ಮಂಗಳೂರು : ‘ನಿರ್ದಿಗಂತ’ ವತಿಯಿಂದ ‘ನೇಹದ ನೇಯ್ಗೆ’ ನಾಟಕ, ಸಂಗೀತ, ಚಿತ್ರ, ಸಿನೆಮಾ, ಸಾಹಿತ್ಯಗಳ ಸಮ್ಮಿಲನದ ‘ರಂಗೋತ್ಸವ’ ಕಾರ್ಯಕ್ರಮವು ಚಿಕ್ಕಮಗಳೂರಿನ ಕಲಾಮಂದಿರ, ಬಯಲುರಂಗ ಸಂಭ್ರಮ ಮತ್ತು ಹೇಮಾಂಗಣಗಳಲ್ಲಿ ದಿನಾಂಕ 27-03-2024ರಿಂದ 01-04-2024ರ ತನಕ ಆಯೋಜಿಸಲಾಗಿದೆ.
ದಿನಾಂಕ 27-03-2024ರಂದು ಗಂಟೆ 5.30ಕ್ಕೆ ಕಲಾಮಂದಿರದಲ್ಲಿ ಕೃಷಿಕರು ಹಾಗೂ ನಟರಾದ ಕಿಶೋರ್ ಇವರಿಂದ ಈ ರಂಗೋತ್ಸವವು ಉದ್ಘಾಟನೆಗೊಳ್ಳಲಿದೆ. ನಿರ್ದಿಗಂತ ರಂಗ ತಂಡದವರಿಂದ ಹಾಡುಗಳ ಪ್ರಸ್ತುತಿ ಮತ್ತು ಗಂಟೆ 7-00ಕ್ಕೆ ಶ್ರವಣ ಹೆಗ್ಗೋಡು ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಪ್ರಸ್ತುತ ಪಡಿಸುವ ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ನಾಟಕದ ಪ್ರದರ್ಶನ ನಡೆಯಲಿದೆ.
ದಿನಾಂಕ 28-03-2024ರಂದು ಗಂಟೆ 9.30ಕ್ಕೆ ಹೇಮಾಂಗಣದಲ್ಲಿ ಸಂವಾದ 1ರಲ್ಲಿ ‘ರಂಗ ಸಂವಾದಗಳು’, ಸಂವಾದ 2ರಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಮತ್ತು ಶಶಿಧರ ಅಡಪ ಇವರಿಂದ ರಂಗವಿನ್ಯಾಸ ಪ್ರಾತ್ಯಕ್ಷಿಕೆ, 3-00 ಗಂಟೆಗೆ ಅಕ್ಷತಾ ಪಾಂಡವಪುರ ಇವರ ರಚನೆ, ನಿರ್ದೇಶನ ಹಾಗೂ ಅಭಿನಯದಲ್ಲಿ ‘ಲೀಕ್ ಔಟ್’ ನಾಟಕದ ಪ್ರದರ್ಶನ, ಗಂಟೆ 5.30ಕ್ಕೆ ಮೈಸೂರಿನ ರಿದಂ ಅಡ್ಡಾ ಇವರಿಂದ ‘ಲಯವಾದ್ಯ ಸಮ್ಮಿಳನ’ ಪ್ರಸ್ತುತಗೊಳ್ಳಲಿದೆ. ಸಂಜೆ ಗಂಟೆ 7.00ರಿಂದ ಕಲಾಮಂದಿರದಲ್ಲಿ ಶ್ವೇತಾರಾಣಿ ಎಚ್.ಕೆ. ನಿರ್ದೇಶನದಲ್ಲಿ ಚಿಕ್ಕಮಗಳೂರಿನ ಅಭಿನಯ ದರ್ಪಣ ಯುವವೇದಿಕೆಯವರು ಪ್ರಸ್ತುತ ಪಡಿಸುವ ‘ತಪ್ಪಿದ ಎಳೆ’ ನಾಟಕದ ಪ್ರದರ್ಶನ ನಡೆಯಲಿದೆ.
