೀಡುವುದು. ಶಿವಾಜಿಯನ್ನು ಔರಂಗಜೇಬನ ಬಳಿ ಕರೆಸಿಕೊಳ್ಳಲು ಮಾಡುವ ಉಪಾಯಗಳು, ಪ್ರತಾಪಗಡದ ತಪ್ಪಲಿನ ಗುಡಾರದಲ್ಲಿ ಅಫಜಲ್ ಖಾನನ ಭೇಟಿಯ ಸಂದರ್ಭ, ಅತ್ತ ಶಿವಾಜಿಯನ್ನು ಸೆರೆಯಲ್ಲಿರಿಸುವ ಪ್ರಶ್ನೆ – ಇತ್ತ ಸೋದರಿ ಮೆಹರುನ್ನೀಸಾಳ ಪತ್ರದಂತೆ ದೆಹಲಿಯ ಬಾದಷಹನಾಗುವ ಹುನ್ನಾರ – ಇವುಗಳ ನಡುವೆ ಔರಂಗಜೇಬ ಗೊಂದಲಗೊಳ್ಳುವ ಸ್ಥಿತಿ. ಆದಿಲ್ ಶಾಹಿ ಕಡೆಯ ಕೃಷ್ಣಾಜಿ ಭಾಸ್ಕರ ಪಂತ್ ಹಾಗೂ ಔರಂಗಜೇಬನ ಕಡೆಯ ರಾಜಾ ಜಯಸಿಂಹ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಶಿವಾಜಿಯನ್ನು ಶತ್ರುಗಳ ಕೈಗೆ ಒಪ್ಪಿಸಲು ಆಹ್ವಾನಿಸಿರುವುದು, ಪ್ರಾರಂಭದಲ್ಲಿ ಔರಂಗಜೇಬನು ಶಿವಾಜಿಯ ಬಂಧನವನ್ನು ಆದಿಲ್ ಶಾಹನ ಮೂಲಕ ಮಾಡಿಸಲು ತಂತ್ರಹೂಡುವುದು, ಬಂಧನಕ್ಕೊಳಗಾಗುವುದಕ್ಕೂ ಮುನ್ನ ಶಿವಾಜಿಯು ಔರಂಗಜೇಬನೊಂದಿಗೆ ನಡೆಸುವ ಸಂಭಾಷಣೆ – ಹೀಗೆ ಪ್ರತಿ ಸಂದರ್ಭದಲ್ಲೂ ನಾಟಕಕಾರ ಬಿಗುವನ್ನು ಸಡಿಲಿಸುವುದಿಲ್ಲ.
ಗಂಭೀರ ನಾಟಕವಾದ್ದರಿಂದ ಪ್ರೇಕ್ಷಕರಿಗೆ ತಮ್ಮ ನರನಾಡಿಗಳನ್ನು ಸಡಿಲಿಸಲು ತುಸು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಸೇನಾಪತಿ ಅಫ್ಜಲ್ ಖಾನ್ ಹಾಗೂ ಆತನ ಸಹಚರ ಸಿಕಂದರ್ ಭಾರೀ ಧೈರ್ಯವಂತರಂತೆ ಶಿವಾಜಿಯನ್ನು ಸಂಹರಿಸಲು ಬಂದ ಮೊದಲ ರಾತ್ರಿಯಲ್ಲಿ ಪ್ರತಿ ಸಣ್ಣಪುಟ್ಟ ಸದ್ದಿಗೂ ಭಯಬಿದ್ದು ಎದ್ದೆದ್ದು ಬೀಳುವುದು ಅಂತಹ ಒಂದು ಸಂದರ್ಭ.
ಶಶಿರಾಜ್ ಬರೆದ ನಾಟಕಗಳಲ್ಲಿ ʻಛತ್ರಪತಿ ಶಿವಾಜಿʼ ಸಂಘರ್ಷಗಳ ಸರಮಾಲೆಯನ್ನು ಹೊತ್ತುಕೊಂಡು ಬಂದ ವಿಶಿಷ್ಟ ನಾಟಕ. ವಸ್ತು ಚಾರಿತ್ರಿಕವೇ ಆದರೂ ಜನಮಾನಸದಲ್ಲಿ ಶಿವಾಜಿಯ ಸ್ಥಾನವನ್ನು ಭದ್ರಪಡಿಸುವ ನೆಲೆಯಲ್ಲಿಯೂ ನಿರ್ದೇಶಕರಿಗೆ ಅಪಾರ ಸಾಧ್ಯತೆಯನ್ನು ಮೊಗೆದು ಕೊಡುವ ದಿಸೆಯಲ್ಲಿಯೂ ಇದು ಪ್ರೇಕ್ಷಕರ ಮನಸೂರೆಗೊಳ್ಳುವುದರಲ್ಲಿ ಸಂದೇಹವಿಲ್ಲ.
ನಾ. ದಾಮೋದರ ಶೆಟ್ಟಿ
ಖ್ಯಾತ ಸಾಹಿತಿ, ನಾಟಕಗಾರ, ವಿಮರ್ಶಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