ರೋಹಿಣಿ…. ಪೋ… ಉಲಾಯಿ….. ನಾಟಕಕಾರ ದೇವದಾಸ್ ಕಾಪಿಕಾಡರ ಯಶಸ್ವೀ ನಾಟಕ ‘ಗಂಟೇತಾಂಡ್’ನಲ್ಲಿ ಒಂದು ಅಜ್ಜಿ… ಮೌನವಾಗಿ ಬುಸು ಗುಟ್ಟುತ್ತ, ನಿರ್ಗಮಿಸುತ್ತ… ನಗೆ ಉಕ್ಕಿಸುವ ರೋಹಿಣಿಯಕ್ಕನ ಪಾತ್ರದಲ್ಲಿ, ಜೀವ ತುಂಬಿದವರು ರೋಹಿಣಿಯಕ್ಕನೇ. ಆವರೇ ತುಳುವಿನ ಪ್ರಬುದ್ಧ ಕಲಾವಿದೆ. ಶ್ರೀಮತಿ ರೋಹಿಣಿ ಜಗರಾಂ…! ಅದೇ ರೋಹಿಣಿಯಕ್ಕ ಶಾರದಾ ಶಾಸ್ತ್ರಿಯವರ ಕೆಲವು ಪ್ರಯೋಗ ಕಂಡ ಚಾರಿತ್ರಿಕ ನಾಟಕ. ಸೀತಾರಾಮ್ ಕುಲಾಲ್ ನಿರ್ದೇಶನದ ‘ನಾಟ್ಯರಾಣಿ ಶಾಂತಲಾ’ದಲ್ಲಿ ಶಾಂತಲೆಯಾಗಿ ಗೆಜ್ಜೆಯ ಧ್ವನಿಯೊಂದಿಗೆ ನೃತ್ಯ ಮಾಡಿದವರು. ಅವರು ನೀಡುವ ನಾಟ್ಯಭಂಗಿ,,ಮುದ್ರೆ, ಚಿಮ್ಮಿದ ಗೆಡ್ಡೆಯ ಧ್ವನಿ, ಶಿಲ್ಪಿಯೊಬ್ಬನಿಗೆ ನೀಡುವ ಸ್ಫೂರ್ತಿಯ ಸಂದರ್ಭ. ಬೇಲೂರ ದೇವಾಲಯದ ಕಂಬ ಕಂಬಗಳಲ್ಲಿದ್ದ ಶಿಲಾ ಬಾಲಿಕೆಯರ ಕೆತ್ತನೆಗೆ ನೀಡಿದ ಮಾದರಿ ಶಾಂತಲೆಯ ಪಾತ್ರದಲ್ಲಿ. ಅರಸು ಉಡುಗೆಗೆ ಬೇಕಾದ ಮೈಮಾಟ ಹಾಗೂ ಮುಖ ವರ್ಚಸ್ಸು, ನೃತ್ಯ ಹಾಗೂ ಗಾಯನ ಪರಿಣತಿ ಪಡೆದವರು. ಪರಿಪೂರ್ಣವಾಗಿ ಅಲ್ಲದಿದ್ದರೂ ದೊರೆತ ಪಾತ್ರಕ್ಕೆ ಜೀವ ತುಂಬುವಷ್ಟು ನೃತ್ಯ ಹಾಗೂ ಸಂಗೀತ ತಿಳಿದಿದೆ ಎನ್ನುವ ಅವರನ್ನು ನಾನು ಮೊದಲು ಕಂಡಿದ್ದು ಹಿನ್ನೆಲೆ ಗಾಯಕಿಯಾಗಿ.
ತಂದೆಯವರಿಗಿದ್ದ ಸಂಗೀತ ಆಸಕ್ತಿ ತಾಯಿಯವರ ಕಲಾಭಿರುಚಿ…. ಒಬ್ಬಳೇ ಮಗಳನ್ನು ಸಂಗೀತ ಹಾಗೂ ನೃತ್ಯ ಪರಿಣತಿಗೆ ಕಳುಹಿಸಿದರು. ತನ್ನ ಜ್ಞಾನ ದಾಹಕ್ಕೆ ಪ್ರಚೋದನೆ ಸಿಕ್ಕಿದಂತೆ ಸಿಕ್ಕಿದಷ್ಟು ಕಲಿತುಕೊಂಡ ರೋಹಿಣಿಯಕ್ಕ ಮದುವೆಯಾದ ನಂತರ ಗೃಹಿಣಿಯಾಗಿ ಸ್ವಲ್ಪ ವರ್ಷ ಎಲ್ಲರಿಂದಲೂ ದೂರವಿದ್ದರು. ಅನಿರೀಕ್ಷಿತವಾಗಿ ಬಾಳಸಂಗಾತಿಯನ್ನು ಕಳೆದುಕೊಂಡ ಕಲಾವಿದರಿಗೆ ನೋವು ಕಟ್ಟಿಟ್ಟ ಬುತ್ತಿ ಎಂಬಂತೆ, ನೋವು ನುಂಗಲು ರಂಗ ಚಟುವಟಿಕೆಯತ್ತ… ನೃತ್ಯ ಗಾಯನ ದತ್ತ ಗಮನಹರಿಸಿದರು ರೋಹಿಣಿಯವರು. ಹಿನ್ನೆಲೆ ಗಾಯಕಿಯಾಗಿ ರೋಹಿಣಿಯಕ್ಕ ಹೆಸರು ಪಡೆದವರು. ಚೂರ್ಯರ ‘ಹೌದಾದ್ರೆ ಹೌದೆನ್ನಿ’ ಕನ್ನಡ ನಾಟಕದಿಂದ ಅಭಿನಯಕ್ಕೆ ಪಾದಾರ್ಪಣೆ ಮಾಡಿದ ಇವರು ಕೆ.