ಕನ್ನಡದ ಗಮನಾರ್ಹ ಯುವ ಕಥೆಗಾರ್ತಿ ತೇಜಸ್ವಿನಿ ಹೆಗಡೆಯವರು ‘ಕಾಣ್ಕೆ’ ಮತ್ತು ‘ಸಂಹಿತಾ’ ಎಂಬ ಎರಡು ಕಥಾ ಸಂಕಲನಗಳ ನಂತರ ಈಗ ‘ಜೋತಯ್ಯನ ಬಿದಿರು ಬುಟ್ಟಿ’ ಎಂಬ ತಮ್ಮ ಮೂರನೇ ಕಥಾ ಸಂಕಲನವನ್ನು ಹೊರ ತಂದಿದ್ದಾರೆ. ಹತ್ತು ವಿಶಿಷ್ಠ ಕಥೆಗಳಿರುವ ಈ ಸಂಕಲನವು ಅವರ ಗಾಢವಾದ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿಯುತ್ತವೆ. ಕಳೆದ ಕೆಲವು ದಶಕಗಳಿಂದ ಸ್ತ್ರೀ ಶೋಷಣೆಯ ವಿರುದ್ದ ಸೆಟೆದು ನಿಲ್ಲುವುದನ್ನೇ ತಮ್ಮ ಕಥೆಗಳ ಫೋಕಸ್ ಆಗಿ ಮಾಡಿಕೊಂಡ ಕಥೆಗಾರ್ತಿಯರು ಭಿನ್ನ ದಾರಿಗೆ ಹೋಗಿ ಮರಳುತ್ತಿದ್ದಾರೆ ಅನ್ನುವುದಕ್ಕೆ ತೇಜಸ್ವಿನಿಯವರ ಕಥೆಗಳು ಸಾಕ್ಷಿಯಾಗುತ್ತವೆ. ಬೆನ್ನುಡಿ ಬರೆದಿರುವ ಕೆ. ಸತ್ಯನಾರಾಯಣ ಅವರು ಹೇಳಿರುವಂತೆ ತೇಜಸ್ವಿನಿಯವರದ್ದು ಹೆಣ್ಣು ಕಥೆಗಳೇ ಆದರೂ ಹೆಣ್ಣಿನ ಶಕ್ತಿಯ ವಿವಿಧ ಮುಖಗಳನ್ನು ಬೆಳಕಿಗೊಡ್ಡುವುದೇ ಅವರ ಲಕ್ಷ್ಯವಾಗಿರುವಂತೆ ಕಾಣುತ್ತದೆ.
ಮೊದಲ ಕಥೆ ‘ರತ್ನಗಂಧಾ’ ಆರಂಭವಾಗುವುದು ಹಳ್ಳಿಯ ಇಬ್ಬರು ಗೆಳೆಯರ ಮೂಲಕವಾದರೂ ಅದರ ಮುಖ್ಯ ಎಳೆ ಇರುವುದು ಇಳಿ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಮಗನಿಂದ ದೂರವಾದ ರತ್ನಮ್ಮ ಮರು ಮದುವೆ ಮಾಡಿಕೊಳ್ಳ ಹೊರಟಿದ್ದಾರೆ ಎಂಬ ಸುದ್ದಿಯಲ್ಲಿ. ಸಂಪ್ರದಾಯಕ್ಕೆ ವಿರುದ್ಧ ನಿಲ್ಲುವ ಅವಳ ಈ ನಿರ್ಧಾರವು ಊರವರ ಸಿಟ್ಟಿಗೆ ಕಾರಣವಾಗಬಹುದೇನೋ ಎಂಬ ಭಯದಿಂದ ಊರ ಆಢ್ಯ ವ್ಯಕ್ತಿ ದುಗ್ಗಪ್ಪರಂಥವರು ಆಕೆಯ ಮನಸ್ಸು ಬದಲಾಯಿಸಲು ಶತ ಪ್ರಯತ್ನ ಮಾಡಿದರೂ ತೀರಾ ಅಸಹಾಯಕ ಸ್ಥಿತಿಯಲ್ಲಿರುವ ‘ನನಗೆ ನಿಸ್ವಾರ್ಥ ಪ್ರೀತಿಯನ್ನು ಕೊಡಬಲ್ಲ ನನ್ನದೇ ಆದ ಜೀವ ಬೇಕು ಅಷ್ಟೇ’ ಅನ್ನುವ ರತ್ನಮ್ಮನ ದಿಟ್ಟ ಮನೋಭಾವ ಮೆಚ್ಚಿಕೆಯಾಗುತ್ತದೆ.
