ಕೊಪ್ಪಳ : ಧಾರವಾಡದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳ 110ನೇ ಜನ್ಮದಿನದ ಅಂಗವಾಗಿ ಸಂಗೀತೋತ್ಸವ ಹಾಗೂ ‘ಪುಟ್ಟರಾಜ ಸಮ್ಮಾನ-2024’ ಪ್ರದಾನ ಸಮಾರಂಭವು ದಿನಾಂಕ 03-03-2024ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಜ್ಯುನಿಯರ್ ಕಾಲೇಜಿನ ಆವರಣ ಹತ್ತಿರ, ಐ.ಎಂ.ಎ. ಸಭಾಂಗಣದಲ್ಲಿ ನಡೆಯಲಿದೆ.
ಈ ಸಮಾರಂಭವು ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಚಾಲಕರಾದ ಪರಮಪೂಜ್ಯ ಶ್ರೀ ಡಾ. ಕಲ್ಲಯ್ಯಜ್ಜನವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಗಂಗಾವತಿ ವಿಧಾನ ಸಭೆಯ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅಧ್ಯಕ್ಷತೆಯಲ್ಲಿ ಮಾನ್ಯ ಸಚಿವರಾದ ಶ್ರೀ ಶಿವರಾಜ ತಂಗಡಗಿಯವರು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ದೇವರಹೊಸಪೇಟೆಯ ಶ್ರೀ ಮಂಜುನಾಥ ಭಜಂತ್ರಿ ಇವರಿಂದ ಶಹನಾಯಿ ವಾದನ ನಡೆಯಲಿದೆ. ಇವರಿಗೆ ಹುಬ್ಬಳ್ಳಿ ಶ್ರೀ ಆಂಜನೇಯ ಭಜಂತ್ರಿ ತಬಲಾ ಸಾಥ್ ನೀಡಲಿದ್ದಾರೆ. ಪಂಡಿತ ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಇವರ ಗಾಯನಕ್ಕೆ ಸಂವಾದಿನಿಯಲ್ಲಿ ಶ್ರೀ ಬಸವರಾಜ ಹಿರೇಮಠ ಹಾಗೂ ತಬಲಾದಲ್ಲಿ ಶ್ರೀ ಶರಣಕುಮಾರ ಘುತ್ತರಗಿ ಸಾಥ್ ನೀಡಲಿದ್ದಾರೆ.
2010ರಲ್ಲಿ ಲಿಂಗೈಕ್ಯರಾದ ಪದ್ಮಭೂಷಣ, ಡಾ. ಪುಟ್ಟರಾಜ ಗವಾಯಿಗಳು ಮಹಾನ್ ಸಂಗೀತ ಸಾಧಕರು, ಗಾಯನವಲ್ಲದೆ ಹಲವು ವಾದ್ಯ ಪ್ರವೀಣರು, ತ್ರಿಭಾಷಾ ಪಂಡಿತರು, ಉಭಯ ಗಾಯನಚಾರ್ಯರು ಗುರುಗಳಾದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಅಪ್ಪಣೆಯಂತೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕರ್ಣಧಾರತ್ವವನ್ನು ವಹಿಸಿ ಏಳು ದಶಕಗಳ ಕಾಲ ಅಂಧ, ಅನಾಥ, ವಿಕಲಾಂಗ ಹಾಗೂ ಬಡಮಕ್ಕಳಿಗೆ ನಿಸ್ವಾರ್ಥದಿಂದ ಸಂಗೀತ, ಸಾಹಿತ್ಯ ಸಂಸ್ಕೃತಿ ಕಲಿಸಿ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದವರು. ಇಂತಹ ಮಹಾನ್ ಗುರುಗಳ ಹೆಸರಿನಲ್ಲಿ ಅವರ ಶಿಷ್ಯರು ಹಾಗೂ ಭಕ್ತರು ಸೇರಿ 1998ರಲ್ಲಿ ಧಾರವಾಡದಲ್ಲಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹುಟ್ಟು ಹಾಕಿದರು. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಸಂಗೀತೋತ್ಸವಗಳನ್ನು ಸಂಗೀತ ಸಮ್ಮೇಳನಗಳನ್ನು ಪ್ರತಿಷ್ಠಾನವು ಆಯೋಜಿಸುತ್ತಿದೆ. ಪ್ರತಿ ವರ್ಷ ಮಾರ್ಚ್ 3ರಂದು ಪದ್ಮಭೂಷಣ ಪುಟ್ಟರಾಜ ಗವಾಯಿಗಳ ಜನ್ಮದಿನದ ಅಂಗವಾಗಿ ರಾಜ್ಯ, ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಗೀತ ಕ್ಷೇತ್ರದಲ್ಲಿ ಜೀವಮಾನ ಸಾಧನೆಗೈದ ಸಂಗೀತ ಸಾಧಕರಿಗೆ 1999ರಿಂದ ಒಂದು ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡ ‘ಪುಟ್ಟರಾಜ ಸಮ್ಮಾನ’ ಪ್ರದಾನಿಸಿ ಗೌರವಿಸುತ್ತಾ ಬಂದಿದೆ.
ಪ್ರಸ್ತುತ ವರ್ಷ 2024ರ ‘ಪುಟ್ಟರಾಜ ಸಮ್ಮಾನ’ಕ್ಕೆ ಪ್ರತಿಷ್ಠಾನವು ಪಂಡಿತ ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ಗದಗ ಇವರನ್ನು ಆಯ್ಕೆ ಮಾಡಿದೆ. ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪದ್ಮಭೂಷಣ ಡಾ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯತ್ವ ವಹಿಸಿ ಸಂಗೀತ, ಸಾಹಿತ್ಯದ ಪಾಂಡಿತ್ಯ ಪಡೆಯುವುದರ ಜೊತೆಗೆ ಮಹಾನ್ ಗುರುವಿನ ಪ್ರೀತಿ, ಅಂತಃಕರಣಕ್ಕೆ ಪಾತ್ರರಾಗಿರುವ ಡಾ. ರಾಜಗುರು ಇವರು ಗುರುಗಳೊಂದಿಗೆ ಶ್ರಮಿಸಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪರಂಪರೆಯನ್ನು ಶ್ರೀಮಂತಗೊಳಿಸಿರುತ್ತಾರೆ. ಸಂಗೀತ,ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ವಿಶಿಷ್ಟ ಜೀವಮಾನ ಸಾಧನೆಯನ್ನು ಗುರುತಿಸಿ ಪ್ರತಿಷ್ಠಾನವು 2024ರ ರಾಷ್ಟ್ರೀಯ ಪುಟ್ಟರಾಜ ಸಮ್ಮಾನ ಪ್ರದಾನಿಸುತ್ತಿದೆ.