ದಿನಾಂಕ 29-03-2024ರಂದು ಗಂಟೆ 9.30ಕ್ಕೆ ಹೇಮಾಂಗಣದಲ್ಲಿ ಸಂವಾದ 1ರಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’, ಸಂವಾದ 2ರಲ್ಲಿ ‘ರಂಗತಜ್ಞರೊಂದಿಗೆ ಮಾತುಕತೆ’, ಗಂಟೆ 3.30ಕ್ಕೆ ‘RIP : Restlessness in Pieces’ ಡಾ. ಸವಿತಾ ರಾಣಿ ಅಭಿನಯದ ಏಕವ್ಯಕ್ತಿ ರಂಗಪ್ರಯೋಗ, ಗಂಟೆ 5.30ಕ್ಕೆ ಬಯಲರಂಗದಲ್ಲಿ ಮೂಡಿಗೆರೆಯ ಪೂರ್ಣಚಂದ್ರತೇಜಸ್ವಿ ಕಲಾ ತಂಡದವರಿಂದ ‘ಜನಪದ ಸಂಗೀತ’, ಗಂಟೆ 7.00ಕ್ಕೆ ಕಲಾಮಂದಿರದಲ್ಲಿ ಬೆಂಗಳೂರಿನ ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ಕೆ.ಪಿ. ಲಕ್ಷ್ಮಣ ರಚನೆ, ವಿನ್ಯಾಸ ಹಾಗೂ ನಿರ್ದೇಶನದ ‘ಬಾಬ್ ಮಾರ್ಲೆ ಫ್ರಾಂ ಕೋಡಿಹಳ್ಳಿ’ ಎಂಬ ನಾಟಕದ ಪ್ರದರ್ಶನ ನಡೆಯಲಿದೆ.
ದಿನಾಂಕ 30-03-2024ರಂದು ಗಂಟೆ 9.30ಕ್ಕೆ ಹೇಮಾಂಗಣದಲ್ಲಿ ಸಂವಾದ 1ರಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’, ಸಂವಾದ 2ರಲ್ಲಿ ‘ರಂಗ ತಜ್ಞರೊಂದಿಗೆ ಮಾತುಕತೆ’ ರಂಗ ಸಂಘಟಕರಾದ ಹೊನ್ನಾಳಿ ಚಂದ್ರಶೇಖರ ಇವರಿಂದ ರಂಗ ಸಂವಾದಗಳು, 2-00 ಗಂಟೆಗೆ ಕಲಾಮಂದಿರದಲ್ಲಿ ಉತ್ಸವ ಗೊನವಾರ ನಿರ್ದೇಶನದ ‘ಫೋಟೋ’ ಸಿನೆಮಾ ಪ್ರದರ್ಶನ, ‘ಸಿನೆಮಾ’ ನನ್ನ ಒಲವು ನಿಲುವುಗಳು ವಿಷಯದ ಬಗ್ಗೆ ಸಂವಾದ, ಗಂಟೆ 5.00ಕ್ಕೆ ಬಯಲರಂಗದಲ್ಲಿ ಚಿಕ್ಕಮಗಳೂರಿನ ದಿನ್ಮಹಾ ಕಲಾತಂಡದವರಿಂದ ‘ಬೀದಿ ನಾಟಕ’ ಹಾಗೂ 7-00 ಗಂಟೆಗೆ ಕಲಾಮಂದಿರದ ಹೊಸ ಆವರಣದಲ್ಲಿ ಮಂಗಳೂರಿನ ಆಸ್ತಿತ್ವ (ರಿ.) ಇವರಿಂದ ಅರುಣ ಲಾಲ್ ನಿರ್ದೇಶನದಲ್ಲಿ ‘ಮತ್ತಾಯ 22:39’ ನಾಟಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 31-03-2024ರಂದು ಗಂಟೆ 9.30ಕ್ಕೆ ಹೇಮಾಂಗಣದಲ್ಲಿ ಸಂವಾದ 1ರಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’, ಗಂಟೆ 11ರಿಂದ ವಿಚಾರ ಸಂಕಿರಣ, ಸಂಜೆ ಗಂಟೆ 6.00ಕ್ಕೆ ಬಯಲರಂಗದಲ್ಲಿ ಮಲ್ಲಿಗೆ ಸುಧೀರ್ ಮತ್ತು ತಂಡದವರಿಂದ ‘ರಂಗ ಸಂಗೀತ’ ಹಾಗೂ ಗಂಟೆ 7.00ರಿಂದ ಕಲಾಮಂದಿರದಲ್ಲಿ ಮೈಸೂರಿನ ‘ನಾವು’ ಪ್ರಸ್ತುತ ಪಡಿಸುವ ‘ಪ್ರತಿರೋಧದ ಹಾಡುಗಳು’, ಅರುಣ ಲಾಲ್ ರಚನೆ ಮತ್ತು ನಿರ್ದೇಶನದಲ್ಲಿ ಶಾಲಾರಂಗ ನಿರ್ದಿಗಂತ ಪ್ರಸ್ತುತ ಪಡಿಸುವ ‘ಬ್ಲಾಕ್ ಬಲೂನ್’ ನಾಟಕದ ಪ್ರದರ್ಶನ ನಡೆಯಲಿದೆ.
