ಮಂಗಳೂರು : ಉಡುಗೊರೆ ಪ್ರಕಾಶನ ಪ್ರಕಟಿಸಿದ ಕವಯಿತ್ರಿ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನವು ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ದಿನಾಂಕ 24-02-2024ರಂದು ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಜೆ.ಎನ್.ಯು. ನಿವೃತ್ತ ಪ್ರಾಧ್ಯಾಪಕರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ “ಈ ದೇಶವನ್ನು ಮುಸ್ಲಿಮರು 600 ವರ್ಷಗಳ ಕಾಲ ಆಳಿದ್ದಾರೆ. ಅವರು ಮರಣವನ್ನಪ್ಪಿದ್ದು ಕೂಡಾ ಇಲ್ಲೇ. ಹಾಗಾಗಿ ಅವರು ದೋಚಲಿಲ್ಲ. ಈ ದೇಶದ ಹಿಂದೂಗಳು ಶೇಕಡಾ 24ರಷ್ಟು ಹಿಂದುಳಿದಿದ್ದರೆ ಮುಸ್ಲಿಮರು ಶೇ.38ರಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರು ದೋಚಿದ್ದರೆ ಹಿಂದೂಗಳಿಗಿಂತ ಶ್ರೀಮಂತರಾಗಬೇಕಿತ್ತು. ಈ ಕಹಿಸತ್ಯವನ್ನು ಜಗತ್ತಿಗೆ ತಿಳಿಸುವುದಕ್ಕಾಗಿಯಾದರೂ ಮುಸ್ಲಿಮರು ಬರವಣಿಗೆಯಲ್ಲಿ ಸಕ್ರಿಯವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕಥೆಗಾರ್ತಿ ಸುಧಾ ಆಡುಕಳ ಕೃತಿಯನ್ನು ಪರಿಚಯಿಸಿ, ಕವಯಿತ್ರಿ ಫಾತಿಮಾ ರಲಿಯಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಪತ್ರಕರ್ತ ಮುಆದ್ ಜಿ.ಎಂ. ಕವನ ವಾಚಿಸಿದರು. ಕವಿ ವಿಲ್ಸನ್ ಕಟೀಲ್ ಮುಖ್ಯ ಅತಿಥಿಗಳಾಗಿದ್ದರು. ಲೇಖಕಿ ಉಮೈರತ್ ಕುಮೇರು ಸ್ವಾಗತಿಸಿ, ಎಚ್.ಎಂ. ಪೆರ್ನಾಳ್ ಕಾರ್ಯಕ್ರಮವನ್ನು ನಿರೂಪಿಸಿದರು.