ನಾಲ್ಕೂವರೆ ದಶಕಗಳ ಪರಂಪರೆಯ ಹವ್ಯಾಸಿ ರಂಗ ತಂಡ ‘ಲಾವಣ್ಯ ಬೈಂದೂರು’ ಈ ವರ್ಷ ರಂಗೇರಿಸಿಕೊಂಡ ಕೃತಿ ರಾಜೇಂದ್ರ ಕಾರಂತರ ‘ನಾಯಿ ಕಳೆದಿದೆ’.
ಅಸಲಿಗೆ ಇಲ್ಲಿ ನಾಯಿ ಸಿಕ್ಕಿದೆ. ಹೌದು ಸಕಾಲಿಕ ವಿದ್ಯಮಾನದ ವಿದ್ಯಾವಂತ ಮಕ್ಕಳು ಅವರ ವೃತ್ತಿ ಆಸೆ ವಿದೇಶಗಳ ಗೊಂದಲ ಗೊಜಲುಗಳನ್ನು ಸಹಿಸಿ ಮೂಲ ಮನೆಯಲ್ಲಿ ದಿನ ಕಳೆವ ವೃದ್ಧ ತಂದೆ ತಾಯಿಯ ಅಳಲು ಆತಂಕ ಕಾಳಜಿಯ ಬಿಂಬಿಸುವ ಸಾಂಸಾರಿಕ ದೃಶ್ಯ ಮಾಲೆ ಇದು.
ಉನ್ನತ ಶಿಕ್ಷಣದಿಂದ ಆಧುನಿಕತೆಯ ಬದುಕಿಗೆ ಒಗ್ಗಿದ ಮಕ್ಕಳು ತಮ್ಮ ಪ್ರೀತಿಯ ನಾಯಿಗೆ ನೀಡೋ ಪ್ರೇಮ ಕಾಳಜಿ ಸ್ವತಃ ಪಾಲಕರಿಗೂ ನೀಡೋ ಮನಸ್ಸಿಲ್ಲದೆ ಸಾಗುವ ಕಥೆಯಲ್ಲಿ ಪ್ರತೀ ಪಾತ್ರವೂ ಸದ್ಯದ ಸಂಸಾರ ಚಿತ್ರ ಪರಿಚಯಿಸುತ್ತಲೇ ಸಾಗುತ್ತದೆ. ಮಗ ಸೊಸೆ ತಮ್ಮ ಸ್ವಂತ ಹಿರಿಯರನ್ನು ಅವರ ವಿಶ್ವಾಸವನ್ನೂ ಅನುಮಾನಿಸಿ ಅವಮಾನಿಸಿ ಅವರೊಂದಿಗಿರುವ ಪರಿಚಿತ ಪ್ರಾಮಾಣಿಕತನವನ್ನೂ ತುಚ್ಛೀಕರಿಸಿ ಕೊನೆಗೆ ಮಮತೆ ಮನುಷ್ಯತ್ವವೇ ಸತ್ಯ ಎಂದು ಅರಿವಾಗಲು ಈ ನಾಯಿಯ ಪಾತ್ರ ಕಲ್ಪನೆ ಅದ್ಬುತವಾಗಿದೆ.
ಬಿಗ್ ಬಾಸ್, ಪ್ರಾಣಿ ದಯಾ ಸಂಘ, ಭೂ ವ್ಯವಹಾರ, ಮಾಧ್ಯಮ ಸ್ಥಿತಿ ಇಂತಹ ಕೆಲವು ಸಾಮಾಜಿಕ ಚಟುವಟಿಕೆಗಳ ನಕಾರಾತ್ಮಕ ಸಂಗತಿಗಳನ್ನು ಬಹಳ ಅಚ್ಚುಕಟ್ಟಾಗಿ ಕಥೆಯಲ್ಲಿ ಮೇಳೈಸಿಕೊಂಡು ಬ್ರಾಹ್ಮಣ ಮುಸ್ಲಿಂ ಮನಸ್ಸುಗಳ ಸೂಕ್ಷ್ಮ ಸಂವೇದನೆಯನ್ನೂ ಬಹಳ ನಾಜೂಕಾಗಿ ಬೆರೆಸಿ ಕೊಂಡೊಯ್ದ ಪ್ರಯೋಗ ರಾಜೇಂದ್ರ ಕಾರಂತರ ಚಾಣಕ್ಷತೆ ಹಾಗೂ ಅಪಾರ ಅನುಭವದ ಪ್ರತಿಫಲನ ಎನ್ನಬಹುದು.
ಒಟ್ಟಿನಲ್ಲಿ ನಾಯಿಗಿಂತ ಕೀಳಾಗಿ ಅಪ್ಪ ಅಮ್ಮನನ್ನು ಕಾಣುವ ಮನಸ್ಥಿತಿ ತಲುಪಿದ ಹೈಫೈ ವಿದೇಶೀ ಶೈಲಿಯ ಆಧುನಿಕ ಯುವಕರ ಬದುಕನ್ನು ವಿಡಂಬನೆಯೊಂದಿಗೆ ಮಾರ್ಮಿಕವಾಗಿ ಹೆಣೆದ ರಂಗಕತೆ ಅದ್ಭುತ ಪರಿಣಾಮ ಬೀರಿದೆ. ಕೃತಿಕಾರ ಎಣಿಸಿದ ಬಯಸಿದ ಎಲ್ಲಾ ಸಂಗತಿಗಳೂ ಪ್ರೇಕ್ಷಕನಿಗೆ ತಲುಪಿಸುವಲ್ಲಿ ಲಾವಣ್ಯದ ಸಂಪೂರ್ಣ ಕಲಾವಿದರ ತಂಡ ಗೆದ್ದಿದೆ. ತಂತ್ರಜ್ಞರ ಪರಿಶ್ರಮ ರಂಗಪರಿಕರ ಬೆಳಕು ಮತ್ತು ಸಂಗೀತ ಎಲ್ಲವೂ ಗಮನಿಸುವಂತಿದೆ.
ವಿಶೇಷವಾಗಿ ಲಾವಣ್ಯ ಸ್ಥಳೀಯ ಹಲವು ಪ್ರತಿಭೆಗಳಿಗೆ ಬೆಳಕು ನೀಡಿದ ಸಂಸ್ಥೆ. ಈ ಸಾರಿ ಇನ್ನೂ ಎರಡು ಹೊಸ ಪ್ರತಿಭೆ ಪರಿಚಯಿಸಿ ಅವರಿಂದ ಶ್ರೀಮಂತ ಕಲಾವಂತಿಕೆ ಹೊರತಂದಿದೆ. ತಮ್ಮ ಮನೋಜ್ಞ ಅಭಿನಯದ ಮೂಲಕ ರಾಯರು ವಿಶಾಲಾಕ್ಷಿ ದಂಪತಿ ನಾಟಕದ ಜೀವಾಳವಾದರೆ ಮಗ ಸೊಸೆ ಪೂರ್ತಿ ಪ್ರತಿಭೆ ಮೆರೆದಿದ್ದಾರೆ. ಪ್ರಾಮಾಣಿಕ ಅಶೋಕ್ ಮನ ಮುಟ್ಟಿದರೆ ಮುನಿ ವೆಂಕಟಮ್ಮ ಬಹಳ ವಿಭಿನ್ನವಾಗಿ ತಮ್ಮತನದಿಂದ ಸೆಳೆಯುತ್ತಾರೆ. ಹರ್ಷ, ಸಾಬಿ, ಸಹಾಯಕ, ಚಿಕ್ಕಪ್ಪ, ವರದಿಗಾರ, ಭೂವ್ಯಾಪಾರಿ ಎಲ್ಲರೂ ತಮ್ಮ ಅವಕಾಶಕ್ಕೆ ನ್ಯಾಯ ಒದಗಿಸಿ ಇಡೀ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟು ಗೆಲ್ಲುತ್ತದೆ. ಹೀಗಾಗಿ ಹೇಳಿದೆ ಇದು ನಾಯಿ ಕಳೆದಿದೆ ಅಲ್ಲ ನಾಯಿ ಸಿಕ್ಕಿದೆ.
ಓಂಗಣೇಶ್ ಉಪ್ಪುಂದ, ಖ್ಯಾತ ವಿಮರ್ಶಕರು ಹಾಗೂ ಪ್ರಸಿದ್ಧ ಜಾದೂಗಾರರು