ದಿನಾಂಕ 01-04-2024ರಂದು ಗಂಟೆ 9.30ಕ್ಕೆ ಹೇಮಾಂಗಣದಲ್ಲಿ ಸಂವಾದ 1ರಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ರಂಗ ಸಂವಾದಗಳು ಮತ್ತು ಶಾಲಾರಂಗ ನಿರ್ದಿಗಂತ ಪ್ರಸ್ತುತ ಪಡಿಸುವ ‘ಮಾತಾಡಿ ಪ್ಲೀಸ್’ (ಆಮೆ ಕತೆ) ಪ್ರಾತ್ಯಕ್ಷಿಕೆ, ಗಂಟೆ 2-30ಕ್ಕೆ ಹೇಮಾಂಗಣದಲ್ಲಿ ರಂಗಭೂಮಿಯ ವರ್ತಮಾನ : ಮಾತುಕತೆ, ಗಂಟೆ 5-30ಕ್ಕೆ ‘ಬಹುವಾದ್ಯಗಳ ನುಡಿ ನಡಿಗೆ’, 7-00 ಗಂಟೆಗೆ ಕಲಾಮಂದಿರದಲ್ಲಿ ‘ನಿರ್ದಿಗಂತ’ ಪ್ರಸ್ತುತ ಪಡಿಸುವ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ‘ಮಂಟೇಸ್ವಾಮಿ ಕಾವ್ಯ ಪ್ರಯೋಗ’ ಪ್ರಸ್ತುತಗೊಳ್ಳಲಿದೆ.
ನಿರ್ದಿಗಂತದ ಕುರಿತು :
ಮೈಸೂರಿಗೆ ಸಮೀಪದಲ್ಲಿರುವ ಶ್ರೀರಂಗಪಟ್ಟಣದ ಕೆ. ಶೆಟ್ಟಿಹಳ್ಳಿ ಎನ್ನುವ ಗ್ರಾಮದಲ್ಲಿ ಲೋಕಪಾವನಿ ನದಿ ದಂಡೆಯ ಮೇಲೆ ನೆಲೆ ನಿಂತಿರುವ ನಿರ್ದಿಗಂತವು ರಂಗಭೂಮಿಯ ಕಾವುಗೂಡಾಗಿ ಮೈತಳೆದಿದೆ. ರಂಗಭೂಮಿಯನ್ನೂ ಒಳಗೊಂಡಂತೆ ಹಲವು ಬಗೆಯ ಸೃಜನಾತ್ಮಕ ಕ್ರಿಯೆಗಳ ಪೋಷಣೆಗೆ ಅಗತ್ಯವಾದ ಪರಿಸರ ಹಾಗೂ ಪರಿಕರಗಳ ಸೌಲಭ್ಯ ಹೊಂದಿರುವ ನಿರ್ದಿಗಂತವು ಈಗಾಗಲೇ ಯುವ ರಂಗಕಲಾವಿದರಿಗಾಗಿ ನಡೆದ ರಂಗಕಾರ್ಯಾಗಾರದ ನಾಟಕದ ಲೋಕಸಂಚಾರ, ಕಾಲೇಜು ವಿದ್ಯಾರ್ಥಿಗಳೆಡೆ ರಂಗಭೂಮಿಯನ್ನು ಒಯ್ಯುವ ಕಾವ್ಯರಂಗ ಸಂಚಾರ, ಶಿಕ್ಷಣ ಹಾಗೂ ರಂಗಭೂಮಿಯ ಸಮಾಸದ ಯತ್ನದಲ್ಲಿ ನಡೆಸುತ್ತಿರುವ ಶಾಲಾರಂಗ ಸಂಚಾರ ಹೀಗೆ ಹಲವು ಯೋಜನೆಗಳಲ್ಲಿ ತೊಡಗಿಕೊಂಡಿದೆ. ಹಲವು ರಂಗಪ್ರಯೋಗಗಳನ್ನೂ, ರಾಷ್ಟ್ರೀಯ, ಅಂತರಾಷ್ಟ್ರೀಯ ಕಾರ್ಯಾಗಾರಗಳನ್ನೂ, ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನೂ ಸಂಘಟಿಸಿದೆ.
ನೇಹದ ನೇಯ್ಗೆ :
ನಿರ್ದಿಗಂತ ರಂಗೋತ್ಸವದ ಶೀರ್ಷಿಕೆ ಇದು. ‘ನೇಹ’ ಪದವು ಸಂವಿಧಾನದ ಪೀಠಿಕೆಯಲ್ಲಿಯ ಮೈತ್ರಿ ಪದದಿಂದ ಪ್ರೇರಿತವಾಗಿದ್ದರೆ, ‘ನೇಯ್ದೆ’ ಪದವು ರಂಗಕಾರ್ಯಗಳ ಕಟ್ಟುವಿಕೆ, ಭಿನ್ನ ಕಾಲ ದೇಶಗಳ ಸಹೋದರತೆಯ ಹೆಣೆಯುವಿಕೆ ಮುಂತಾದ ಅರ್ಥಗಳನ್ನು ಹೊಂದಿದೆ. ನಾಟಕವೆಂದರೆ ಹಲವು ಸೌಂದರ್ಯ ವಿಜ್ಞಾನಗಳ ನೇಯ್ಗೆಯೂ ಆಗಿದೆ.
ಈ ರಂಗೋತ್ಸವದಲ್ಲಿ ಸ್ಥಳೀಯ ಜನಪದ ಮಹಾಕಾವ್ಯದ ನಾಯಕ ಮಂಟೇಸ್ವಾಮಿ, ಫುಟ್ಬಾಲ್ ಆಟಗಾರ ಓಝಿಲ್, ಹಾಡುಗಾರ ಬಾಬ್ ಮಾರ್ಲೆ, ಬರಹಗಾರ ಕಾಮು ಮುಂತಾದ ಹಲವರ ಕಥನಗಳು ನಾಟಕವಾಗಿ ಮೈದಾಳಲಿವೆ. ಜನಪದ ಹಾಡುಗಳ ಜತೆ ಪ್ರತಿಭಟನೆಯ ಹಾಡುಗಳೂ ಸೇರಿಕೊಳ್ಳಲಿದೆ. ಪ್ರೊಸೀನಿಯಂ ನಾಟಕಗಳ ಜತೆ ಬೀದಿನಾಟಕಗಳೂ, ಸಂಗೀತ ಪ್ರಯೋಗಗಳೂ, ಪಪೆಟ್ಗಳೂ ಒಟ್ಟಂದದಲ್ಲಿ ಎಲ್ಲವೂ ಸೇರಿಕೊಂಡು ಪ್ರಯೋಗಗೊಳ್ಳಲಿದೆ. ಹೀಗೆ ಹಲವು ಮನಸುಗಳ, ನಾಡುಗಳ, ಕನಸುಗಳ, ಪ್ರಕಾರಗಳ ನೇಯ್ಗೆಯಿದು. ಒಟ್ಟೂ ಸೇರುವುದರಲ್ಲಿಯೇ ಈ ಛಂದವಿದೆ.