ಮಂಗಳೂರು : ನಟ, ನಿರ್ದೇಶಕ, ಸಂಘಟಕ ವೇಣುಗೋಪಾಲ ಟಿ. ಕೋಟ್ಯಾನ್ (ವಿ.ಜಿ.ಪಾಲ್) ಅನಾರೋಗ್ಯದಿಂದ ದಿನಾಂಕ 20-03-2024ರ ಬುಧವಾರ ರಾತ್ರಿ ನಿಧನರಾದರು.
ತುಳು ರಂಗಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ್ದ ಅವರು ಹತ್ತಾರು ನಾಟಕಗಳಲ್ಲಿ ಹಾಗೂ ತುಳು ಮತ್ತು ಕನ್ನಡ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ‘ಕಲ್ಜಿಗದ ಕುರುಕ್ಷೇತ್ರ’ ತುಳು ನಾಟಕದ ಮೂಲಕ 1961ರಲ್ಲಿ ರಂಗಪ್ರವೇಶ ಮಾಡಿದ ವಿ.ಜಿ.ಪಾಲ್ ಹಾಸ್ಯ ಪಾತ್ರಕ್ಕೊಂದು ಮಾದರಿಯಾಗಿದ್ದರು. ಚಲನಚಿತ್ರಗಳು, ಕಿರುತೆರೆ, ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದರು. ತುಳು ನಾಟಕಗಳನ್ನು ಪ್ರಥಮ ಬಾರಿಗೆ ಕೊಲ್ಲಿ ರಾಷ್ಟ್ರದಲ್ಲಿ ಪ್ರದರ್ಶನ ನೀಡಿದ ಖ್ಯಾತಿ ಇವರದ್ದು. ಕನ್ನಡದ ‘ಜೀವನ್ಮುಖಿ’, ‘ಮಹಾನದಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಯ್ಯಮಲ್ಲಿಗೆ’, ‘ಭಾಗ್ಯವಂತೆದಿ’, ‘ಸತ್ಯ ಓಲುಂಡು’, ‘ಬಂಗಾರ್ ಪಟ್ಲೇರ್’, ‘ಮಾರಿಬಲೆ’, ‘ತುಡರ್’ ಸೇರಿ ಸುಮಾರು 2,000 ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕ ಹಾಗೂ ಸಿನೆಮಾಗಳಲ್ಲಿ ಅಭಿನಯಿಸಿದ ಹಿರಿಮೆ ಇವರದ್ದು. ಐ. ಟಿ. ಐ. ವಿದ್ಯಾಭ್ಯಾಸ ಪಡೆದಿದ್ದ ಅವರು ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಹಿರಿಯ ಸಹಾಯಕರಾಗಿ ನಿವೃತ್ತರಾಗಿದ್ದರು.
‘ಕರ್ನಾಟಕ ನಾಟಕ ಅಕಾಡೆಮಿ’ ಪ್ರಶಸ್ತಿ, ‘ತುಳು ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ. ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ‘ರಂಗ ಚಾವಡಿ’ಮೊಗವೀರ ಸಾಧನಾ ಪ್ರಶಸ್ತಿಗಳೂ ಸೇರಿದಂತೆ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ 75 ವರ್ಷ ತುಂಬಿದಾಗ ‘ಪಾಲ್ ಕಡಲ್’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಗಿತ್ತು. ’ರಂಗ ಸ್ಪಂದನ’ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ರಂಗಭೂಮಿ ತಂಡಗಳಿಗೆ ಹಾಗೂ ಕಲಾವಿದರಿಗೆ ವೇದಿಕೆ ಒದಗಿಸಿ ಕೊಟ್ಟಿದ್ದರು.
ತನಿಯಪ್ಪ ಕೋಟ್ಯಾನ್ ಹಾಗೂ ಸೀತಮ್ಮ ಪುತ್ರನ್ ದಂಪತಿಗಳ ಮಗನಾಗಿ ಜನಿಸಿದ ಇವರು ಸುಶೀಲಾರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಪುತ್ರರು ಒಬ್ಬ ಪುತ್ರಿ ಇದ್ದಾರೆ.