ನಾಟಕ: ದ್ರೋಪತಿ ಹೇಳ್ತವ್ಳೆ
ನಿರ್ದೇಶನ: ಗಣೇಶ ಮಂದಾರ್ತಿ
ಅಭಿನಯ: ರಂಗಾಸ್ಥೆ
ನೋಡಿದ್ದು: ನಾಟಕ ಬೆಂಗ್ಳೂರು ಉತ್ಸವದಲ್ಲಿ
ದ್ರೋಪತಿ ಹೇಳ್ತವ್ಳೆ.
ಅದೊಂದು ಸಂಜೆ.
ವಾದ್ಯದವರೂ ಮೇಳದವರೂ ಸಿದ್ಧರಾಗಿದ್ದಾರೆ. ಹಿರಿಯ ಭಾಗವತರೂ ಏಕತಾರಿ ಹಿಡಿದು ನಿಂತಿದ್ದಾರೆ. ಅಂದು ಒಂದು ಚೆಂದದ ಕತೆ ಹೇಳಬೇಕಿದೆ. ಸರಿ, ಯಾವ ಕತೆ ಹೇಳಬೇಕೆಂಬ ಚರ್ಚೆ ಮೇಳದಲ್ಲಿ ಶುರುವಾಗಿದೆ. ‘ಕೃಷ್ಣ ಕಥೆ ಹೇಳೋಣ’ ಎಂದು ನಿರ್ಣಯವಾಗಿದೆ. ಇನ್ನೇನು ಕತೆ ಶುರುವಾಗಬೇಕು…
ಅಷ್ಟರಲ್ಲಿ….ಭೂಕಂಪನವಾದಂತೆ,ಸುತ್ತು ಹತ್ತು ದಿಕ್ಕುಗಳಿಂದಲೂ ಕಸಬರಿಗೆ ಬೀಸುತ್ತ ರೋಷದಿಂದ ರಂಗಕ್ಕೆ ದಾಂಗುಡಿಯಿಡುತ್ತದೆ ಮಹಿಳೆಯರ ದಂಡು. ‘ಈಬಾರಿ ಹೆಣ್ಣಿನ ಕಥೆಯೇ ಆಗಬೇಕು’ ಎಂಬುದು ಅವರ ಪಟ್ಟು. ಕೊನೆಗೂ ತೀರ್ಮಾನವಾಗುತ್ತದೆ ಕಥೆ.
ಜೊತೆಗೆ ಶುರುವಾಗುತ್ತದೆ ನಾಟಕ.
‘ ದ್ರೋಪತಿ ಹೇಳ್ತವ್ಳೆ’
ಹೌದು ಇದು ದ್ರೌಪತಿ ಯ ಕಥೆಯೇ.
ನಾಟಕ ಶುರುವಾಗೋದು ದ್ರೌಪತಿಯ ಹುಟ್ಟಿನ ಜೊತೆಗೇ. ದ್ರುಪದ ಅರ್ಜುನನಿಂದ ಸೋತುಹೋಗಿದ್ದಾನೆ. ದ್ರೋಣರು ಪ್ರಾಣಭಿಕ್ಷೆ ನೀಡಿ ಹೋಗಿದ್ದಾರೆ. ಅವಮಾನದ, ದ್ವೇಷದ ಬೆಂಕಿಯಲ್ಲಿ ಕುದಿಯುತ್ತಲೇ ಆತ ತಪಸ್ಸು ಮಾಡಿ ಶಿವನಿಂದ ವರ ಪಡೆದಿದ್ದಾನೆ.
ಆ ವರದಿಂದಲೇ ಹುಟ್ಟಿದವಳು ದ್ರೌಪತಿ. ಬೆಂಕಿಯ ಮಗಳು.
ಹೀಗೆ ದ್ವೇಷಕ್ಕಾಗಿ ಹುಟ್ಟಿದ ದ್ರೌಪತಿಯ ಬದುಕಿನ ಕಥೆಯಿದು. ಮಹಾಭಾರತದ ಕಥೆ. ಬಿಚ್ಚಿದ ಮುಡಿಯನ್ನ ರಕ್ತದಿಂದ ತೊಯ್ದು ಮತ್ತೆ ಕಟ್ಟಿದ ಕಥೆ. ಆಕೆ ಜೀವನದ ಮುಖ್ಯ ಘಟ್ಟಗಳನ್ನೆಲ್ಲ ಹಾದು ಮಹಾಪ್ರಸ್ಥಾನದ ಹಾದಿ ತಲುಪುವವರೆಗಿನ ಕಥೆ.
