ಸುರತ್ಕಲ್: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ನ ಕೇಂದ್ರ ಮಹಿಳಾ ಘಟಕದ ಸಪ್ತಮ ವಾರ್ಷಿಕೋತ್ಸವವು ದಿನಾಂಕ 22-03-2024 ರಂದು ಸಂಜೆ ಘಂಟೆ 6.00ರಿಂದ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಟ್ಲ ಫೌಂಡೇಷನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಟ ಸತೀಶ್ ಶೆಟ್ಟಿ, ವಕೀಲ ನಾರಾಯಣ ಪಾಟಾಳಿ, ಕಲಾ ಪೋಷಕರಾದ ಶಕುಂತಳಾ ರಮಾನಂದ ಭಟ್, ಸಂಧ್ಯಾ ಜಯದೇವ ಐತಾಳ್, ಪಟ್ಲ ಫೌಂಡೇಷನ್ ಟ್ರಸ್ಟಿ ಸಹನಾ ರಾಜೇಶ್ ರೈ, ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷೆ ಜ್ಯೋತಿ ಪ್ರವೀಣ್ ಶೆಟ್ಟಿ, ಪಟ್ಲ ಪೌಂಡೇಷನ್ ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದ ನಿರ್ದೇಶಕಿ ಜ್ಯೋತಿ ಟಿ. ಎನ್. ಕಳಸ, ಧೀಶಕ್ತಿ ಮಹಿಳಾ ಯಕ್ಷ ಬಳಗದ ನಿರ್ದೇಶಕಿ ಪದ್ಮಾ ಕೆ. ಆರ್. ಆಚಾರ್ಯ ಪುತ್ತೂರು, ತಾಳಮದ್ದಲೆ ಕಲಾವಿದೆ ರೇವತಿ ನವೀನ್ ಕುಳಾಯಿ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಕೇಂದ್ರೀಯ ಘಟಕದ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿ, ಸಾಯಿಸುಮ ನಾವಡ ಕಾರ್ಯಕ್ರಮ ನಿರ್ವಹಿಸಿ, ಗೌರವಾಧ್ಯಕ್ಷೆ ಆರತಿ ಆಳ್ವ ವಂದಿಸಿದರು. ಬಳಿಕ ಪಾವಂಜೆ ಮೇಳದಿಂದ ‘ಧರ್ಮಸಿಂಹಾಸನ’ ಯಕ್ಷಗಾನ ಪ್ರದರ್ಶನಗೊಂಡಿತು.