ಮಂಗಳೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ದಿನಾಂಕ 19-03-2024 ಮತ್ತು 20-03-2024ರಂದು ಮಂಗಳೂರು ಮಿನಿ ವಿಧಾನಸೌಧದ ಬಳಿ ಇರುವ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಿರು ನಾಟಕ ಸ್ಪರ್ಧೆಯ ವಿಭಾಗದಲ್ಲಿ ಶ್ರೀ ಗಿರೀಶ್ ಕಾರ್ನಾಡರ ‘ನಾಗ ಮಂಡಲ’ (ಸ್ವತಂತ್ರ ರಂಗಾವಿಷ್ಕಾರ) ನಾಟಕವು ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿತು. ವಿನೂತನ ರಂಗ ಕಲ್ಪನೆಯೊಂದಿಗೆ ನಾಗಮಂಡಲ ನಾಟಕವನ್ನು ಮಂಗಳೂರು ವಿಭಾಗದ ಸರಕಾರಿ ನೌಕರರ ಸಂಘದ ಸದಸ್ಯರು ಮನೋಜ್ಞವಾಗಿ ಅಭಿನಯಿಸಿದ್ದರು. ಹಣ, ಮಧ್ಯ, ಮಾದಕತೆ ಅಧಿಕಾರಗಳ ಹಿಂದೆ ಓಡುವ ಯುವ ಸಮಾಜ, ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಜೀವನದ ಕೈ ಕನ್ನಡಿಯಾಗಿ ನಾಗಮಂಡಲ ನಾಟಕವನ್ನು ಕಾಸರಗೋಡಿನ ಯುವ ರಂಗ ನಿರ್ದೇಶಕ ಶ್ರೀ ಸದಾಶಿವ ಬಾಲಮಿತ್ರ ಇವರು ವಿಭಿನ್ನವಾಗಿ ನಿರ್ದೇಶಿಸಿದ್ದು, ಹರೀಶ್ ಕುಮಾರ್ ತಲಪಾಡಿಯವರ ನೇತೃತ್ವದ ಅಭಿನಯ ತಂಡದಲ್ಲಿ ವಸಂತ ರೈ ಬಿ.ಕೆ., ಪ್ರತಿಮ ಹೆಬ್ಬಾರ್, ಯಶೋದಾ ಸಿ. ಮಹಾಲಕ್ಮಿ, ಇಂದಿರಾ ಜಿ., ಜಯಲಕ್ಷ್ಮೀ ಕಳ್ಳರ ಕೋಡಿ, ಸುಜಾತ ಬೋಳಾರ, ರಾಮಕೃಷ್ಣ ಕಟ್ಟಿಮನಿ, ಯು.ಆರ್. ಶೆಟ್ಟಿ, ಸುಜಾತ ಮೊದಲಾದವರು ಮನೋಜ್ಞ ಅಭಿನಯ ನೀಡಿದ್ದರು. ಮೆಲ್ವಿನ್ ಪೆರ್ಮುದೆ ಸಂಗೀತ ಸಂಯೋಜನೆ ನೀಡಿದ್ದು, ಮೋಹನ್ ಸಿರಿರ್ಲಾಲ್, ಬಾಬು ಮಾಸ್ಟರ್, ಶಿವಪ್ರಸಾದ್ ಚೆರುಗೋಳಿ, ವಸಂತ ಮಾಸ್ಟರ್ ಮೂಡಂಬೈಲು, ದಿವಾಕರ ಬಲ್ಲಾಲ್, ಯಸ್.ಪಿ. ರಾವ್, ಅಶೋಕ್ ಕುಮಾರ್, ಬಾಲಕೃಷ್ಣ ಗಾಳಿಯಡ್ಕ ಮೊದಲಾದವರು ರಂಗಪರಿಕರಗಳಲ್ಲಿ ಸಹಕರಿಸಿದ್ದರು.