ಕಥೆಯುದ್ದಕ್ಕೂ ಕಾಣುವದು ದ್ವೇಷ ಮತ್ತು ಬೆಂಕಿ ಯ ಹಾದಿಯೇ.
‘ ಪ್ರೀತಿಗಾಗಿ ಮಕ್ಕಳನ್ನ ಹಡೆಯುವದುಂಟು. ದ್ವೇಷಕ್ಕಾಗಿ ಹುಟ್ಟಿದವಳು ನಾನು ಮಾತ್ರ’ ಎಂದು ಪ್ರಾರಂಭದಲ್ಲೇ ಅಲವತ್ತುಕೊಳ್ಳುತ್ತಾಳೆ ಆಕೆ. ಆಕೆಯ ಬದುಕಲ್ಲಿ ಅದೆಷ್ಟು ತೀವ್ರವಾದ ತಿರುವುಗಳು, ಆಘಾತಗಳು. ಅವೆಲ್ಲವನ್ನೂ ಧೈರ್ಯ ದಿಂದಲೇ ಎದುರಿಸುತ್ತಾಳೆ.
ಕೃಷ್ಣನನ್ನು ಕಂಡಾಕ್ಷಣ ಪ್ರೀತಿಸಿದ ಆಕೆಗೆ ಸಿಗುವದು ನಿರಾಕರಣೆಯ ನೋವು . ಮುಂದೆ ಅರ್ಜುನನನ್ನು ಮದುವೆಯಾಗಿ ಬಂದಾಗಲೂ,
” ಮುತ್ತನ್ನು ಐವರೂ ಭೋಗಿಸಿ ಹರುಷದಲಿ” ಎಂದು ಕುಂತಿಯಿಂದ ಕೇಳುವ ಆಘಾತ. ಐವರು ಗಂಡಂದಿರ ಹೆಂಡತಿಯಾಗುವ ದುರಾದೃಷ್ಟ. ಮುಂದೆ ಪಗಡೆಯಾಟದ ಪ್ರಸಂಗದಲ್ಲಾಗಲೀ, ಕೀಚಕನ ಪ್ರಸಂಗದಲ್ಲಾಗಲೀ ಆಕೆ ಅನುಭವಿಸುವದು ಬರಿಯ ಯಾತನೆಯೇ. ಒಡಲೊಳಗೆ ಬೇಯುವ ಬೆಂಕಿ. ದ್ವೇ಼ಷಭಾವ.
” ಸುಟ್ಟಿಕೊಂಡೇ ಹುಟ್ಟಿ ಬಂದೆ. ಗೊಂಬೆಯಂತೆ ಬೆಂದೆ” ಅನ್ನುತ್ತಾಳೆ ಅವಳು.
ಹೀಗೆ ಬೆಂಕಿ, ದ್ವೇ಼ಷ, ನೋವುಗಳ ಆಕೆಯ ಬದುಕಿನ ಕೊನೆಯಲ್ಲಿ, ಮಹಾಪ್ರಸ್ಥಾನದ ಕಾಲದಲ್ಲೂ ತಿರಸ್ಕೃತಳೇ ಆಗುತ್ತಾಳೆ ಆಕೆ.
‘ ಅರ್ಜುನನಿಗಿರುವ ಮೋಹ ಆಕೆಯನ್ನು ಸ್ವರ್ಗಕ್ಕೆ ಹೋಗದಂತೆ ತಡೆಯುತ್ತಿದೆ” ಎನ್ನುತ್ತ ಆಕೆಯನ್ನು ಹೀದೆಯೇ ಬಿಟ್ಟು ಮುಂದೆ ಸಾಗಿಬಿಡುತ್ತಾನೆ ಯುಧಿಷ್ಠರ. ಆಕೆ ಕೂಗುತ್ತಾಳೆ ” ಭೀಮಾ ನನ್ನ ಮನದಲ್ಲಿದ್ದುದು ನೀನು ಬರೇ ನೀನು ಮಾತ್ರ. ” ಎಂದು ಬಹುಷಃ ಮೊದಲ ಬಾರಿಗೆ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ.
ಹೀಗೆ ಭಾವಗಳನ್ನೆಲ್ಲ ಬೆಂಕಿಯಲ್ಲಿ ಸುಟ್ಟುಕೊಂಡವಳು ಅವಳು. ಬೆಂಕಿ ಆಕೆಯ ಭಾವಗಳನ್ನೆಲ್ಲ ಪಾಕವಾಗಿಸಿದೆ.