ವಯಸ್ಸಾದ ಮುದಿ ಜೀವಗಳ ಸಣ್ಣ ಸಣ್ಣ ಆಸೆಗಳ ಕುರಿತಾದ ಕಥೆಗಳು ಸಂಕಲನದಲ್ಲಿ ಇನ್ನೂ ಇವೆ. ಗಂಡನಿಂದ ನಿರ್ಲಕ್ಷ್ಯಕ್ಕೊಳಗಾಗಿ, ಮನೆಗೆ ಬರುವ ಬಳೆಗಾರ ಅವಳ ಮೇಲಿನ ಸಹಾನುಭೂತಿಯಿಂದ ಕೊಟ್ಟಿದ್ದ ಸುಂದರ ಹೂವಿನ ಚಿತ್ತಾರಗಳಿದ್ದ ನೀಲಿ ಬಳೆಗಳನ್ನೇ ಗೋಪ್ಯವಾಗಿ ಧರಿಸಿ ಖುಷಿ ಪಟ್ಟುಕೊಳ್ಳುವ ವಾರಿಜಾ, ಸಮಾಜವು ಬಣ್ಣದ ಸೀರೆಗಳನ್ನು ಉಡುವ ಅವಕಾಶವನ್ನು ಕಿತ್ತುಕೊಂಡಿದ್ದರೂ ಆಕಸ್ಮಿಕವಾಗಿ ಸಿಕ್ಕ ಹಸಿರು ಪತ್ತಲವನ್ನು ಗುಟ್ಟಾಗಿ ಉಟ್ಟು ಸುಖಿಸುವ ಸೀತತ್ತೆ (ಹಸಿರು ಪತ್ತಲ) ಇವೆಲ್ಲವೂ ಸಮಾಜದ ಕಟ್ಟುಪಾಡುಗಳಿಗೆ ಸಡ್ಡು ಹೊಡೆದು, ಸಮಾಜವು ನಿರಾಕರಿಸಿದ್ದನ್ನು ತಮ್ಮದೇ ಆದ ರೀತಿಯಲ್ಲಿ ಪಡೆದುಕೊಂಡು ತಮ್ಮದೇ ಆದ ಸ್ಪೇಸ್ ಕಟ್ಟಿಕೊಳ್ಳುವ ಸ್ತ್ರೀ ಕಥೆಗಳು.
‘ಜೋತಯ್ಯನ ಬಿದಿರು ಬುಟ್ಟಿ’ ಒಂದು ದಲಿತ ಸಂವೇದನೆಯ ಕಥೆ. ವಿಧಿ ವಿಪರ್ಯಾಸದ ಕಥೆಯೆಂದೂ ಹೇಳಬಹುದು. ಮರದಿಂದ ಮರಕ್ಕೆ ಜೋತಾಡುತ್ತಾ ಅನಾಯಾಸವಾಗಿ ಜಿಗಿಯುತ್ತಿದ್ದ ಜೋಗಪ್ಪನ ಮಗುವಿಗೆ ಕಾಲುಗಳೇ ಇಲ್ಲದಾಗುವುದು, ಆ ಮಗುವಿನ ಮೇಲಣ ಪ್ರೀತಿಯಿಂದ ಜೋಗಪ್ಪ ಅವಳನ್ನು ಬಿದಿರ ಬುಟ್ಟಿಯೊಳಗೆ ಕುಳ್ಳಿರಿಸಿ ಲೋಕವನ್ನು ತೋರಿಸಲೆಂದೂ ಹೊತ್ತೊಯ್ಯುವುದು, ಕಾರು-ಬಂಗಲೆ-ಆಸ್ತಿಪಾಸ್ತಿಗಳಿದ್ದೂ ಕೊನೆಗೆ ಎಲ್ಲವನ್ನೂ ಮರೆಯುವ ರೋಗಕ್ಕೆ ತುತ್ತಾಗುವ ಭಯದಲ್ಲಿರುವ ಕಥಾ ನಿರೂಪಕನ ಪರಿಸ್ಥಿತಿ- ಇವೆಲ್ಲವೂ ವಿಧಿ ವಿಪರ್ಯಾಸ. ವಿಧಿ ಲಿಖಿತವನ್ನು ಒಪ್ಪಿಕೊಂಡರೆ ಬದುಕು ಸಹ್ಯ ಅನ್ನುವ ಅನಕ್ಷರಸ್ಥ ಜೋತಯ್ಯ ಒಬ್ಬ ದೊಡ್ಡ ತತ್ವಜ್ಞಾನಿ.
‘ತಿರುವಿನಾಚೆಯಲ್ಲಿ’ ಬಹಳ ಮುಖ್ಯವಾದ ಒಂದು ಕಥೆ. ಇಡೀ ಸಮಾಜವನ್ನು ನಡುಗಿಸುತ್ತಿರುವ ನಕ್ಸಲ್ ಸಮಸ್ಯೆಯ ಕುರಿತಾದ ಗಾಢವಾದ ಚಿಂತನೆ ಇಲ್ಲಿದೆ. ಬಡವರನ್ನು ಶೋಷಿಸುವ ಶ್ರೀಮಂತರನ್ನೂ, ಅಧಿಕಾರವನ್ನು ಕೈಯಲ್ಲಿ ಹಿಡಿದುಕೊಂಡು ಬಡವರಿಗೆ ನ್ಯಾಯ ಕೊಡದಿರುವ ಪ್ರಭುತ್ವವನ್ನೂ ರಕ್ತಪಾತದ ಮೂಲಕವಾದರೂ ನಿರ್ನಾಮ ಮಾಡುತ್ತೇವೆಂದು ಹೇಳುವ ನಕ್ಸಲರು ಅಡಗುದಾಣಗಳಲ್ಲಿ ಕುಳಿತು ಕಾರ್ಯಸಾಧನೆ ಮಾಡುತ್ತೇವೆಂದು ಹೇಳಿಕೊಂಡರೂ ಮುಗ್ಧ ಯುವಜನತೆಯನ್ನು ತಮ್ಮ ದಾಳಗಳನ್ನಾಗಿ ಬಳಸುವ ಅವರ ಒಳ ರಾಜಕೀಯ ಕುತಂತ್ರ ಬೇರೆಯೇ ಇದೆ. ಅದರ ಮೇಲೆ ಈ ಕಥೆ ಪರಿಣಾಮಕಾರಿಯಾಗಿ ಬೆಳಕು ಚೆಲ್ಲುತ್ತದೆ.
ಅನಿವಾರ್ಯ ಸಂದರ್ಭದಲ್ಲಿ ಮುಸಲ್ಮಾನ ಹುಡುಗಿ ಸಕೀನಾಳನ್ನು ತನ್ನ ವಾಹನದಲ್ಲಿ ಕುಳಿತುಕೊಳ್ಳಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸುವ ರಾಜೀವನನ್ನು ಹುಡುಗಿಯ ಕಡೆಯವರು ಬಂದು ಇಲ್ಲಸಲ್ಲದ ಆರೋಪ ಹೊರಿಸಿ ಅಪಮಾನಿಸಿದಾಗ ಬದುಕೇ ಬೇಡವೆನ್ನುವಷ್ಟರ ಮಟ್ಟಿಗೆ ನೊಂದುಕೊಳ್ಳುವ ರಾಜೀವ ತನ್ನ ವಿದ್ಯಾ ಗುರು, ಮಕ್ಕಳಿಲ್ಲದ ಮೋನಪ್ಪರು ಹೆಂಡತಿ ಸಾವಿತ್ರಿ ತಮ್ಮನ್ನು ಬಿಟ್ಟು ಬೇರೆಯವರನ್ನು ಮದುವೆಯಾದಾಗ ಉದಾರವಾಗಿ ಚಿಂತಿಸಿ ಅವಳನ್ನು ಅವಳ ಪಾಡಿಗೆ ಬಿಟ್ಟು, ಬದುಕು ವಿಧಿಸಿದ್ದನ್ನು ಒಪ್ಪಿಕೊಂಡು ಸಮಾಜವನ್ನು ಧೈರ್ಯವಾಗಿ ಎದುರಿಸಿ ಬಾಳುತ್ತಿರುವ ಕಥೆ ಕೇಳಿ ಪರಿವರ್ತನೆ ಹೊಂದುವ ಕಥೆ. ಬಾಳೆಯ ಮರದಂತೆ ಬದುಕಬೇಕು ಎನ್ನುವ ಮೋನಪ್ಪರು ಹೇಳುವ ಮಾತುಗಳು : ‘ಬಾಳೆಮರದ ಮೂಲದಿಂದಲೇ ಅದರ ಸಸಿ ಹುಟ್ಟೋದು. ಅದು ತಾನು ಕಾಣುವ ಫಲದ ರುಚಿಯನ್ನು ತನ್ನ ಜೀವರಸದಿಂದ ಹುಟ್ಟಿದ ಸಸಿಗಳೂ ಅನುಭವಿಸಲಿ ಎಂಬ ಸದುದ್ದೇಶದಿಂಲೇ ಬಹಳ ಮೊದಲು ಅವುಗಳಿಗೆ ಜನ್ಮವಿತ್ತು ಕೊನೆಗೆ ತಾನು ಸಾಫಲ್ಯ ಕಾಣೋದು. ಈ ಬಾಳೆ ಮರವೊಂದು ಗುರುವಿನ ಪ್ರತೀಕ (ಪು.69). ‘ಮುಸ್ಸಂಜೆಯ ಬೆಳಕು’ ಎಂಬ ಕಥೆಯ ವಿಷ್ಣು ಮಾಸ್ತರರೂ ಇದೇ ರೀತಿ ಎಂಥದೇ ವಿಷಮ ಪರಿಸ್ಥಿತಿಯಲ್ಲೂ ಬದುಕನ್ನು ಸಹ್ಯವಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸಿ ಕೊಡುತ್ತಾರೆ. ಈ ಥರದ ತತ್ವಜ್ಞಾನದ ಹೊಳಹುಗಳು ತೇಜಸ್ವಿನಿಯವರ ಹಲವು ಕಥೆಗಳಲ್ಲಿವೆ.
ಗಂಡ ಹೆಂಡತಿಯರ ನಡುವೆ ಪರಸ್ಪರ ನಂಬಿಕೆಯಿಲ್ಲದಿದ್ದರೆ ಬದುಕು ನರಕ. ಅದಕ್ಕಿಂತ ಬೇರೆಯಾಗುವುದೇ ಲೇಸು ಎಂಬ ಶಿವರಾಮ ಕಾರಂತರು ‘ಧರ್ಮರಾಯನ ಸಂಸಾರ’ದಲ್ಲಿ ನೀಡುವ ಸಂದೇಶವು ತೇಜಸ್ವಿನಿಯವರ ‘ತೀರದ ಯಾನ’ ಎಂಬ ಕಥೆಯಲ್ಲಿದೆ. ತಾನು ತಪ್ಪು ಮಾಡಿಲ್ಲವೆಂದು ಎಷ್ಟು ಹೇಳಿದರೂ ನಂಬದೆ ಹೀಯಾಳಿಸುವ ಗಂಡನನ್ನು ಅವಳ ಮನಸ್ಸು ಒಮ್ಮೆ ಮುರಿದ ನಂತರ ಅವನೆಷ್ಟು ಅನುನಯಿಸಿದರೂ ಒಲ್ಲದೆ ಬಿಟ್ಟು ಬಿಡುವ ಸುಮಾ ಇಬ್ಸೆನ್ನನ ಐತಿಹಾಸಿಕ ಪಾತ್ರ ನೋರಾಹನ್ನು ನೆನಪಿಸುತ್ತಾಳೆ.
