ಕಾಸರಗೋಡು : ಕಾಸರಗೋಡಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಘ ‘ರಂಗ ಚಿನ್ನಾರಿ’ ಇದರ ಮಹಿಳಾ ಘಟಕ ‘ನಾರಿ ಚಿನ್ನಾರಿ’ಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ‘ಗೃಹ ಸಲ್ಲಾಪ’, ಸಾಧಕಿಯರ ಜೊತೆ ಮಾತುಕತೆಯ ವಿನೂತನ ಕಾರ್ಯಕ್ರಮವು ದಿನಾಂಕ 26-02-2024ರ ಸೋಮವಾರ ಸಂಜೆ ಘಂಟೆ 4.00 ರಿಂದ ಕಾಸರಗೋಡಿನ ಕೂಡ್ಲು ರಾಮದಾಸ ನಗರದ ‘ಭುವನ ವಿಜಯ’ದಲ್ಲಿ ನಡೆಯಿತು.
ಈ ಸರಣಿ ಕಾರ್ಯಕ್ರಮದ ಪ್ರಥಮ ಕಾರ್ಯಕ್ರಮವನ್ನು ಲೇಖಕಿ ಹಾಗೂ ಗಾಯಕಿಯಾದ ಕೃಪಾ ಕೆ. ಜಿ. ಶಾನುಭೋಗ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಧೂರು ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷೆ ಸುಜ್ಞಾನಿ ಶಾನುಭೋಗ್ ಮಾತನಾಡಿ “ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯು ಕಳೆದ 12 ತಿಂಗಳಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಮಹಿಳೆಯರಲ್ಲಿ ಸೂಕ್ತವಾಗಿರುವ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿ ಕೊಟ್ಟಿದೆ. ಇದೀಗ ‘ಗೃಹ ಸಲ್ಲಾಪ’ದ ಮುಖಾಂತರ ಸಾಧಕಿಯರ ಮನೆ ಮನ ಮುಟ್ಟುವ ಕೆಲಸ ಮಾಡುತ್ತಿರುವುದು ಸಂತಸ ನೀಡಿದೆ.” ಎಂದರು.
ಖ್ಯಾತ ಬರಹಗಾರ್ತಿ ಶ್ರೀಮತಿ ವಿಜಯಲಕ್ಷ್ಮಿ ಶಾನುಭೋಗ್ ಮಾತನಾಡಿ “ಸಾಧಕಿಯರ ಸಾಧನೆ ಉಳಿದ ಮಹಿಳೆಯರಿಗೆ ಪ್ರೇರಣೆಯಾಗಬೇಕು. ಮನೆ ಯಜಮಾನರ ಪ್ರೋತ್ಸಾಹ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಹೆತ್ತ ತಾಯಿಯೂ ಅಧ್ಯಾಪಕಿ ಮತ್ತು ಸಾಹಿತಿ ಆಗಿರುವುದರಿಂದ ತಪ್ಪುಗಳನ್ನು ಸರಿ ಪಡಿಸುತ್ತಾ ಸಾಹಿತ್ಯ ಲೋಕದಲ್ಲಿ ನನ್ನನ್ನು ಬೆಳೆಸಿದರು.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಬಿತಾ ಆಚಾರ್ಯ ಇವರು ವಿಜಯಲಕ್ಷ್ಮೀ ರಚಿಸಿದ ಕವನವೊಂದನ್ನು ಹಾಡಿದರು.
ಸಂಸ್ಥೆಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ತಿಳಿಸಿ, ‘ಗೃಹ ಸಲ್ಲಾಪ’ದ ಕಲ್ಪನೆ ಬಗ್ಗೆ ವಿವರಿಸಿ “ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಸಾಹಿತಿ ಕಲಾವಿದರ ಮನೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.” ಎಂದರು.
ಸರ್ವಮಂಗಳ ಜಯ ಪುಣಿಚಿತ್ತಾಯ ಮತ್ತು ಗೀತಾ ಎಂ. ಭಟ್ ಇವರು ವಿಜಯಲಕ್ಷ್ಮೀ ಶಾನುಭೋಗ್ ರಚಿಸಿದ ಕವನಗಳನ್ನು ಹಾಗೂ ಡಾ. ಯು. ಮಹೇಶ್ವರಿ ಅವರು ಚಿಂತನ ಬರಹಗಳನ್ನು ಪ್ರಸ್ತುತಪಡಿಸಿದರು. ವಿಜಯಲಕ್ಷ್ಮೀ ಶಾನುಭೋಗ್ ಅವರ ಜೊತೆ ಸಂವಾದವನ್ನು ಶ್ರೀಮತಿ ಮಹೇಶ್ವರಿಯವರು ನಡೆಸಿಕೊಟ್ಟರು. ಸಂವಾದದಲ್ಲಿ ಜುಲೇಖಾ ಮಾಹಿನ್, ಶ್ರೀಮತಿ ಸೂರ್ಯಕಾಂತಿ, ಶ್ರೀಮತಿ ಶರಣ್ಯ ನಾರಾಯಣನ್, ಜನಾರ್ದನ ಅಣಂಗೂರು, ಶ್ರೀಮತಿ ಸರೋಜಿನಿ ಭಟ್ ಮೊದಲಾದವರು ಭಾಗವಹಿಸಿದ್ದರು.
ನಾರಿ ಚಿನ್ನಾರಿ ತಂಡದ ಪರವಾಗಿ ವಿಜಯಲಕ್ಷ್ಮೀ ಶಾನುಭೋಗ್ ಮತ್ತು ಡಾ ಕೆ. ಕೆ. ಶಾನುಭೋಗ್ ದಂಪತಿಯನ್ನು ಶಾಲು, ಹಾರ, ಸ್ಮರಣಿಕೆ ಜೊತೆಗೆ ಫಲ ಪುಷ್ಪಗಳೊಂದಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು. ದಂಪತಿಗಳು ನಾರಿ ಚಿನ್ನಾರಿಯ ‘ಗೃಹ ಸಲ್ಲಾಪ’ವೆಂಬ ನೂತನ ಹೆಜ್ಜೆಯನ್ನು ಶ್ಲಾಘಿಸಿದರು ಮತ್ತು ಈ ಕಾರ್ಯಕ್ರಮ ತಮ್ಮ ಮನೆಯಿಂದಲೇ ಶುಭಾರಂಭವಾದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಶಾನುಬೋಗ್ ಸ್ವಾಗತಿಸಿ, ನಾರಿ ಚಿನ್ನಾರಿಯ ಕಾರ್ಯದರ್ಶಿ ದಿವ್ಯಗಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು. ಭಾಗವಹಿಸಿದವರೆಲ್ಲರಿಗೂ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.
1 Comment
ಒಳ್ಳೆಯ ಕೆಲಸ . ಮುಂದುವರಿಯಲಿ