ತೆಕ್ಕಟ್ಟೆ : ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ತೆಕ್ಕಟ್ಟೆ ಕೊಮೆಯ ಯಶಸ್ವೀ ಕಲಾವೃಂದದ “ಸಿನ್ಸ್ 1999 ಶ್ವೇತಯಾನ”ದ ಶ್ವೇತ ಸಂಜೆ-2ರ ಕಾರ್ಯಕ್ರಮವು ಕೊಮೆಯ ಹೆಗ್ಡೆಕೆರೆ ಬೊಬ್ಬರ್ಯ ದೈವಸ್ಥಾನದಲ್ಲಿ ದಿನಾಂಕ 24-02-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಡಯೆಟ್ ಉಡುಪಿಯ ಹಿರಿಯ ಉಪನ್ಯಾಸಕರಾದ ಶ್ರೀ ಯೋಗ ನರಸಿಂಹಸ್ವಾಮಿ ಇವರು ರಸರಂಗ ಕೋಟ ಸಂಸ್ಥೆಯ ಕಲಾವಿದರನ್ನು ಗೌರವಿಸಿ ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತಾ “ಶಿಕ್ಷಣವೆನ್ನುವುದು ಪ್ರತಿಯೊಬ್ಬರ ಹಕ್ಕು. ಸಂಪೂರ್ಣ ಸಾಕ್ಷರತೆಯ ಉದ್ದೇಶವಾಗಿರಿಸಿಕೊಂಡು ಸರಕಾರ ಸಾರುತ್ತಿರುವ ಶಿಕ್ಷಣದೊಳಗಿನ ಸಾರ ಎಲ್ಲರನ್ನೂ ತಲುಪಬೇಕೆಂದಾದರೆ ಸಾರ್ವತ್ರಿಕವಾದ ಶ್ರಮ ಬೇಕಾಗುತ್ತದೆ. ನವಭಾರತ ಆಯೋಜಿಸಲ್ಪಟ್ಟಿದ್ದ ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಎಲ್ಲರೂ ಯಶಸ್ವಿಗೊಳಿಸಬೇಕು” ಎಂದು ಹೇಳಿದರು.
25ನೇ ರಜತ ಸಂಭ್ರಮವನ್ನು ಆಚರಿಸಿಕೊಂಡ ಸಂಸ್ಥೆಯ ವಾರಾಂತ್ಯದ ಕಾರ್ಯಕ್ರಮವು ವಿಭಿನ್ನ ಕಲಾ ಪ್ರಕಾರದೊಂದಿಗೆ ಸಂಪನ್ನಗೊಳ್ಳುವುದರೊಂದಿಗೆ ವಿವಿಧ ಕಲಾವಿದರ ಕಾರ್ಯಕ್ರಮವು ಸಂಸ್ಥೆಯ ವೇದಿಕೆಯಲ್ಲಿ ವಿಭಿನ್ನ ಪರಿಕಲ್ಪನೆಯಲ್ಲಿ ಪ್ರಸ್ತುತಿಗೊಳ್ಳಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಹೇಳಿದರು.
ಸಿನ್ಸ್ 1999 ಶ್ವೇತಯಾನ ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಹಾಗೂ ಗೋಪಾಲ ಪೂಜಾರಿ ಕೊಮೆ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗೋಪಾಲ ಪೂಜಾರಿ ಕುಂದಾಪುರ, ಸುಧಾ ಮಣೂರು, ಪ್ರಿಯಾ, ಮೇಘನಾ ಉಪಸ್ಥಿತರಿದ್ದರು. ಶಂಕರನಾರಾಯಣ ಉಪಾಧ್ಯಾಯ ಸ್ವಾಗತಿಸಿ, ಪಂಚಮಿ ವೈದ್ಯ ಧನ್ಯವಾದಗೈದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ರಸರಂಗ ಕೋಟ ಇವರಿಂದ ಅಗರಿ ಭಾಸ್ಕರ್ ರಾವ್ ವಿರಚಿತ ಯಕ್ಷಗಾನ ಪ್ರಸಂಗ “ರಾಣಿ ಅಪ್ರಮೇಯಿ” ರಂಗದಲ್ಲಿ ಪ್ರಸ್ತುತಿಗೊಂಡಿತು.