” ಬೆಂಕಿಯಲ್ಲಿ ಪಾಕವಾಗದ ಭಾವಗಳೇ ಇಲ್ಲ ಅನುಭವಗಳೇ ಇಲ್ಲ”
..ಕೊನೆಗೆ.
ಆಗಲೇ ದೇಹತ್ಯಾಗ ಮಾಡಿರುವ ಕೃಷ್ಣ ಮಹಾಪ್ರಸ್ಥಾನದ ಹಾದಿಯಲ್ಲಿ ಕುಸಿದ ಆಕೆಯನ್ನ ಎತ್ತಿದ್ದಾನೆ. ಇಬ್ಬರೂ ಕುಳಿತು, ಕಳೆದು ಬಂದ ಬದುಕಿನ ವಿ಼ಶ್ಲೇಷಣೆಯಲ್ಲಿ ತೊಡಗಿದ್ದಾರೆ.
ಒಂದು ಹಂತದಲ್ಲಿ ಆಕೆ ಕೃಷ್ಣನನ್ನ ಕೇಳುತ್ತಾಳೆ.” ನೀನು ಸೃಷ್ಟಿಸಿದ ಈ ಜಗತ್ತಿನಲ್ಲಿ ಮುಂದೆ ನಾನು ಎಲ್ಲಿ, ಹೇಗೆ ಇರುತ್ತೇನೆ?
” ಎಲ್ಲ ಹೆಂಗಳೆಯರ ಎದೆಯಲ್ಲಿ ನೀನಿರುತ್ತೀ ಬೆಳಕಿನ ಕಿಡಿಯಾಗಿ: ಎದೆಗಳ ಹಾಡಾಗಿ”
ಸರ್ವೇ ಜನಾ: ಸುಖಿನೋ ಭವಂತು.
ಉರಿವ ಜ್ವಾಲೆಗಳನ್ನ ಸಂಕೇತಿಸುವ ಕಂಬಗಳಂಥ ಆಕೃತಿಗಳ ನಡುವೆ ಹುಟ್ಟಿಕೊಳ್ಳುವ ಈ ನಾಟಕ ಕುಮಾರವ್ಯಾಸ ಭಾರತ ಮತ್ತು ಜನಪದ ಕಾವ್ಯಗಳ ಆಯ್ದ ಭಾಗಗಳನ್ನ ಆಧರಿಸಿದ್ದು. ಮೇಳಗಳೂ, ಪಾತ್ರಗಳೂ ಕಾವ್ಯದ ಬಲದ ಮೇಲೆಯೇ ಕಥೆ ಕಟ್ಟುತ್ತ ಹೋಗುತ್ತವೆ.
ನಾಟಕದ ಪ್ರಾರಂಭದಲ್ಲಿ ದ್ರೌಪತಿ ಯ ಹುಟ್ಟಿನಲ್ಲೇ, ಮೇಳ ಹೊತ್ತು ತರುವ ಉರಿಯುವ ಲಾಟೀನುಗಳ ಮೂಲಕ ನಿರ್ದೇಶಕ ಗಣೇಶ ಮಂದಾರ್ತಿ, ಆಕೆ ಸಾಗಬೇಕಾದ ‘ ಅಗ್ನಿಪಥ’ ದ ಸೂಚನೆ ನೀಡಿಬಿಡುತ್ತಾರೆ. ಮುಂದೆ ಇದೇ ಲಾಟೀನುಗಳು ವಿವಿಧ ಭಾವಗಳನ್ನ ಹೊತ್ತು ತರುವ ದೀಪಗಳೂ, ಜ್ವಾಲೆಗಳೂ ಆಗುತ್ತ ಕಥೆಯ ಭಾಗವಾಗುತ್ತವೆ.
ಜನಪದ ಮಹಾಭಾರತದಲ್ಲಿ ಹಾಸುಹೊಕ್ಕಾಗಿಹೋಗಿರುವ ಚಿಕ್ಕ ಪುಟ್ಟ ಕಥೆಗಳೂ ನಾಟಕದೊಳಗೆ ಪೂರಕವಾಗಿ ಸೇರಿಕೊಂಡಿವೆ.
ದ್ರೌಪತಿಯ ಮಕ್ಕಳ ತಲೆ ಕಡಿದ ಅಶ್ವತ್ಥಾಮ ನನ್ನು ಕಾಳಿ ಉಗ್ರರೂಪದಲ್ಲಿ ಬಂದು ದಂಡಿಸುವಂಥದ್ದು, ಕೃಷ್ಣನನ್ನ ಕಂಡ ಆಕೆ ಆತನಲ್ಲಿ ಪ್ರೇಮನಿವೇದನೆ ಮಾಡುವಂಥ ಕೆಲವು ಘಟನೆಗಳಿವೆ.
ಐವರು ಗಂಡಂದಿರ ಕಥೆಯ ಭಾಗದಲ್ಲಿ ನಾರಾಯಣಿ ಯ ಉಪಕಥೆಯೂ ಬಂದುಹೋಗುತ್ತದೆ.
ದೃಶ್ಯ ಮತ್ತು ಶ್ರಾವ್ಯ ಎರಡೂ ವಿಭಾಗಗಳಲ್ಲೂ ಈ ರಂಗಪ್ರಯೋಗ ಶ್ರೇಷ್ಠವೇ. ಕುಮಾರವ್ಯಾಸನ ಕಾವ್ಯಗಳನ್ನು ನಿರರ್ಗಳವಾಗಿ ಹಾಡುವ ಮೇಳ ಜಾನಪದದ ಸಾಲುಗಳನ್ನೂ ಅಷ್ಟೇ ಚಂದವಾಗಿ ನಿರ್ವಹಿಸುತ್ತದೆ. ಆಗಾಗ ‘ ಆಹಾ’ ಎನಿಸಬಲ್ಲ ವಿನ್ಯಾಸಗಳಿವೆ. ರಾಜಮನೆತನದವರು ಜನಸಾಮಾನ್ಯರಾಗಿ ಬದುಕಿದ ಅಜ್ಞಾತವಾಸದ ಭಾಗವನ್ನು ಜಾನಪದದ ಶೈಲಿಯಲ್ಲಿ ಎತ್ತಿಕೊಂಡಿದ್ದು ನಿರ್ದೇಶಕರ ಜಾಣತನ. ಎರಡೂ ಕಾವ್ಯಮಾಧ್ಯಮಗಳು ಹದವಾಗಿ ಮಿಳಿತವಾಗಿರುವದೂ ಹೆಚ್ಚುಗಾರಿಕೆಯೇ.
ಅಭಿನಯದ ಮಟ್ಟಿಗೆ ಎಲ್ಲ ಕಲಾವಿದರೂ ಮುಂದೆಯೇ. ಲಯದ ಜಾಡು ಹಿಡಿದು ಹಾಕುವ ಹೆಜ್ಜೆಗಳಲ್ಲೂ, ಸುಂದರ ವಿನ್ಯಾಸದ ದೃಶ್ಯಗಳಲ್ಲೂ, ನಿರರ್ಗಳ ಮಾತುಗಾರಿಕೆಯಲ್ಲೂ ಸಮಸಮನಾಗಿಯೇ ಗಮನ ಸೆಳೆಯುತ್ತಾರೆ.
ಮೊದಲ, ಮಧ್ಯದ ಮತ್ತು ಕೊನೆಯ ಭಾಗಕ್ಕಾಗಿ ಮೂವರು ಕಲಾವಿದೆಯರನ್ನ ದ್ರೌಪತಿಯರನ್ನಾಗಿ ರಂಗಕ್ಕೆ ತರುತ್ತಾರೆ ಗಣೇಶ್. ದ್ರೌಪತಿ ಯ ವಿವಿಧ ಭಾವಗಳನ್ನ ಅಭಿವ್ಯಕ್ತಿಸುವಲ್ಲಿ ಮೂವರೂ ಸಶಕ್ತರೇ.
ವಾದ್ಯಗಳ ಬಳಕೆಯೂ ಚೆನ್ನಾಗಿದೆ ಆದರೂ ಕೆಲವು ಕಡೆ ತಾಳವಾದ್ಯಗಳ ಜೋರು ಶಬ್ದ ಸೂಕ್ಷ್ಮಭಾವಗಳನ್ನ ನುಂಗಿಹಾಕಿಬಿಟ್ಟಿದೆಯೇನೋ ಎನಿಸದಿರದು.
ಒಟ್ಟಾರೆ,
ಹೊಸ ವರ್ಷಕ್ಕೊಂದು ಒಳ್ಳೆಯ ನಾಟಕ ನೋಡಿದ ಖುಷಿಯಂತೂ ಇದೆ. ಇಂಥದೊಂದು ಅನುಭವಕ್ಕಾಗಿ ‘ ರಂಗಾಸ್ಥೆ’ ಗೆ ಧನ್ಯವಾದಗಳು.
– ಕಿರಣ ಭಟ್, ಹೊನ್ನಾವರ.