ಉಡುಪಿ : ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಗಮಕ ವ್ಯಾಖ್ಯಾನಕಾರ, ಯಕ್ಷಗಾನ ಪ್ರಸಂಗಕರ್ತ ಹಾಗೂ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರನ್ನು ಡಾ. ನಾ. ದಾಮೋದರ ಶೆಟ್ಟಿ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಹತ್ತುಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾರ್ಚ್ ತಿಂಗಳ ಕೊನೆಯಲ್ಲಿ ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಸ್ಟೇಟ್‌ಬ್ಯಾಂಕ್ ಆಫ್ ಮೈಸೂರಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸಿಬ್ಬಂದಿ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದು ಭಾಷೆ, ವ್ಯಾಕರಣ, ಛಂದಃಶಾಸ್ತ್ರಗಳಲ್ಲಿ ವಿದ್ವತ್ತನ್ನು ಗಳಿಸಿ, ಗಮಕ ವ್ಯಾಖ್ಯಾನಕಾರರಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ. ಮಹಾಕಾವ್ಯಗಳ ಕವಿಯಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ವಾಗ್ಮಿಗಳಾಗಿ ಹೆಸರು ಮಾಡಿರುವ ಇವರು ಕಾವ್ಯ, ಕಥೆ, ಅನುವಾದ, ಸಂಶೋಧನೆ, ವಿಮರ್ಶೆ, ನಿಘಂಟು ರಚನೆ, ಗ್ರಂಥಸಂಪಾದನೆ, ಗೀತರೂಪಕ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಮಾಡಿದ್ದಾರೆ.
ಯಕ್ಷಗಾನ ಛಂದಸ್ಸು, ಪಳಂತುಳುಕಾವ್ಯ, ಶಬ್ದಶಾರದೆಯ ಸೆರಗು, ಯಕ್ಷಗಾನ ಕವಿಚರಿತ್ರೆ, ಪುರಂದರ ಮುಂಡಿಗೆ, ಕನಕ ಮುಂಡಿಗೆ, ಕನಕದಾಸರ ಕಾವ್ಯಭಾಷೆ, ಕುವೆಂಪು ಮತ್ತು ಅಧ್ಯಾತ್ಮ, ತಾವರೆಯ ತೇರು, ಛಂದೋವಸಂತ, ಯಕ್ಷಗಾನ ಪ್ರಸಂಗಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಇವರ ಕುವೆಂಪು ರಾಮಾಯಣ ಆಧಾರಿತ ‘ಶ್ರೀರಾಮಲೀಲಾದರ್ಶನಂ’ ಯಕ್ಷಗಾನ ಮಹಾಕಾವ್ಯವಾಗಿ ಮನ್ನಣೆ ಗಳಿಸಿದೆ. ‘ಕನಕತರಂಗಿಣಿ’ ‘ಶ್ರೀಪುರಂದರ ಮಹತಿ’, ‘ಶ್ರೀಲಪ್ರಭುಪಾದಚರಿತಾಮೃತಮ್’ ಮಹಾಕಾವ್ಯಗಳು ಆಧುನಿಕಕಾಲದ ಛಂದೋಬದ್ಧ ಮಹಾನ್ ಕೃತಿಗಳಾಗಿವೆ. ಯಕ್ಷಗಾನ ಛಂದಸ್ಸಿನ ಕುರಿತಾದ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ಇವರು ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅಖಿಲ ಕರ್ನಾಟಕ ಗಮಕ ಕಲಾಸಮ್ಮೇಳನದ ಅಧ್ಯಕ್ಷತೆ ಹಾಗೂ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರಿಗೆ ಒಲಿದು ಬಂದಿತ್ತು.
ಇವರ ಸಾಧನೆಗೆ ಗೌರವವೆಂಬಂತೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕನಕಗೌರವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರಾವಳಿ ರತ್ನ, ಗಮಕ ರತ್ನಾಕರ ಪ್ರಶಸ್ತಿ, ವಿದ್ಯಾಭೂಷಣ ಪ್ರಶಸ್ತಿ, ಅಕಳಂಕ ಪ್ರಶಸ್ತಿ, ಯಕ್ಷಮಂಗಳಾ ಕೃತಿ ಪ್ರಶಸ್ತಿ ಮೊದಲಾದ ಹತ್ತುಹಲವು ಪ್ರಶಸ್ತಿಗಳು ಲಭಿಸಿವೆ.