‘ನೂಪುರ’ ಕಥೆಯ ನಾಯಕಿ ಎಳೆಯ ವಯಸ್ಸಿನಲ್ಲೇ ಕಾಲುಗಳ ಬಲವನ್ನು ಕಳೆದುಕೊಂಡು ಅನೇಕ ಕಷ್ಟ ಸಂಕಟಗಳನ್ನು ಅನುಭವಿಸಿದವಳು. ತನಗೆ ದೊರಕದ ಕಾಲ್ಗೆಜ್ಜೆ ಧರಿಸುವ ಅವಕಾಶ ಮಗಳಿಗಾದರೂ ಸಿಗಲಿ ಎಂದು ಬಯಸಿದರೆ ಮಗಳಿಗೆ ಕಾಲ್ಗೆಜ್ಜೆಯೇ ಬೇಡ. ಅಲಂಕಾರ ಪ್ರಿಯೆಯಾದ ಆಕೆಗೆ ಮಗಳ ನಿರಾಕರಣೆಯು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಮನೆಯ ಮುಂದಿನ ಮಾವಿನ ಮರದಿಂದ ಬಿದ್ದು ಪೆಟ್ಟಾಗಿ ಕಾಲುಗಳನ್ನು ಕಳೆದುಕೊಳ್ಳುವ ಅವಳು ಆ ಮರವನ್ನೇ ದ್ವೇಷಿಸಿದರೂ ಮುಂದೆ ಚಿತ್ರ ಕಲಾವಿದೆಯಾಗಿ ಬಿಡಿಸುವ ಮೊದಲ ಚಿತ್ರ ಅದೇ ಮರದ್ದಾಗಿದ್ದು ಅದು ಅವಳನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಒಯ್ಯುವುದು ಒಂದು ಸಂತಸದ ತಿರುವು. ‘ಬದುಕು ನಾವು ಬಯಸಿದ್ದೆಲ್ಲವನ್ನೂ ಕೊಡುವುದಿಲ್ಲ. ಸಿಕ್ಕಿದ್ದನ್ನು ಹೆಕ್ಕಿಕೊಳ್ಳುವುದಷ್ಟೇ ನಮ್ಮ ಪಾಲು’ ಎಂಬ ಪಾಠವನ್ನು ಮಾಮರವು ಕಲಿಸಿತ್ತು.
ಇಡೀ ಸಂಕಲನದಲ್ಲಿ ಭಿನ್ನವಾಗಿ ಎದ್ದು ಕಾಣುವ ಕಥೆ ‘ಯಶವಂತಿ’. ಶಿವಾಜಿಯ ಕಾಲದಲ್ಲಿ ನಡೆಯಿತೆನ್ನಲಾದ ಐತಿಹಾಸಿಕ ಕಥನ ಶೈಲಿಯ ಈ ನಿರೂಪಣೆಯಲ್ಲಿ ಯುದ್ಧ ಕಾಲದಲ್ಲಿ ಶತ್ರು ಪಾಳೆಯದ ಮೇಲೆ ದಾಳಿ ನಡೆಸುವಾಗ ಕಡಿದಾದ ಕೋಟೆಯನ್ನೇರಲು ಉಡಗಳನ್ನು ಬಳಸುತ್ತಿದ್ದ ವಿಚಾರವು ಪ್ರಧಾನ ಭೂಮಿಕೆಯಲ್ಲಿದೆ. ಇಲ್ಲಿನ ನಿರೂಪಕಿ ಯಶವಂತಿಯೇ ಒಂದು ಹೆಣ್ಣು ಉಡ ಅನ್ನುವುದು ಇಲ್ಲಿನ ವೈಶಿಷ್ಟ್ಯ. ಅಧಿಕಾರ ದಾಹ, ಸೇಡು, ಸ್ವಾಭಿಮಾನ ಎಂದೆಲ್ಲ ಹತ್ತಾರು ಕಾರಣಗಳನ್ನೊಡ್ಡಿ ಯುದ್ಧಕ್ಕೆ ಹೊರಡುವ ಮನುಷ್ಯರಿಂದಾಗುವ ನಾಶ, ನಷ್ಟ, ಜೀವಹಾನಿ, ಪ್ರಾಣಿ ಹಿಂಸೆ, ರಕ್ತಪಾತ, ಸಾವು-ನೋವುಗಳ ಬಗ್ಗೆ ಕಥೆಗಾರ್ತಿಯ ಅನಿಸಿಕೆಗಳು ಇಲ್ಲಿ ಯಶವಂತಿಯ ಮೂಲಕ ಪ್ರಕಟವಾಗಿವೆ.
