ಬೆಂಗಳೂರು : ಶ್ರೀ ವಾಲ್ಮೀಕಿ ಗಮಕ ಪಾಠ ಶಾಲೆಯ ವತಿಯಿಂದ ಗಮಕಿ ಶ್ರೀಮತಿ ಪದ್ಮಿನಿ ರಾಮಮೂರ್ತಿ ಅವರ ಮನೆಯ ಆತ್ಮೀಯ ವಾತಾವರಣದಲ್ಲಿ ಕವಿ ಕುಮಾರ ವ್ಯಾಸ ಜಯಂತಿಯನ್ನು ದಿನಾಂಕ 24-03-2024ರ ಭಾನುವಾರ ಸಂಜೆ ಆಚರಿಸಲಾಯಿತು. ಗಮಕ ಭೀಷ್ಮ ದಿ. ಬಿ.ಎಸ್.ಎಸ್. ಕೌಶಿಕರ ಮಕ್ಕಳಾದ ಪದ್ಮಿನಿ ರಾಮಮೂರ್ತಿ ಮತ್ತು ಸತ್ಯವತಿ ಕೇಶವ ಮೂರ್ತಿಯವರ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಮೊದಲು ಕುಮಾರ ಚಿರಾಗ್ ಕೌಶಿಕನ ಪ್ರಾರ್ಥನೆ, ಶ್ಯಾಮಲಾ ಅವಧಾನಿ ಮತ್ತು ಅವರ ಶಿಷ್ಯರಿಂದ ಸೌಂದರ್ಯ ಲಹರಿಯ ಕೆಲವು ಸೋತ್ರಗಳ ಗಾಯನ ನಡೆಯಿತು.
ಕುಮಾರ ವ್ಯಾಸ ಭಾರತದ ಹನುಮ-ಭೀಮ ಸಮಾಗಮನದ ಭಾಗವನ್ನು ಶ್ರೀಮತಿಯರಾದ ಮಯೂರಿ ವಾಚನದಲ್ಲಿ ಮಾಧುರಿ ವ್ಯಾಖ್ಯಾನದಲ್ಲಿ ಹಿತಮಿತವಾಗಿಯೂ ಮಧುರವಾಗಿಯೂ ಎಲ್ಲರನ್ನೂ ಬೆರಗುಗೊಳಿಸಿದರು. ಸಹೋದರಿಯರಿಬ್ಬರೂ ಭವಿಷ್ಯದ ಉತ್ತಮ ಕಲಾವಿದರಾಗುವಲ್ಲಿ ಸಂದೇಹವಿಲ್ಲ. ಆನಂತರ ಹಿರಿಯರಾದ ಶ್ರೀಮತಿ ಜಯಲಕ್ಷ್ಮೀ ಗೋಪಿನಾಥ್, ಗೀತಾ ಪ್ರಭಾಕರ್, ವಿಶ್ವರೂಪ ದರ್ಶನವನ್ನು ಕೆಲವೇ ಪದ್ಯಗಳ ವಾಚನ, ವ್ಯಾಖ್ಯಾನಗಳ ಮೂಲಕ ಶ್ರೋತೃಗಳಿಗೆ ತಲುಪಿಸಿ ಭಾವಪರವಶರನ್ನಾಗಿಸಿದರು.
ಮುಂದೆ ಹೊಸಹಳ್ಳಿಯ ವಿದ್ವಾನ್ ಶ್ರೀ ವೆಂಕಟರಮಣ ಅವರ ವಯೊಲಿನ್ ವಾದನವೂ ರಂಜನೀಯವಾಗಿತ್ತು. ಶ್ರೀಮತಿ ಗಂಗಮ್ಮ ಕೇಶವ ಮೂರ್ತಿಗಳು ಎಂದಿನ ತಮ್ಮ ರಾಜಠೀವಿಯಿಂದ ಎರಡು ಪದ್ಯಗಳ ವಾಚನದ ಮೂಲಕ ಕವಿ ನಮನ ಮಾಡಿದರು. ವಿಶೇಷವಾಗಿ ವಿ. ವೆಂಕಟರಮಣ, ಜಯಲಕ್ಷ್ಮೀ ಗೋಪಿನಾಥ್, ಗೀತಾ ಪ್ರಭಾಕರ್, ಮಯೂರಿ, ಮಾಧವಿಯವರೊಡನೆ ಗಮಕ ಕಲಾ ಪೋಷಕರೂ, ಸಹೃದಯರೂ ಆದ ಶ್ರೀಮತಿ ಸರಸ್ವತೀ ಸಿದ್ದಪ್ಪ ಅವರನ್ನೂ ಅಭಿಮಾನ ಪೂರಕವಾಗಿ ಆದರದಿಂದ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 70ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.