ಎನ್. ಟೈಲರರ ‘ಏರೆನ್ಲಾ ನಂಬೊಡ್ಡಿ’, ‘ಕಂಡನಿ ಬೊಡೆದಿ’ ‘ದೇವೆರ್ ಕೊರ್ಪೆರ್’ ನಾಟಕಗಳಲ್ಲಿ ನಾಯಕಿಯಾಗಿ ಮಿಂಚಿದವರು. ಶ್ರೀ ಸೀತರಾಮ್ ಕುಲಾಲರ ನಿರ್ದೇಶನದ ನಾಟ್ಯರಾಣಿ ಶಾಂತಲಾ ಹಾಗೂ ಶ್ರೀಕೃಷ್ಣ ದೇವರಾಯ, ಚೆಲುವ ಚೆನ್ನಿಗರಾಯ ಹಾಗೂ ಭೂಮಿಕಾದ ಯಶಸ್ವಿ ಪ್ರಯೋಗದ ಚಕ್ರವ್ಯೂಹದಲ್ಲೂ ಮೌಲ್ಯಭರಿತ ಪಾತ್ರಗಳಲ್ಲಿ ಜೀವ ತುಂಬಿದವರು. ದೇವದಾಸ್ ಕಾಪಿಕಾಡರ ‘ಗಂಟೇತಾಂಡ್’, ‘ಈರ್ ದೂರ’, ವಿಠ್ಠಲ ಶೆಟ್ಟಿಯವರ ‘ಒಂಜೇ ಒರಿದಿನ ರಾಂಪನ ಕಂಪೌಂಡ್’ ಹಾಗೂ ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ‘ಒರಿಯೇ ಮಗೆ’ಯಲ್ಲೂ ಅಭಿನಯಿಸಿದ್ದಾರೆ. ‘ಮಲೆಯ ಮಕ್ಕಳು’ ಹಾಗೂ ‘ಹಗಲಿರುಳು’ ಕನ್ನಡ ಚಿತ್ರ ‘ಭಾಗ್ಯವಂತೆದಿ’ ತುಳುಚಿತ್ರಗಳಲ್ಲಿ ನಟಿಸಿದ ಮಂಗಳೂರು ಪ್ರತಿಭೆಗೆ ಪ್ರತಿಭೆ ಹಾಗೂ ವರ್ಚಸ್ಸಿಗೆ ಸರಿಹೊಂದುವ ಪಾತ್ರ ಸಿಕ್ಕುತ್ತಿರಲಿಲ್ಲ. ಅಂದರೆ ಇಂತಹ ಪ್ರತಿಭೆಗಳಿಗೆ ಸವಾಲೊಡ್ಡಿ ದುಡಿಸಿ ಗೆಲ್ಲಿಸಬಲ್ಲಂತಹ ರಂಗ ಚಟುವಟಿಕೆ ನಡೆಯುತ್ತಿರಲಿಲ್ಲ ಎನ್ನಬಹುದು. ಹೊಸ ಅಲೆಯ ಬೆಳಕು ಪ್ರಧಾನ ಹಾಗೂ ಸಾಂಕೇತಿಕ ನಾಟಕಗಳಲ್ಲೂ ಮಿಂಚಬಲ್ಲ ಪ್ರತಿಭೆಯವರು ರೋಹಿಣಿ ಜಗರಾಂ . ಯಾವುದೇ ತರದ ಪಾತ್ರಕ್ಕೇ ಎಂದೇ ಹಣೆಪಟ್ಟಿ ಕಟ್ಟಿಕೊಂಡವರಲ್ಲ. ಇವರಂತಹ ಸುಪ್ತ ಪ್ರತಿಭೆಗಳಿಗೆ ದೂರದರ್ಶನದಲ್ಲಿ ಅವಕಾಶ ಸಿಗಬೇಕಿತ್ತು. ನಾಟಕ ರಂಗದ ಯಾವುದೇ ರಾಜಕೀಯಕ್ಕೂ ಪ್ರತಿಕ್ರಿಯೆ ತೋರದೆ ಸ್ಥಿತ ಪ್ರಜ್ಞರಾಗಿದ್ದುಕೊಂಡು, ಸಹಕಲಾವಿದರ ಲೇವಡಿಗೂ… “ಪೋಪನಾ ಇಜ್ಜ..” ಎಂದು ಬೈದು ನಗುವ ರೋಹಿಣಿಯಕ್ಕನಿಗೆ ಈ ವಯಸ್ಸಿನಲ್ಲಿಯೂ ಅಭಿಮಾನಿಗಳಿಗೆ ಕಮ್ಮಿಯಿಲ್ಲ.
*ಉಮೇಶ್ ಬಂಗೇರ