ತೇಜಸ್ವಿನಿಯವರ ಭಾಷೆ ಸರಳವಾಗಿದ್ದರೂ ಓದುಗರನ್ನು ತಲ್ಲೀನಗೊಳಿಸುವ ಆಕರ್ಷಣ ಶಕ್ತಿ ಅದಕ್ಕಿದೆ. ಗ್ರಾಮೀಣ ಜೀವನ ಶೈಲಿ, ಆಹಾರ-ವಿಹಾರಗಳ ವರ್ಣನೆ, ಮನುಷ್ಯ ಸ್ವಭಾವ ಹಾಗೂ ಸಂಬಂಧಗಳ ಮನಮುಟ್ಟುವ ಚಿತ್ರಣ, ಜನಪದರ ಮಾತುಗಳಲ್ಲಿ ಅಲ್ಲಲ್ಲಿ ಬರುವ ಗಾದೆಮಾತು ಮತ್ತು ನುಡಿಗಟ್ಟುಗಳ ಸಹಜ ಬಳಕೆ ಮುಂತಾದವು ಅವರ ಕಥೆಗಳಿಗೆ ಮೆರುಗನ್ನಿತ್ತಿವೆ. ಕಥೆಯ ವಸ್ತುಗಳನ್ನು ನೆಪ ಮಾತ್ರಕ್ಕೆ ಆಯ್ದುಕೊಂಡು ಅಲ್ಲಿ ಸೃಷ್ಟಿಯಾಗುವ ಪಾತ್ರ- ಸಂದರ್ಭ-ಸನ್ನಿವೇಶಗಳ ವಿಪುಲವಾದ ವಿವರಗಳನ್ನು ಕಥೆಯ ರಚನಾ ಬಂಧದ ಬಿಗಿಗೆ ತೊಂದರೆಯಾಗದ ರೀತಿಯಲ್ಲಿ ಕೊಡುವುದು ತೇಜಸ್ವಿನಿಯವರ ಅನನ್ಯತೆಯೂ ಹೌದು.
ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕಿಯ ಬಗ್ಗೆ :
ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ತೇಜಸ್ವಿನಿ ಹೆಗಡೆಯವರು ಹುಟ್ಟಿ ಬೆಳೆದದ್ದೆಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿ.ಎಸ್ಸಿ. ಮತ್ತು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡದಿರುತ್ತಾರೆ.
ಕವನ ಸಂಕಲನಗಳು : ಚಿಗುರು ಮತ್ತು ಪ್ರತಿಬಿಂಬ, ಕಥಾ ಸಂಕಲನಗಳು : ಕಾಣ್ಕೆ, ಸಂಹಿತಾ ಮತ್ತು ಜೋತಯ್ಯನ ಬಿದಿರು ಬುಟ್ಟಿ, ಕಾದಂಬರಿಗಳು : ಹೊರಳುದಾರಿ ಮತ್ತು ಹಂಸಯಾನ, ಅಂಕಣ ಬರಹ : ಉದಯವಾಣಿಯಲ್ಲಿ ಪ್ರಕಟಗೊಂಡಿದ್ದ ಅಂಕಣ ಬರಹದ ಸಂಕಲನದ ‘ತನ್ನತಾನ’ ಎನ್ನುವ ಪುಸ್ತಕ ಮತ್ತು ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯಡಿಯಲ್ಲಿ ಪ್ರಕಟಗೊಂಡಿರುವ ‘ಅಬ್ರಾಹಾಂ ಲಿಂಕನ್’ ಎಂಬ ಪುಸ್ತಕ ಇವರ ಪ್ರಕಟಗೊಂಡಿರುವ ಕೃತಿಗಳು.
ಹೊರಳುದಾರಿ ಕಾದಂಬರಿಗೆ ಪ್ರಥಮ ಬಹುಮಾನ, ಹಂಸಯಾನ ಕಾದಂಬರಿಗೆ ಪ್ರತಿಷ್ಠಿತ ‘ಮಾಸ್ತಿ ಪುರಸ್ಕಾರ’ ಲಭಿಸಿದ್ದು, ತುಷಾರ ಕ್ಯಾಲಿಫೋರ್ನಿಯಾ ಕಥಾ ಸ್ಪರ್ಧೆ, ಉತ್ಥಾನ ಕಥಾ ಸ್ಪರ್ಧೆ, ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ಧೆ, ಜನಮಿತ್ರ ಪತ್ರಿಕೆ ಏರ್ಪಡಿಸಿದ್ದ ಕಥೆ ಹಾಗೂ ಕವನ ಸ್ಪರ್ಧೆ ಮುಂತಾದವುಗಳಲ್ಲಿ ಹಲವು ಬಹುಮಾನಗಳು ದೊರಕಿವೆ.
ಪುಸ್ತಕದ ಪ್ರತಿಗಳಿಗಾಗಿ www.kannadaloka.in ಅಥವಾ, ಕನ್ನಡಲೋಕ – 9739020070 ಸಂಖ್ಯೆಯನ್ನು ಸಂಪರ್ಕಿಸಬಹುದು.