ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರು ಉಡುಪಿ ತಾಲೂಕು ಘಟಕದ ಮೂಲಕ ಸಂಯೋಜಿಸಿರುವ ‘ಜಿಲ್ಲಾ ಮಟ್ಟದ ಗಮಕ ಸಮ್ಮೇಳನ’ವು ದಿನಾಂಕ 23-03-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ನಡೆಯಲಿದೆ. ಈ ಗಮಕ ಸಮ್ಮೇಳನವನ್ನು ಬೆಳಿಗ್ಗೆ 9-00 ಗಂಟೆಗೆ ಉಡುಪಿ ಗಮಕಿ ಶ್ರೀಮತಿ ಯಾಮಿನಿ ಭಟ್ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಉಡುಪಿ ಪುತ್ತಿಗೆ ಶ್ರೀಕೃಷ್ಣ ಮಠ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಮತ್ತು ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದಂಗಳವರು ಉದ್ಘಾಟನೆ ಮಾಡಲಿದ್ದಾರೆ.
ಪೂರ್ವಾಹ್ನ 10.30ಕ್ಕೆ ಗಮಕ ವಾಚನ ವ್ಯಾಖ್ಯಾನ ‘ಸಾವಿತ್ರಿ ಚರಿತ್ರೆ’ ಕಾರ್ಕಳ ಹಿರಿಯಂಗಡಿಯ ಎಸ್.ಎನ್.ವಿ. ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಆಶ್ರಿತಾ ವಾಚನ ಹಾಗೂ ಮಣಿಪಾಲ ಮಾಧವ ಕೃಪಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸಂಹಿತಾ ವ್ಯಾಖ್ಯಾನ ನೀಡಲಿದ್ದಾರೆ. ಗಮಕ ವಾಚನ ವ್ಯಾಖ್ಯಾನ ‘ಪದ್ಮವ್ಯೂಹದಲ್ಲಿ ಅಭಿಮನ್ಯು’ ಇನ್ನಂಜೆ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಪ್ರಣಾದ ರಾವ್ ವಾಚನ ಮತ್ತು ಇನ್ನಂಜೆ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಪ್ರೌಢ ಶಾಲೆ ಆರನೇ ತರಗತಿ ವಿದ್ಯಾರ್ಥಿನಿ ಪ್ರಣತಿ ರಾವ್ ವ್ಯಾಖ್ಯಾನ ನೀಡಲಿದ್ದಾರೆ.
ಗಂಟೆ 11.30ಕ್ಕೆ ‘ಗಮಕದಲ್ಲಿ ನವರಸಧಾರೆ’ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಕಲಾಶ್ರೀ ಡಾ. ಗಮಕಿ ಎಂ.ಆರ್. ಸತ್ಯನಾರಾಯಣ ವಹಿಸಲಿದ್ದು, ವಾಚನಕಾರರಾಗಿ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ, ಶ್ರೀ ಯಜ್ಞೇಶ ಆಚಾರ್ಯ ಸುರತ್ಕಲ್, ಶ್ರೀ ವಿದ್ವಾನ್ ಶಂಭು ಭಟ್ ಕೋಟ, ಶ್ರೀಮತಿ ವಾಸಂತಿ ಆರ್. ಶೆಣೈ ಉಡುಪಿ ಹಾಗೂ ವ್ಯಾಖ್ಯಾನಕಾರರಾಗಿ ಡಾ. ಜ್ಯೋತಿ ಶಂಕರ್ ಮೈಸೂರು ಇವರುಗಳು ಭಾಗವಹಿಸಲಿರುವರು.
1-00 ಗಂಟೆಗೆ ‘ಗಮಕ ನೃತ್ಯ ರೂಪಕ’ವನ್ನು ಉಡುಪಿಯ ಗುಂಡಿಬೈಲು ಸಾಂಸ್ಕೃತಿಕ ಪ್ರತಿಷ್ಠಾನದ ಯುವ ಗಮಕಿ ಅಭಿರಾಮ ಭರತವಂಶಿ ಇವರು ಪ್ರಸ್ತುತ ಪಡಿಸಲಿದ್ದಾರೆ. ಗಂಟೆ 2.35ಕ್ಕೆ ಗಮಕ ವಾಚನ ವ್ಯಾಖ್ಯಾನ ‘ಶ್ರೀ ಕೃಷ್ಣ ರಾಯಭಾರ’ ಕಾಸರಗೋಡಿನ ಶ್ರೀಮತಿ ದಿವ್ಯಾ ಕಾರಂತ ವಾಚನ ಹಾಗೂ ಪಡುಬಿದ್ರಿಯ ಡಾ. ರಾಘವೇಂದ್ರ ರಾವ್ ವ್ಯಾಖ್ಯಾನ ನೀಡಲಿದ್ದಾರೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ.